ಹಾಸನ: ಖಾಸಗಿ ಶಾಲೆಗಳಲ್ಲಿ ತಮ ಮಕ್ಕಳು ಓದುತ್ತಿದ್ದಾರೆಂಬುದನ್ನೇ ಪ್ರತಿಷ್ಠೆ ಎಂದು ಭಾವಿಸುವ ಪೋಷಕರು ಸರ್ಕಾರಿ ಶಾಲೆಯಲ್ಲಿ ಕಲಿತು ಸಾಧನೆಯ ಶಿಖರ ಏರಿದವರ ಕಥೆಗೆ ಕಿವಿಯಾಗಬೇಕೆಂದು ಕ್ರೀಡಾ ಯುವಜನ ಮತ್ತು ಸಬಲೀಕರಣ ಇಲಾಖೆ ಉಪನಿರ್ದೇಶಕ ಸಿ.ಕೆ.ಹರೀಶ್ ಅವರು ಹೇಳಿದರು.
ತಾಲೂಕಿನ ಬಸವಾಘಟ್ಟ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಸೋಮವಾರ ಏರ್ಪಡಿಸಿದ್ದ ’ಶಾಲೆಯ ಚಿತ್ತ ಸಮುದಾಯದತ್ತ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹಳ್ಳಿಗಳಲ್ಲಿ ಕೃಷಿ ಮಾಡಿಕೊಂಡಿರುವ ಪೋಷಕರು ಮಕ್ಕಳಿಗಾಗಿ ನಗರ ಸೇರಿ ದುಬಾರಿ ಶುಲ್ಕ ಭರಿಸಿ ವಿದ್ಯಾಭ್ಯಾಸ ಕೊಡಿಸುತ್ತಾರೆ. ಖಾಸಗಿ ಶಾಲೆಯಲ್ಲಿ ಓದುವುದಕ್ಕಿಂತ ಶಿಕ್ಷಣದ ಗುಣಮಟ್ಟ ಮುಖ್ಯ. ಆ ನಿಟ್ಟಿನಲ್ಲಿ ಗಂಭೀರ ಚರ್ಚೆಯಾಗಬೇಕು ಎಂದರು.
ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿರುತ್ತದೆ. ಅದರಲ್ಲೂ ಗ್ರಾಮೀಣ ವಿದ್ಯಾರ್ಥಿಗಳು ಬಹಳ ಸೂಕ್ಷ್ಮವಾಗಿರುತ್ತಾರೆ. ಮಕ್ಕಳು ಮಾಡುವ ತಪ್ಪನ್ನು ನೇರವಾಗಿ ಖಂಡಿಸುವ ಬದಲು ಪರ್ಯಾಯ ಮಾರ್ಗಗಳ ಮೂಲಕ ಅವರನ್ನು ತಿದ್ದುವ ಕೆಲಸವಾಗಬೇಕು. ಮಕ್ಕಳ ಕಲಿಕೆ ಸಕಾರಾತಕವಾಗಿರಲು ಹಳ್ಳಿ ವಾತಾವರಣ ನೆರವಾಗುತ್ತದೆ ಎಂದು ಹೇಳಿದರು.
ಸರ್ಕಾರಿ ಶಾಲೆಗಳ ಬಲವರ್ಧನೆಗೆ ಸಾರ್ವಜನಿಕರ ಸಹಕಾರ ಮುಖ್ಯ. ತಮ ಮಕ್ಕಳ ಕಲಿಕೆ ಕುರಿತು ಸಮಯ ಸಿಕ್ಕಾಗ ಶಾಲೆಗೆ ಭೇಟಿ ನೀಡಿ ವಿಚಾರಿಸಬೇಕು. ಬೇರೆ ಊರಿನಿಂದ ಬರುವ ಶಿಕ್ಷಕರಿಗೆ ಆತಸ್ಥೈರ್ಯ ತುಂಬುವ ಕೆಲಸವಾಗಬೇಕು. ಭಾವನಾತಕವಾಗಿ ಗ್ರಾಮಸ್ಥರು ಸಹಕಾರ ನೀಡಬೇಕು. ಶಾಲೆ ದೇವಸ್ಥಾನಗಳಿಗೆ ಸಮನವಾಗಿದ್ದು ಅದೇ ದೃಷ್ಟಿಯಲ್ಲಿ ಕಾಣಬೇಕೆಂದರು.
ಪ್ರೌಢ ಹಾಗು ಪಿಯುಸಿ ಹಂತ ವಿದ್ಯಾರ್ಥಿಗಳಿಗೆ ಮಹತ್ವ ಘಟ್ಟವಾಗಿದ್ದು ದುಶ್ಚಟಕ್ಕೆ ದಾಸರಾಗದೆ ವ್ಯಾಸಂಗದ ಕಡೆಗೆ ಗಮನ ಹರಿಸಬೇಕು. ನಮಗೆ ನಾವೇ ಮಾರ್ಗದರ್ಶಕರಾದಾಗ ಮಾತ್ರ ಸರಿ ದಾರಿಯಲ್ಲಿ ಹೋಗಲು ಸಾಧ್ಯವಾಗುತ್ತದೆ. ಶಿಕ್ಷಕರು ಸಹ ಸಮರ್ಪಣಾ ಭಾವದಿಂದ ಮಕ್ಕಳ ಏಳಿಗೆಗಾಗಿ ಶ್ರಮಿಸಬೇಕೆಂದು ಸಲಹೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎನ್.ಮಂಜುಳಾ ಅವರು ಮಾತನಾಡಿ, ಗ್ರಾಮೀಣ ವಿದ್ಯಾರ್ಥಿಗಳು ಎಂತಹುದೇ ಕಠಿಣ ಪರಿಸ್ಥಿತಿ ಎದುರಾದರೂ ಶಿಕ್ಷಣವನ್ನು ಮೊಟಕುಗೊಳಿಸಬಾರದು. ಕಠಿಣ ಶ್ರಮದಿಂದ ಮಾತ್ರ ಯಶಸ್ಸು ಸಾಧ್ಯ. ಅಡ್ಡದಾರಿಗೆ ಇಳಿಯದೆ ಪರಿಶ್ರಮದ ಮೂಲಕ ಉನ್ನತ ಸ್ಥಾನ ತಲುಪಬೇಕು. ಎಸ್.ಎಸ್.ಎಲ್‌ಸಿ ಬಳಿಕ ವೃತ್ತಿಪರ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು. ಜೊತೆಗೆ ಆಧುನಿಕ ಕೃಷಿ ವಿಚಾರಗಳನ್ನು ಅರಿತು ವ್ಯವಸಾಯ ಕ್ಷೇತ್ರದಲ್ಲೂ ತೊಡಗಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಶಾಲೆ ಮುಖ್ಯಶಿಕ್ಷಕಿ ಎಚ್.ಪಿ. ಪುಷ್ಪಾ ಅವರು ಮಾತನಾಡಿ, ಸರ್ಕಾರಿ ಶಾಲೆ ಮಕ್ಕಳಿಗೆ ಆತಸ್ಥೈರ್ಯ, ಶಿಸ್ತು, ಸಂಸ್ಕಾರ, ಸ್ವಾವಲಂಬಿ ಬದುಕು ಕಲಿಸಿಕೊಡುತ್ತದೆ. ವಿದ್ಯೆಯ ಜೊತೆಗೆ ಬದುಕುವ ದಾರಿಯನ್ನೂ ಹೇಳಿಕೊಡುವ ಸರ್ಕಾರಿ ಶಾಲೆಗಳಿಂದ ಪೋಷಕರು ಹಾಗು ಮಕ್ಕಳು ವಿಮುಖರಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಬಸವಾಘಟ್ಟ ಪ್ರೌಢ ಶಾಲೆ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಕಳೆದ ಹಲವು ವರ್ಷಗಳಿಂದ ಶೇ. 100 ಸಾಧನೆ ಮಾಡಿದೆ. ಖಾಸಗಿ ಶಾಲೆಗಳಿಗಿಂತಲೂ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟ ಉತ್ತಮವಾಗಿರುತ್ತದೆ. ಆದರೆ ಖಾಸಗಿ ಶಾಲೆಗಳ ವ್ಯಾಮೋಹದಿಂದ ಪೋಷಕರು ಹೊರಬರುತ್ತಿಲ್ಲ ಎಂದರು.
ಹಾಸನ ಆಕಾಶವಾಣಿ ಕಾರ್ಯಕ್ರಮ ಮುಖ್ಯಸ್ಥ ಡಾ.ವಿಜಯ ಅಂಗಡಿ, ದೈಹಿಕ ಶಿಕ್ಷಣಾಧಿಕಾರಿ ವೇದಣ್ಣ ಮಾತನಾಡಿದರು. ಮಾಜಿ ಸೈನಿಕರಾದ ಅಣ್ಣಪ್ಪ, ಲೋಹಿತ್ ಅವರನ್ನು ಸನಾನಿಸಲಾಯಿತು. ಮುಖ್ಯ ಶಿಕ್ಷಕಿ ಎಚ್.ಪಿ.ಪುಷ್ಪಾ ಅವರು 40 ವಿದ್ಯಾರ್ಥಿಗಳಿಗೆ ಕ್ರೀಡಾ ಸಮವಸ್ತ್ರ ವಿತರಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಅಶೋಕ್, ಪ್ರಕಾಶ್, ಸಿಆರ್‌ಪಿ ವೀಣಾ, ಚೈತ್ರಾವತಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ವೇತಾ ಇತರರು ಇದ್ದರು.