ಚಿತ್ರದುರ್ಗ: ಪೌರ ಕಾರ್ಮಿಕರ, ನೌಕರರ ಸೇವೆ ಕಾಯಂಗೊಳಿಸುವುದು ಸೇರಿ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾ ಪೌರ ಕಾರ್ಮಿಕರ ಸಂಘದ ನೂರಾರು ಮಂದಿ ಮಂಗಳವಾರ ನಗರಸಭೆ ಆವರಣದಲ್ಲಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.
ಆಪರೇಟರ್‌ಗಳು, ವಾಹನ ಚಾಲಕರು, ಪೌರ ಕಾರ್ಮಿಕರು ಹಾಗೂ ಪೌರ ನೌಕರರನ್ನು ಒಳಗೊಂಡು ಗುತ್ತಿಗೆ, ಹೊರ ಗುತ್ತಿಗೆ ಆಧಾರದಡಿ ನೇಮಕವಾಗಿರುವವರು ಕರ್ತವ್ಯಕ್ಕೆ ಗೈರಾಗಿ ರಾಜ್ಯ ಸಂಘದ ಕರೆಯ ಮೇರೆಗೆ ಧರಣಿ ಬೆಂಬಲಿಸಿ ಪಾಲ್ಗೊಂಡರು.
ಇದಕ್ಕೂ ಮುನ್ನ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ನಂತರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ಶಾಂತಿಯುತ ಧರಣಿಗೆ ಸ್ಪಂದಿಸಿ, ಬೇಡಿಕೆಗಳನ್ನು ತ್ವರಿತವಾಗಿ ಈಡೇರಿಸುವಂತೆ ಒತ್ತಾಯಿಸಿದರು.
ಸಂಘದ ಅಧ್ಯಕ್ಷ ಡಿ.ದುರುಗೇಶ್ ಮಾತನಾಡಿ, ಸಿಎಂ ಸಿದ್ದರಾಮಯ್ಯ ಅವರು ರಾಮನಗರದಲ್ಲಿ ಈ ಹಿಂದೆ ರಾಜ್ಯದ ಪೌರ ಕಾರ್ಮಿಕರು, ನೌಕರರನ್ನು ಕಾಯಂಗೊಳಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಅದು ಬೆಂಗಳೂರಿನ ಬಿಬಿಎಂಪಿಗೆ ಸೀಮಿತವಾಗಿದೆ. ಉಳಿದವರು ಶ್ರಮಿಕ ವರ್ಗದವರಲ್ಲವೇ?, ಅವರೆಲ್ಲರಿಗೂ ಅನ್ಯಾಯ ಮಾಡುವುದು ಸರಿಯೇ?, ಈ ಮಲತಾಯಿ ಧೋರಣೆ ಸಹಿಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.
ಜ್ಯೋತಿ ಸಂಜೀವಿನಿ ಯೋಜನೆಯ ಸೌಲಭ್ಯ ಪೌರ ಕಾರ್ಮಿಕರಿಗೂ ಸಿಗಬೇಕು. ಅಲ್ಲದೆ, ಸೇವೆ ಕಾಯಂಗೊಳಿಸುವವರೆಗೂ ಧರಣಿ ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದರು.
ಮುಖಂಡ ರಾಜಣ್ಣ ಮಾತನಾಡಿ, ರಾಜ್ಯದಲ್ಲಿನ ನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿಗಳಲ್ಲಿ ಜೀವನ ಭದ್ರತೆ ಇಲ್ಲದೆ, ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರು, ನೀರು ಸರಬರಾಜು ಮಾಡುವ ಆಪರೇಟರ್‌ಗಳು, ನೀರಗಂಟಿಗಳು, ವಾಹನ ಚಾಲಕರು ಹಾಗೂ ಪೌರ ನೌಕರರನ್ನು ಕಾಯಂಗೊಳಿಸಬೇಕು. ಇಲ್ಲದಿದ್ದರೆ, ಹೋರಾಟ ತೀವ್ರಗೊಳ್ಳಲಿದೆ ಎಂದು ಎಚ್ಚರಿಸಿದರು.
ಪೌರ ನೌಕರರ ಸಂಘದ ತಾಲೂಕು ಅಧ್ಯಕ್ಷೆ ರೇಣುಕಾ ಮಾತನಾಡಿ, ಪೌರ ಕಾರ್ಮಿಕರು, ನೀರು ಸರಬರಾಜುದಾರರು, ಹೊರ ಗುತ್ತಿಗೆ ನೌಕರರಿಗೆ ಮಾಸಿಕ ವೇತನ ಸರಿಯಾದ ಸಮಯಕ್ಕೆ ಸಿಗದ ಕಾರಣ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಆದ್ದರಿಂದ ನೇರ ಪಾವತಿಗೆ ಕ್ರಮವಹಿಸಬೇಕು. ಸೇವೆ ಕಾಯಂಗೊಳಿಸಬೇಕು ಎಂದು ಕೋರಿದರು.
ಪೌರ ನೌಕರರ ಜಿಲ್ಲಾ ಸಂಘದ ಅಧ್ಯಕ್ಷ ಎಲ್.ಪಿ.ಲವ, ಜಗದೀಶ್, ಕೆ.ಕುಮಾರ್, ಪದಾಧಿಕಾರಿಗಳಾದ ಪುಟ್ಟಪ್ಪ, ಮೋಕ್ಷದಾಯಿನಿ, ಆಪರೇಟರ್ ಆರ್.ನವೀನ್, ಬಾಬುರೆಡ್ಡಿ, ಪಾಲಯ್ಯ, ಪರಶುರಾಮ್, ನವೀನ್, ರವಿಚಂದ್ರ ಇತರರಿದ್ದರು.