ಜಿಲ್ಲೆ

ಪೋಲಿಯೋ ಮುಕ್ತ ರಾಷ್ಟ್ರಕ್ಕಾಗಿ ಅಭಿಯಾನ

ಚಿತ್ರದುರ್ಗ: ಅಕ್ಕಪಕ್ಕದ ದೇಶಗಳಲ್ಲಿ ಈಗಲೂ ಪೋಲಿಯೋ ಪ್ರಕರಣ ಪತ್ತೆಯಾಗುತ್ತಿವೆ. ಮುಂಜಾಗ್ರತಾ ಕ್ರಮವಾಗಿ ನಮ್ಮಲ್ಲೂ ಅಭಿಯಾನ ನಡೆಯುತ್ತಿದೆ ಎಂದು ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಹೇಳಿದರು.

ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಜಿಲ್ಲಾಸ್ಪತ್ರೆ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಭಾರತ ಪೋಲಿಯೋ ಮುಕ್ತ ರಾಷ್ಟ್ರವಾಗಿಸಲು ಅಭಿಯಾನ ಮುಂದುವರೆದಿದೆ. 2009ರಿಂದ ರಾಜ್ಯದಲ್ಲಿ ಯಾವುದೇ ಪ್ರಕರಣವಿಲ್ಲ. ಇದೇ ನಮಗೆ ದೊಡ್ಡ ಹೆಮ್ಮೆಯ ಸಂಗತಿ. ನಾಡಿನ ವೈದ್ಯರು, ಶುಶ್ರೂಷಕರು, ಆರೋಗ್ಯ ಇಲಾಖೆ ಸಿಬ್ಬಂದಿ ಸಾಧನೆ ಮರೆಯುವಂತಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸದೃಢ ಆರೋಗ್ಯವಂತ ಮಕ್ಕಳು ಇರಬೇಕು ಎಂಬ ಉದ್ದೇಶದಿಂದ ಸರ್ಕಾರಗಳು ಕಾರ್ಯಕ್ರಮ ರೂಪಿಸಿವೆ. ಈ ನಿಟ್ಟಿನಲ್ಲಿ ಕಳೆದ ಅನೇಕ ದಿನಗಳಿಂದ ಇಲಾಖೆ ಶ್ರಮಿಸುತ್ತಿದ್ದು, ಪಾಲಕರ ಸಹಕಾರವೂ ಮುಖ್ಯ ಎಂದು ಸಲಹೆ ನೀಡಿದರು.

ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾತನಾಡಿ, ಜಿಲ್ಲೆಯಲ್ಲಿ 1,35,105 ಮಕ್ಕಳಿಗೆ ಪೋಲಿಯೋ ಹನಿ ಹಾಕುವ ಗುರಿ ಹೊಂದಲಾಗಿದೆ. ಇದಕ್ಕಾಗಿ 1,084 ಬೂತ್ ನಿರ್ಮಿಸಿದ್ದು, ಮಾ. 6ರವರೆಗೆ ಮನೆ-ಮನೆಗೆ ಭೇಟಿ ನೀಡಿ 5 ವರ್ಷದೊಳಗಿನ ಮಕ್ಕಳಿಗೆ ಸಿಬ್ಬಂದಿ ಹಾಕಲಿದ್ದಾರೆ. ಪಾಲಕರು ಇದಕ್ಕೆ ಕೈಜೋಡಿಸಿ ಎಂದು ಮನವಿ ಮಾಡಿದರು.

ಡಾ.ತೋಯಿಜಾಕ್ಷಿ ಬಾಯಿ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಡಿ.ಎಂ.ಅಭಿನವ್, ಟಿಎಚ್‌ಒ ಡಾ.ಬಿ.ವಿ.ಗಿರೀಶ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ರವೀಂದ್ರ, ವೈದ್ಯಕೀಯ ಕಾಲೇಜಿನ ಆಡಳಿತಾಧಿಕಾರಿ ಡಾ.ಯುವರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಇತರರಿದ್ದರು.