ಕಲಬುರಗಿ: ಮಹಾನಗರ ಪಾಲಿಕೆಯ ಎಲ್ಲ ಪೌರ ಕಾರ್ಮಿಕರ ಹುದ್ದೆಗಳನ್ನು ಖಾಯಂಗೊಳಿಸಬೇಕು, ಅಗತ್ಯ ಪೌರ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ನಗರದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)ದಿಂದ ಶನಿವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾಧಿಕಾರಿ ಕಚೇರಿ ಎದುರು ನೂರಾರು ಕಾರ್ಮಿಕರು ಬೃಹತ್ ಪ್ರತಿಭಟನೆ ನಡೆಸಿ, ಸಾಮೂಹಿಕ ಭಜನೆ ಮಾಡುತ್ತ ಆಕ್ರೋಶ ವ್ಯಕ್ತಪಡಿಸಿದರು. ದಿನೇ ದಿನೆ ನಗರ ಬೆಳೆಯುತ್ತಿದ್ದು, ಸೂಕ್ತ ಕಾರ್ಮಿಕರು ಇಲ್ಲ. ಜೀವನದ ಹಂಗು ತೊರೆದು, ನಿತ್ಯ ಆರೋಗ್ಯ ಸಮಸ್ಯೆ ಎದುರಿಸುತ್ತ ನಗರವನ್ನು ಸ್ವಚ್ಛವಾಗಿಡುವ ಕಾರ್ಮಿಕರಿಗೆ ಸೇವಾ ಭದ್ರತೆ ಒದಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪೌರಕಾರ್ಮಿಕ ಗುತ್ತಿಗೆ ಪದ್ದತಿ ರದ್ದುಗೊಳಿಸಬೇಕು, ರದ್ದಾಗುವರೆಗೆ ಮಾಸಿಕ ವೇತನ ವಿಳಂಬ ಮಾಡದೆ ಪ್ರತಿ ತಿಂಗಳು ಪೂರ್ಣ ಪಾವತಿ ಮಾಡಬೇಕು, ನೇರ ಪಾವತಿಯಡಿ ಕಾರ್ಮಿಕರಿಗೆ ವೇತನ ಪಾವತಿಯಾಗಬೇಕು, ಮಾಸಿಕ ಕನಿಷ್ಠ ೩೧ ಸಾವಿರ ರೂ. ಕೂಲಿ ಸಿಗುವಂತಾಗಬೇಕು, ಜಿಲ್ಲಾಡಳಿತ, ಪಾಲಿಕೆ ಆಯುಕ್ತರು ಜಂಟಿ ಸಭೆ ನಡೆಸಿ ತಾಂತ್ರಿಕ ಸಮಸ್ಯೆ ಬಗೆಹರಿಸಿ ಕಾರ್ಮಿಕರಿಗೆ ನೇಮಕ ಆದೇಶ ಜಾರಿ ಮಾಡಬೇಕು, ಕಾರ್ಮಿಕರ ಸಮಸ್ಯೆಗಳನ್ನು ಮಾನವೀಯ ನೆಲೆಯಲ್ಲಿ ಪರಿಗಣಿಸಿ, ಇತ್ಯರ್ಥಗೊಳಿಸಬೇಕು ಎಂದು ಆಗ್ರಹಿಸಿದರು.
ಅಧಿಕಾರಿಗಳು, ಗುತ್ತಿಗೆದಾರರು, ಮದ್ಯವರ್ತಿ ಸಿಬ್ಬಂದಿ ಕಾರ್ಮಿಕರ ಮೇಲೆ ಮಾಡುತ್ತಿರುವ ಶೋಷಣೆ ಕೂಡಲೇ ತಡೆಗಟ್ಟಬೇಕು, ಬೆದರಿಸುವ, ಧಮ್ಕಿ ಹಾಕುವ, ಕೆಲಸದಿಂದ ಕಿತ್ತು ಹಾಕುವ ಬೆದರಿಕೆ ಒಡ್ಡುವುದು ಕೂಡಲೇ ತಡೆಗಟ್ಟಬೇಕು, ವಾಸಯೋಗ್ಯ ವಸತಿ, ಉಚಿತ ಆರೋಗ್ಯ, ಶಿಕ್ಷಣ ವ್ಯವಸ್ಥೆ ಕಲ್ಪಿಸಬೇಕು, ಕಾರ್ಮಿಕರನ್ನು ಮಾತುಕತೆಗೆ ಕರೆದು, ಅಹವಾಲು ಆಲಿಸಬೇಕು, ಸೇವಾ ಹಿರಿತನ ಪರಿಗಣಿಸಿ ಆರು ತಿಂಗಳಿಗೊಮ್ಮೆ ತುಟಿ ಭತ್ಯೆ ನೀಡಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳ ಮನವಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು.
ಶ್ರೀಮಂತ ಬಿರಾದಾರ, ಶರಣಬಸಪ್ಪ ಮಮಶೆಟ್ಟಿ, ಕೆ.ನೀಲಾ, ಪಾಂಡುರAಗ ಮಾವಿನಕರ್, ಸುಧಾಮ ಧನ್ನಿ, ವಿರುಪಾಕ್ಷಪ್ಪ ತಡಕಲ್, ಮೇಘರಾಜ ಕಠಾರೆ, ಡಾ.ಮೀನಾಕ್ಷಿ ಬಾಳಿ, ಶರಣು ಸೇರಿದಂತೆ ನೂರಾರು ಪೌರ ಕಾರ್ಮಿಕರು ಇದ್ದರು.