ಜಿಲ್ಲೆ

ಪೋಲಿಯೋ ಮಾದರಿ ಕರೊನಾ ತಡೆ ಅಗತ್ಯ

ಬೀದರ್: ಪೋಲಿಯೋ ಮಾದರಿಯಲ್ಲೇ ಕರೊನಾ ಸೋಂಕು ತಡೆಗೆ ಶ್ರಮಿಸಬೇಕಾದ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಹೇಳಿದರು.

ಕಲ್ಯಾಣ ಜೋನ್‌ ರೋಟರಿ ಕ್ಲಬ್ ನಿಂದ ವಿಶ್ವ ಪೋಲಿಯೋ ದಿನ ನಿಮಿತ್ತ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ವಿಶ್ವ ಮಟ್ಟದಲ್ಲಿ ಪೋಲಿಯೋ ನಿಯಂತ್ರಿಸುವಲ್ಲಿ ಅಂತಾರಾಷ್ಟ್ರೀಯ ರೋಟರಿ ಸಂಸ್ಥೆ ಪಾತ್ರ ಮಹತ್ವದ್ದಾಗಿದೆ. ಇದೇ ರೀತಿ ಕರೊನಾ ಮುಕ್ತ ಮಾಡಬೇಕು. ಕರೊನಾಮುಕ್ತಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಕೋರಿದರು.

ಅಂತಾರಾಷ್ಟ್ರೀಯ ರೋಟರಿ ಜಿಲ್ಲೆ 3160 ಗವರ್ನರ್ ಚಿನ್ನಪ್ಪ ರೆಡ್ಡಿ ಮಾತನಾಡಿ, ರೋಟರಿ ಕ್ಲಬ್ ವಿಶ್ವದ 200ಕ್ಕೂ ಹೆಚ್ಚು ದೇಶಗಳಲ್ಲಿ ಸಾಮಾಜಿಕ ಚಟುವಟಿಕೆಗಳಲ್ಲಿ ನಿರತವಾಗಿದೆ. 1988ರಲ್ಲಿ ಪೋಲಿಯೋ ಮುಕ್ತಿಗೆ ಸಂಕಲ್ಪ ತೊಟ್ಟ ರೋಟರಿ ಈ ಕಾರ್ಯದಲ್ಲಿ ಬಹುತೇಕ ಯಶಸ್ವಿಯಾಗಿದೆ ಎಂದರು.

ರೋಟರಿ ಜಿಲ್ಲೆ 3160 ಪೋಲಿಯೋ ಪ್ಲಸ್ ಸಮಿತಿ ಅಧ್ಯಕ್ಷ ಬಸವರಾಜ ಧನ್ನೂರ ಮಾತನಾಡಿ, ರೋಟರಿ ಸಂಸ್ಥೆಯು 32 ವರ್ಷಗಳಲ್ಲಿ ಪೋಲಿಯೋ ನಿರ್ಮೂಲನೆಗೆ 15 ಸಾವಿರ ಕೋಟಿ ರೂ| ಖರ್ಚು ಮಾಡಿದೆ. ರೋಟರಿ ಶ್ರಮದಿಂದಾಗಿ ಪ್ರತಿವರ್ಷ ಸರಾಸರಿ 3.5 ಲಕ್ಷ ಮಕ್ಕಳಲ್ಲಿ ಕಂಡು ಬರುತ್ತಿದ್ದ ಪೋಲಿಯೋ ಈಗ ಕೇವಲ 129 ಮಕ್ಕಳಲ್ಲಿದೆ. ಪೋಲಿಯೋ ವಿಶ್ವದ ಎರಡು ದೇಶಗಳಲ್ಲಿ ಮಾತ್ರ ಉಳಿದುಕೊಂಡಿದೆ ಎಂದು ತಿಳಿಸಿದರು.

ಭಾರತ ಪೋಲಿಯೋ ಮುಕ್ತವಾದರೂ ನೆರೆ ದೇಶಗಳಿಂದ ಮತ್ತೆ ಬರುವ ಸಾಧ್ಯತೆ ಇದೆ. ಹೀಗಾಗಿ ಇಡೀ ವಿಶ್ವದಿಂದ ಪೋಲಿಯೋ ತೊಲಗುವವರೆಗೆ 5 ವರ್ಷದ ಒಳಗಿನ ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೋ ಲಸಿಕೆ ಹಾಕಿಸಬೇಕು ಎಂದು ಮನವಿ ಮಾಡಿದರು.

ಡಿಎಚ್ಒ ಡಾ.ವಿ.ಜಿ. ರೆಡ್ಡಿ, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ಕೃಷ್ಣಾರೆಡ್ಡಿ, ಐಎಂಎ ಅಧ್ಯಕ್ಷ ಡಾ.ವಿ.ವಿ. ನಾಗರಾಜ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ರೋಟರಿ ಕ್ಲಬ್ ಅಧ್ಯಕ್ಷ ಹಾವಶೆಟ್ಟಿ ಪಾಟೀಲ್, ಕೆ.ಸಿ. ಸೇನನ್, ಡಾ.ಜಗದೀಶ ಪಾಟೀಲ್, ರಂಜೀತ್ ಪಾಟೀಲ್, ಶೇಖರ ರಾಗಾ, ಎಸ್.ಬಿ. ಚಿಟ್ಟಾ, ಸೂರ್ಯಕಾಂತ ರಾಮಶೆಟ್ಟಿ, ಡಾ.ಕಪಿಲ್ ಪಾಟೀಲ್, ಸುಷ್ಮಾ ಪಾಟೀಲ್, ಮೇನಕಾ ಪಾಟೀಲ್, ಯುವರಾಜ ಜಾಧವ್, ಸಾಗರ ನಾಯಕ್, ಡಾ.ಸಾಗರ ಬಸನಾಳೆ, ಡಾ.ಸದಾನಂದ ಪಾಟೀಲ್, ಭಾರತಿ ಚನಶೆಟ್ಟಿ, ಸುನೈನಾ ಗುತ್ತಿ ಇತರರಿದ್ದರು.

ರೋಟರಿ ವೃತ್ತದಿಂದ ಆರಂಭಗೊಂಡ ಜಾಥಾ ಜನರಲ್ ಕಾರ್ಯಪ್ಪ ವೃತ್ತ, ಅಂಬೇಡ್ಕರ್ ವೃತ್ತ, ಶಿವಾಜಿ ವೃತ್ತ, ಹರಳಯ್ಯ ವೃತ್ತದ ಮೂಲಕ ಹಾಯ್ದು ಐಎಂಎ ಹಾಲ್ಗೆ ತಲುಪಿ ಸಮಾರೋಪಗೊಂಡಿತು.