ಜಿಲ್ಲೆ

ಪೋಸ್ಟರ್ ಮುದ್ರಿಸಲು ಅನುಮತಿ ಕಡ್ಡಾಯ

Bidar

ಬೀದರ್: ಈಗಾಗಲೇ ಜಿಲ್ಲೆಯಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದೆ. ಜಿಲ್ಲೆಯ ಎಲ್ಲ ಪ್ರಿಂಟಿಂಗ್ ಪ್ರೆಸ್ ನವರು ಯಾವುದೇ ರಾಜಕೀಯ ಪಕ್ಷ ಅಥವಾ ಅಭ್ಯರ್ಥಿಯ ಪೋಸ್ಟರ್ ಮತ್ತು ಬ್ಯಾನರ್ ಗಳನ್ನು ಮುದ್ರಿಸುವ ಮುನ್ನ ಆಯಾ ಅಭ್ಯರ್ಥಿಗಳಿಂದ ರಿಟರ್ನಿಂಗ್ ಆಫೀಸರ್ (ಆರ್. ಓ) ಅವರ ಅನುಮತಿ ಪತ್ರವನ್ನು ಕಡ್ಡಾಯ ಪಡೆಯುವಂತೆ ಜಿಲ್ಲಾಧಿಕಾರಿಗಳೂ ಆದ ಜಿಲ್ಲಾ ಚುನಾವಣಾಧಿಕಾರಿ ಗೋವಿಂದರಡ್ಡಿ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲ ಪ್ರಿಂಟಿಂಗ್ ಪ್ರೆಸ್ ಮಾಲೀಕರು ಮತ್ತು ಮುದ್ರಕರ ಸಭೆಯಲ್ಲಿ ಮಾತನಾಡಿ, ಚುನಾವಣೆ ಸಂಬಂಧ ಅಧಿಕೃತ ಅನುಮತಿ ಪತ್ರ ಪಡೆಯದೆ ಮುದ್ರಣ ಮಾಡಿದರೆ ಕಾನೂನು ಪ್ರಕಾರ ಕ್ರಮ ಅನಿವಾರ್ಯ ಎಂದರು.

ಪ್ರತಿ ಪೇಜ್ ನ ಮುದ್ರಣಕ್ಕೆ ಈಗಾಗಲೇ ಹಣ ನಿಗದಿಪಡಿಸಲಾಗಿದೆ. ಕರ ಪತ್ರದ ಕೆಳಗಡೆ ಮುದ್ರಣದ ಹೆಸರು ನಮೂದಿಸಬೇಕು. ಅಭ್ಯರ್ಥಿಯು ನಾಮಪತ್ರ ಸಲ್ಲಿಸುವವರೆಗೂ ಪಕ್ಷದ ಕರಪತ್ರಗಳು ಬರುತ್ತವೆ. ಅದರಲ್ಲಿ ಪಕ್ಷದ ಚಿಹ್ನೆಯನ್ನು ಹೊರತುಪಡಿಸಿ ಅಭ್ಯರ್ಥಿ ಹೆಸರು ಇರಬಾರದು. ಏ.13ರ ನಂತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವುದು ಪ್ರಾರಂಭವಾಗುತ್ತದೆ. ಆಗ ಅಭ್ಯರ್ಥಿಗಳು ತಮ್ಮಲ್ಲಿ ಕರಪತ್ರಗಳನ್ನು ಮುದ್ರಿಸಲು ಬಂದಾಗ ಅವರಿಂದ ಆರ್. ಓ ಅವರಿಂದ ಅನುಮತಿ ಪತ್ರ ಪಡೆದಿದ್ದರೆ ಮಾತ್ರ ಅವರ ಕರಪತ್ರಗಳನ್ನು ಮುದ್ರಿಸಬೇಕು ಎಂದು ಹೇಳಿದರು.

ಪ್ರಿಂಟಿಂಗ್ ಪ್ರೆಸ್ ನವರು ಮುದ್ರಿಸಿದ ಪ್ರತಿಗಳ ಒಂದು ಪ್ರತಿಯನ್ನು ಆರ್. ಓ ಅವರಿಗೆ ಕಳುಹಿಸಬೇಕು. ಯಾವುದೇ ಜಾತ್ರೆ ಮತ್ತು ಇತರ ಧಾರ್ಮಿಕ ಕಾರ್ಯಕ್ರಮಗಳಿಗೆ ಮುದ್ರಣವಾಗುವ ಕರಪತ್ರಗಳಲ್ಲಿ ಅಭ್ಯರ್ಥಿಗಳ ಭಾವಚಿತ್ರ ಇರಬಾರದು. ಜಿಲ್ಲೆಯ ಎಲ್ಲ ಪ್ರಿಂಟಿಂಗ್ ಪ್ರೆಸ್ ಮಾಲೀಕರು ಚುನಾವಣೆ ನೀತಿ ಸಂಹಿತೆಯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ನಿರ್ದೇಶನ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಲಂಗೋಟಿ ಮಾತನಾಡಿದರು. ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಬೀದರ್ ಪ್ರಿಂಟಿಂಗ್ ಪ್ರೆಸ್ ಅಸೋಸಿಯೇಷನ್ ಅಧ್ಯಕ್ಷ ರೇವಣಸಿದ್ದಯ್ಯ ಸ್ವಾಮಿ, ಉಪಾಧ್ಯಕ್ಷ ವಿಶ್ವನಾಥ ತೋರಣ ಇತರರಿದ್ದರು.