ಜಿಲ್ಲೆ

ಪೋಷಣ್ ಟ್ರ್ಯಾಕರ್‌ನಲ್ಲಿ ಅಪೌಷ್ಠಿಕ ಮಕ್ಕಳ ಮಾಹಿತಿ ನಮೂದಿಸಿ

ಚಿತ್ರದುರ್ಗ: ಅಪೌಷ್ಠಿಕ ಮಕ್ಕಳ ಸಂಖ್ಯೆ ಕಡಿಮೆ ಮಾಡುವುದು ಪೋಷಣ್ ಅಭಿಯಾನದ ಮುಖ್ಯಉದ್ದೇಶವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕ ಟಿ. ರಾಘವೇಂದ್ರ ಹೇಳಿದರು.

ನಗರದ ಜಿಲ್ಲಾ ಬಾಲಭವನದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಪೋಷಣ್ ಪಕ್ವಾಡ ಕಾರ್ಯಕ್ರಮದಲ್ಲಿ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರು, ಮೇಲ್ವಿಚಾರಕರು ಪೋಷಣ್ ತಂತ್ರಾಂಶದಲ್ಲಿ ಮಕ್ಕಳ ತೂಕ ಮತ್ತು ಎತ್ತರದೊಂದಿಗೆ, ತೀವ್ರ ಅಪೌಷ್ಟಿಕ ಮಕ್ಕಳ ಮಾಹಿತಿಯನ್ನು ಪೋಷಣ್ ಟ್ರ್ಯಾಕರ್‌ನಲ್ಲಿ ನಮೂದಿಸಬೇಕು ಎಂದು ತಿಳಿಸಿದರು.

ಅಪೌಷ್ಟಿಕ ಮಕ್ಕಳ ಸಂಖ್ಯೆ ಕಡಿಮೆ ಮಾಡುವುದು, ಗರ್ಭಿಣಿ, ಬಾಣಂತಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ದೃಷ್ಟಿಯಿಂದ ಪೋಷಣ್ ಅಭಿಯಾನ ಆರಂಭಿಸಲಾಗಿದೆ. ಅಭಿಯಾನದ ಟ್ರ್ಯಾಕರ್ ತಂತ್ರಾಂಶದ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯರು, ಮಹಿಳಾ ಮೇಲ್ವಿಚಾರಕಿಯರು ತಿಳಿದು ಫಲಾನುಭವಿಗಳ ಮಾಹಿತಿ ನಮೂದಿಸಬೇಕು. ಇದಕ್ಕಾಗಿ ಅಂಗವನಾಡಿ ಕಾರ್ಯಕರ್ತೆಯರು ಹಾಗೂ ಮೇಲ್ವಿಚಾರಕರಿಗೆ ತಾಲೂಕು ಮಟ್ಟದಲ್ಲಿ ಶಿಬಿರಗಳನ್ನು ಆಯೋಜಿಸುವಂತೆ ಉಪನಿರ್ದೇಶಕರಿಗೆ ಸೂಚಿಸಿದರು.

ಕಾರ್ಯಕ್ರಮದಲ್ಲಿ ಗರ್ಭಿಣಿಯರಿಗೆ ಸೀಮಂತ ನೆರವೇರಿಸಲಾಯಿತು. ಸುಕನ್ಯಾ ಸಮೃದ್ಧಿ ಯೋಜನೆ ಫಲಾನುಭವಿಗಳಿಗೆ ಪಾಸ್‌ಬುಕ್ ವಿತರಿಸಲಾಯಿತು. ಅಭಿಯಾನದ ಕ್ಯಾಲೆಂಡರ್ ಹಾಗೂ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿ, ಅಂಗವಿಕಲರಿಗೆ ಸಾಧನ ಸಲಕರಣೆಗಳನ್ನು ವಿತರಿಸಲಾಯಿತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್. ಬಣಕಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ನಿರೂಪಣಾಧಿಕಾರಿ ಎಸ್. ವಿಜಯಕುಮಾರ್, ಅಧಿಕಾರಿ ಎನ್. ಪವಿತ್ರಾ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿ. ಸವಿತಾ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ. ವೈಶಾಲಿ ಇತರರು ಇದ್ದರು.