ಜಿಲ್ಲೆ

ಪೋಡಿ ಮುಕ್ತ ಅಭಿಯಾನಕ್ಕಾಗಿ ಆ್ಯಪ್ ರಚನೆ

ಭದ್ರಾವತಿ: ರೈತರ ಜಮೀನಿನ ದಾಖಲೆಗಳ ಬಗ್ಗೆ ಪೋಡಿ ಮುಕ್ತ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಅಭಿಯಾನದ ಮೂಲಕ ರೈತರಿಗೆ ತ್ವರಿತವಾಗಿ ಅಗತ್ಯ ದಾಖಲೆಗಳನ್ನು ಡಿಜಿಟಲೀಕರಣದ ಮೂಲಕ ನೀಡಲಾಗುವುದು. ಇದರಿಂದ ರೈತರು ನಿತ್ಯ ಕಚೇರಿಗೆ ಅಲೆಯುವ ಅಗತ್ಯವಿಲ್ಲ. ಅದಕ್ಕಾಗಿ ವಿಶೇಷ ಆ್ಯಪ್ ರಚನೆ ಮಾಡಲಾಗಿದೆ ಎಂದು ತಹಸೀಲ್ದಾರ್ ಪರುಸಪ್ಪ ಕುರುಬರ ಹೇಳಿದರು.

ಸರ್ಕಾರಿ ಜಮೀನನ್ನು ಉಳುಮೆ ಮಾಡುತ್ತಿರುವವರು ತಮ್ಮ ಜಮೀನಿನ ಅಗತ್ಯ ದಾಖಲೆಗಳನ್ನು ಗ್ರಾಮ ಲೆಕ್ಕಾಕಾರಿಗಳ ಬಳಿ ನೀಡಿದರೆ ಅದರ ಆಧಾರದ ಮೇಲೆ ಪೋಡಿ ಮಾಡಿಕೊಡಲು ಅನುಕೂಲವಾಗುವುದು. ದಾಖಲೆಗಳು ಇಲ್ಲದಿದ್ದರೆ ಅವರ ಬಳಿ ಇರುವ ಮಾಹಿತಿ ಆಧಾರದ ಮೇಲೆ ಡಿಸಿಯವರಿಗೆ ಕಳುಹಿಸಿ ಅವರ ಆದೇಶದ ಮೇರೆಗೆ ಪೋಡಿ ಮಾಡಿಕೊಡಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಮೀನು ಸರ್ವೇ ಪೋಡಿಗಾಗಿ 800 ಅರ್ಜಿಗಳು ಬಂದಿದ್ದು, ಅವುಗಳಲ್ಲಿ ಈಗಾಗಲೆ 300ಕ್ಕೂ ಹೆಚ್ಚು ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಇನ್ನುಳಿದ ಅರ್ಜಿಗಳನ್ನು 6 ತಿಂಗಳಲ್ಲಿ ಹಂತಹಂತವಾಗಿ ಪೂರ್ಣಗೊಳಿಸಲಾಗುವುದು ಎಂದರು.

ಕುಟುಂಬದ ಹಿರಿಯರು ಮರಣ ಹೊಂದಿದ ಸಂದರ್ಭದಲ್ಲಿ ಅವರ ವಾರಸುದಾರರಿಗೆ ಜಂಟಿ ಖಾತೆ ಮಾಡಿಕೊಡಲು ಹಲವಾರು ತೊಡಕುಗಳಿವೆ. ಅದರ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದೆ. ಇದನ್ನು ನಿವಾರಿಸಲು ಈ ಬಗ್ಗೆಯೂ ಸಹ ಆ್ಯಪ್ ರಚಿಸಲಾಗಿದೆ. ಅದರಲ್ಲಿ ಮರಣ ಪತ್ರ, ವಂಶವೃಕ್ಷ, ಆಧಾರ್ ಕಾರ್ಡ್, ರೇಷನ್ ಕಾರ್ಡ್, ಆರ್‌ಟಿಸಿ, ಮ್ಯೂಟೇಷನ್ ದಾಖಲೆಗಳನ್ನು ಪರಿಶೀಲಿಸಿ ಪೌತಿ ಖಾತೆಗಳನ್ನು ಮಾಡಲಾಗುತ್ತದೆ ಎಂದರು.

ಈ ಎಲ್ಲ ಕೆಲಸಗಳನ್ನು ಮಾಡಲು ಗ್ರಾಮ ಲೆಕ್ಕಿಗರಿಗೆ ಅಗತ್ಯ ಕಚೇರಿ ಇಲ್ಲದ ಕಾರಣ ಅವರನ್ನು ಭೇಟಿ ಮಾಡುವುದು ಕಷ್ಟ ಆಗುತ್ತಿತ್ತು. ಅಲ್ಲದೆ ಅವರ ಕಚೇರಿಗೆ ಅಲೆಯಬೇಕಿತ್ತು. ಆದರೆ ಈಗ ಸರ್ಕಾರದ ಯೋಜನೆ ಅನ್ವಯ ಗ್ರಾಪಂ ಕಚೇರಿ ಅಥವಾ ನಾಡ ಕಚೇರಿಗಳಲ್ಲಿ ಕೊಠಡಿ ಒದಗಿಸಲಾಗುವುದು. ಇದರಿಂದ ಅವರ ಕೆಲಸ ಕಾರ್ಯಗಳು ಸುಗಮವಾಗುತ್ತದೆ ಎಂದರು.

ಭೂ ದಾಖಲೆಗಳನ್ನು ಸಂರಕ್ಷಿಸಲು 6 ಜನ ಡಾಟಾ ಎಂಟ್ರಿ ಆಪರೇಟರ್‌ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಭೂ ದಾಖಲೆಗಳಿಗಾಗಿ ರೆಕಾರ್ಡ್ ರೂಂಗೆ ಅಲೆಯಬೇಕಿತ್ತು. ಆದರೆ ಈಗ ಡಿಜಿಟಲೀಕರಣ ಮಾಡಿದ ಕಾರಣ ಒಂದು ತಿಂಗಳ ಕಾಲಾವಯಲ್ಲಿ ಅವರ ದಾಖಲೆ ಅಕೃತವಾಗಿ ದೊರೆಯಲಿದೆ. ಪ್ರತಿದಿನ 10 ಸಾವಿರ ಪುಟಗಳ ಸ್ಕ್ಯಾನ್ ಮಾಡಲಾಗುತ್ತಿದೆ ಎಂದರು.

ಲ್ಯಾಂಡ್‌ಬೀಟ್ ಯೋಜನೆಯಡಿ ಸರ್ಕಾರಿ ಭೂಮಿಗಳಾದ ಗೋಮಾಳ, ಕೆರೆ, ಗ್ರಾಮಠಾಣ ಇತ್ಯಾದಿಗಳನ್ನು ದಾಖಲು ಮಾಡಿ ಅದರ ಗಡಿ ಗುರುತಿಸುವಿಕೆ ನಿಗದಿಪಡಿಸಲಾಗುತ್ತಿದೆ. ಇದರಿಂದ ಅಕ್ರಮ ಒತ್ತುವರಿ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ಅಕ್ರಮ ಒತ್ತುವರಿ ಆಗಿದ್ದರೆ ಅದು ಸಹ ದಾಖಲೆಯಲ್ಲಿ ನಮೂದಾಗುತ್ತದೆ. ನಂತರ ಸರ್ಕಾರದ ಆದೇಶದ ಮೇರೆಗೆ ತೆರವುಗೊಳಿಸುವ ಕಾರ್ಯಾಚರಣೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.