ವಿರಾಜಪೇಟೆ ಗಾಂಧಿನಗರ ವಾರ್ಡ್‌ನಲ್ಲಿ ಆಯೋಜಿಸಿದ್ದ ಅಂಗನವಾಡಿ ಕೇಂದ್ರ ಉದ್ಘಾಟನೆ ಸಮಾರಂಭದಲ್ಲಿ ಮಹಿಳೆಯರಿಗೆ ಪೋಷಣಾ ಕಿಟ್ ವಿತರಿಸಲಾಯಿತು. ಕೆ.ಜಿ. ಬೋಪಯ್ಯ, ಮಂಡೇಪಂಡ ಸುಜಾ ಕುಶಾಲಪ್ಪ, ಸುಶ್ಮಿತಾ, ವಿನಾಂಕ್ ಕುಟ್ಟಪ್ಪ ಮತ್ತಿತರರು ಇದ್ದರು. 
ಜಿಲ್ಲೆ

ಪೋಷಣಾ ಕಿಟ್‌ಗಳಿಂದ ಅಪೌಷ್ಟಿಕತೆ ನಿವಾರಣೆ

ವಿರಾಜಪೇಟೆ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಅಂಗನವಾಡಿ ಕೇಂದ್ರಗಳ ಮೂಲಕ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಮಕ್ಕಳು ಹಾಗೂ ಬಾಣಂತಿಯರು ಪಡೆದುಕೊಳ್ಳಬೇಕು ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.


ಪಟ್ಟಣದ ಗಾಂಧಿನಗರ ವಾರ್ಡ್‌ನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ 16 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಅಂಗನವಾಡಿ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬಾಣಂತಿಯರಿಗೆ ಸರ್ಕಾರದಿಂದ ನೀಡುತ್ತಿದ್ದ ಪೌಷ್ಟಿಕ ಆಹಾರದ ಪೋಷಣಾ ಕಿಟ್‌ಗಳನ್ನು ಕರೊನಾ ನಂತರ ನಿಲ್ಲಿಸಲಾಗಿತ್ತು. ನಮ್ಮದು ಮಲೆನಾಡು ಪ್ರದೇಶವಾದ ಕಾರಣ ಬಾಣಂತಿಯರು ಮತ್ತು ಗರ್ಭಿಣಿಯರು ಹೊರಗಡೆ ತೆರಳಲು ಸಾಧ್ಯವಿಲ್ಲ. ಅಂಗವಾಡಿ ಮೂಲಕ ಕಿಟ್‌ಗಳನ್ನು ವಿತರಿಸಬೇಕು ಎಂದು ವಿಧಾನಸಭೆಯಲ್ಲಿ ನಾನು ಪ್ರಸ್ತಾಪಿಸಿದ ಫಲವಾಗಿ ಕರ್ನಾಟಕದ 7 ಜಿಲ್ಲೆಗಳಿಗೆ ಪೋಷಣಾ ಕಿಟ್‌ಗಳನ್ನು ನೀಡಲು ಸರ್ಕಾರ ಒಪ್ಪಿಗೆ ನೀಡಿತು. ಇದರಿಂದ ಅಪೌಷ್ಟಿಕತೆ ನಿವಾರಣೆಗೆ ಸಹಕಾರಿಯಾಗಿದೆ. ಸರ್ಕಾರದ ಮಹತ್ವದ ಯೋಜನೆಯಾದ ನಮ್ಮ ಕ್ಲಿನಿಕ್‌ನ್ನು ವಿರಾಜಪೇಟೆ ಮೊಗರಗಲ್ಲಿಯಲ್ಲಿ ಆರಂಭಿಸಲಾಗುತ್ತಿದೆ ಎಂದು ತಿಳಿಸಿದರು.


ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಬಡವರಿಗೆ ಅನುಕೂಲವಾಗುವಂತೆ ಅಂಗವಾಡಿಗಳ ಮೂಲಕ ಗರ್ಭಿಣಿ ಹಾಗೂ ಬಾಣಂತಿಯರಿಗೆ ಉತ್ತಮ ಯೋಜನೆಗಳನ್ನು ಕೈಗೊಂಡಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ವಿಶ್ವದಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ ಎಂದು ಹೇಳಿದರು.
ಗರ್ಭಿಣಿಯರಿಗೆ ಪೋಷಣಾ ಕಿಟ್‌ಗಳನ್ನು ವಿತರಿಸಲಾಯಿತು. ಪುರಸಭೆ ಅಧ್ಯಕ್ಷೆ ಸುಶ್ಮಿತಾ, ಉಪಾಧ್ಯಕ್ಷ ವಿನಾಂಕ್ ಕುಟ್ಟಪ್ಪ, ಸದಸ್ಯರಾದ ಸುನಿತಾ ಜೂನಾ, ದೇಚಮ್ಮ ಕಾಳಪ್ಪ, ಮುಖ್ಯಾಧಿಕಾರಿ ಚಂದ್ರಕುಮಾರ್ ಮತ್ತಿತರರು ಇದ್ದರು.