ಚಿತ್ರದುರ್ಗ: ಪೌರ ನೌಕರರ ಸೇವೆ ಕಾಯಂಗೊಳಿಸುವಂತೆ ಆಗ್ರಹಿಸಿ ಜಿಲ್ಲಾ ಪೌರ ಕಾರ್ಮಿಕರ ಸಂಘದ ನೂರಾರು ಮಂದಿ ಸೋಮವಾರ ಪ್ರತಿಭಟನೆ ನಡೆಸಿದರು.
ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ನಂತರ ನಗರಸಭೆಯಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆ ನಡೆಸಿದರು. ಪೌರ ಕಾರ್ಮಿಕರು, ಪೌರ ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಡಳಿತ, ನಗರಸಭೆ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ರವಾನಿಸಿದರು.
ಸಂಘದ ಅಧ್ಯಕ್ಷ ಡಿ.ದುರುಗೇಶ್ ಮಾತನಾಡಿ, ರಾಜ್ಯದ ಪೌರ ಕಾರ್ಮಿಕರು, ನೌಕರರನ್ನು ಕಾಯಂಗೊಳಿಸುವುದಾಗಿ ರಾಮನಗರದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಈ ಹಿಂದೆ ನೀಡಿದ್ದ ಭರವಸೆ ಬೆಂಗಳೂರಿನ ಬಿಬಿಎಂಪಿಗೆ ಸೀಮಿತವಾಗಿದೆ. ಉಳಿದವರಿಗೇಕೆ ಅನ್ಯಾಯ? ಈ ಮಲತಾಯಿ ಧೋರಣೆ ಎಷ್ಟು ಸರಿ ಎಂದು ಕಿಡಿಕಾರಿದರು.
ರಾಜ್ಯದಲ್ಲಿನ ನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿಗಳಲ್ಲಿ ಜೀವನ ಭದ್ರತೆ ಇಲ್ಲದೆ, ಕಾರ್ಯನಿರ್ವಹಿಸುತ್ತಿರುವ ನೀರು ಸರಬರಾಜು ಮಾಡುವವರು, ವಾಹನ ಚಾಲಕರನ್ನು, ಪೌರ ಕಾರ್ಮಿಕರು ಹಾಗೂ ಪೌರ ನೌಕರರನ್ನು ಕಾಯಂಗೊಳಿಸಬೇಕು. ಇಲ್ಲದಿದ್ದರೆ, ಹೋರಾಟ ತೀವ್ರಗೊಳ್ಳಲಿದೆ ಎಂದು ಎಚ್ಚರಿಸಿದರು.
ಪೌರ ನೌಕರರ ಸಂಘದ ತಾಲೂಕು ಅಧ್ಯಕ್ಷೆ ರೇಣುಕಾ ಮಾತನಾಡಿ, ಪೌರ ಕಾರ್ಮಿಕರು, ನೀರು ಸರಬರಾಜುದಾರರು, ಹೊರ ಗುತ್ತಿಗೆ ನೌಕರರಿಗೆ ಮಾಸಿಕ ವೇತನ ಸರಿಯಾದ ಸಮಯಕ್ಕೆ ಸಿಗದ ಕಾರಣ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಆದ್ದರಿಂದ ನೇರ ಪಾವತಿಗೆ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.
ಜ್ಯೋತಿ ಸಂಜೀವಿನಿ ಯೋಜನೆ ಪೌರ ಕಾರ್ಮಿಕರಿಗೂ ಅನ್ವಯವಾಗಬೇಕು. ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿ ಮೇ 27ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ತಿಳಿಸಿದರು.
ಪೌರ ನೌಕರರ ಜಿಲ್ಲಾ ಸಂಘದ ಅಧ್ಯಕ್ಷ ಎಲ್.ಪಿ.ಲವ, ಜಗದೀಶ್, ರಾಜಣ್ಣ, ಕೆ.ಕುಮಾರ್, ಪದಾಧಿಕಾರಿಗಳಾದ ಪುಟ್ಟಪ್ಪ, ಮೋಕ್ಷದಾಯಿನಿ, ಆಪರೇಟರ್ ನವೀನ್ ಇತರರಿದ್ದರು.