ಗಂಗಾಧರ್ ಬೈರಾಪಟ್ಟಣ ರಾಮನಗರ
ಪೊಲೀಸ್ ಇಲಾಖೆ ಎಂದರೆ ಭಯ, ಮತ್ತೊಂದೆಡೆ ಬೇಸರ ಎರಡೂ ಇದೆ. ಕೆಲವು ಸಿಬ್ಬಂದಿ ಮಾಡುವ ಎಡವಟ್ಟಿಗೆ ಹಾಗೂ ಠಾಣೆಗೆ ತೆರಳಿದಾಗ ಆಗುವ ಕೆಲವು ಮುಜುಗರದಿಂದಾಗಿ ಸಾರ್ವಜನಿಕರಿಗೆ ಬೇಸರ ಹುಟ್ಟುವುದು ಸಾಮಾನ್ಯವಾಗಿದೆ.
ಆದರೆ, ಇದೀಗ ಜಿಲ್ಲೆಯ ಪೊಲೀಸ್ ಇಲಾಖೆಯನ್ನು ಜನಸ್ನೇಹಿಯಾಗಿಸುವ ಮತ್ತು ಇಲಾಖೆಯ ಪ್ರತಿ ಸಿಬ್ಬಂದಿಯೂ ಗೌರವಯುತವಾಗಿ ಕಾರ್ಯನಿರ್ವಹಿಸುವಂತೆ ಮಾಡುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಸಂತೋಷ್ ಬಾಬು ಸದ್ದಿಲ್ಲದೆ ಕಾರ್ಯಮಗ್ನರಾಗಿ, ಯಶಸ್ಸನ್ನೂ ಸಾಧಿಸಿದ್ದಾರೆ.
ಪ್ರಕರಣಗಳ ವಿಲೇವಾರಿ: ಜಿಲ್ಲೆಯಲ್ಲಿ ವಿವಿಧ ಕಾರಣಗಳಿಗಾಗಿ ಸಾಕಷ್ಟು ಪ್ರಕರಣಗಳು ವರ್ಷಗಳೇ ಕಳೆದರೂ ವಿಲೇವಾರಿ ಆಗದೆ ಠಾಣೆಯ ಕಡತದಲ್ಲಿಯೇ ಬಾಕಿ ಉಳಿದುಕೊಂಡಿದ್ದವು. ಆದರೆ ಕಡತ ಯಜ್ಞದಂತೆ ಪ್ರಕರಣಗಳ ಯಜ್ಞವನ್ನೂ ಮಾಡಲು ಸೂಚನೆ ನೀಡಿದ್ದ ಎಸ್ಪಿ, ಎಲ್ಲ ಪ್ರಕರಣಗಳನ್ನು ಗಡುವಿನಲ್ಲಿ ಇತ್ಯರ್ಥಪಡಿಸುವಂತೆ ಸೂಚನೆ ನೀಡಿದ್ದರು. ಇದರ ಪರಿಣಾಮವಾಗಿ ಜಿಲ್ಲೆಯಲ್ಲಿ ಕಳೆದ 2 ವರ್ಷಗಳಿಂದ ಬಾಕಿ ಉಳಿದಿದ್ದ ಸುಮಾರು 1850ಕ್ಕೂ ಹೆಚ್ಚು ಪ್ರಕರಣಗಳು ಇತ್ಯರ್ಥಗೊಂಡಿದ್ದು, ಬಗೆಹರಿಸಲಾಗದ, ಇನ್ನೂ ವಿಚಾರಣೆ ಹಂತದಲ್ಲಿರುವ ಸುಮಾರು 150 ಪ್ರಕರಣಗಳು ಮಾತ್ರ ಉಳಿದಿವೆ.
ತನಿಖಾಧಿಕಾರಿ ಭಾರ ಇಳಿಕೆ: ಯಾವುದೇ ಠಾಣೆಯಲ್ಲಿ ಪ್ರಕರಣ ದಾಖಲಾದರೂ ತನಿಖೆಗೆ ತಗುಲುವ ವೆಚ್ಚವನ್ನು ಇಲಾಖೆಯೇ ಭರಿಸಬೇಕು ಎನ್ನುವ ನಿಯಮವೇನೋ ಇದೆ. ಆದರೆ ಇದು ಕೇವಲ ಕಾಗದದಲ್ಲಿ ಉಳಿದು, ತನಿಖೆಯ ವೆಚ್ಚವನ್ನು ತನಿಖಾಧಿಕಾರಿ ಭರಿಸಬೇಕಾಗಿತ್ತು. ಇದರಿಂದಾಗಿ ಪೊಲೀಸರು ಸಾರ್ವಜನಿಕರ ಮೇಲೆ ಹಣಕ್ಕಾಗಿ ಒತ್ತಡ ಹೇರಬೇಕಾದ ಅನಿವಾರ್ಯತೆ ಸಹ ನಿರ್ಮಾಣಗೊಂಡಿತ್ತು. ಇದಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಎಸ್ಪಿ ಸಂತೋಷ್ ಬಾಬು, ಪ್ರತಿ ಠಾಣೆಯಲ್ಲಿ ಯಾವುದೇ ಪ್ರಕರಣದ ತನಿಖೆ ಕೈಗೊಂಡರೂ ಅಂತಹ ಪ್ರಕರಣದ ತನಿಖೆಗೆ ತಗಲುವ ವೆಚ್ಚದ ರಸೀದಿ ನೀಡಿದರೆ ಹಣವನ್ನು ಕೂಡಲೇ ಮಂಜೂರು ಮಾಡುವ ಕಾರ್ಯಕ್ಕೂ ಚಾಲನೆ ಕೊಟ್ಟಿರುವುದು ಜಿಲ್ಲಾ ಪೊಲೀಸ್ ಠಾಣೆಗಳ ಸಿಬ್ಬಂದಿಯ ಮೆಚ್ಚುಗೆಗೂ ಪಾತ್ರವಾಗಿದೆ.
ಕೆಳ ಹಂತದ ಸಿಬ್ಬಂದಿಗೆ ಮೆಚ್ಚುಗೆ: ಪೊಲೀಸ್ ಇಲಾಖೆ ಜನಸ್ನೇಹಿ ಆಗಬೇಕಾದರೆ ಕೆಳ ಹಂತದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯ ಶ್ರಮ ಪ್ರಮುಖ ಕಾರಣ ಎನ್ನುವುದನ್ನು ಅರಿತು, ಇದೀಗ ಪ್ರತಿಯೊಬ್ಬ ಸಿಬ್ಬಂದಿಯೂ ಗೌರವಯುತವಾಗಿ ಕೆಲಸ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಕಾನ್ಸ್ಟೆಬಲ್, ಹೆಡ್ ಕಾನ್ಸ್ಟೆಬಲ್ ಹಾಗೂ ಎಸ್ಐ ಹುದ್ದೆಯಲ್ಲಿರುವ ಸಿಬ್ಬಂದಿ ಜವಾಬ್ದಾರಿ ಹೆಚ್ಚಿರುತ್ತದೆ. ಇವರೇ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚುವುದು, ಬಂಧನದಂತಹ ಕಠಿಣವಾದ ಕೆಲಸವನ್ನು ಮಾಡುತ್ತಿದ್ದು, ಇವರಿಗೆ ಗೌರವ ಸಿಗಬೇಕು ಎನ್ನುವುದು ಎಸ್ಪಿ ಇರಾದೆ.
ಠಾಣಾಧಿಕಾರಿಗೆ ರೈಡ್ ಹೊಣೆ: ಈ ಮೊದಲು ಅಕ್ರಮ ಜೂಜು, ವೇಶ್ಯಾವಾಟಿಕೆ, ಮದ್ಯ ಮಾರಾಟದಂತಹ ಬಹುತೇಕ ಪ್ರಕರಣಗಳಲ್ಲಿ ಠಾಣೆಯ ಕೆಳ ಹಂತದ ಸಿಬ್ಬಂದಿಯೇ ತೆರಳಿ ದಾಳಿ ಮಾಡುತ್ತಿದ್ದರು. ಒಂದು ವೇಳೆ ಯಾವುದೇ ದೂರು ಕೇಳಿ ಬಂದರೂ ಕೆಳ ಹಂತದ ಸಿಬ್ಬಂದಿ ಕಡೆಗೇ ಬೊಟ್ಟು ಮಾಡಿ ಅಧಿಕಾರಿಗಳು ತಪ್ಪಿಸಿಕೊಳ್ಳುವ ಕೆಲಸ ಮಾಡುತ್ತಿದ್ದರು, ಇಂತಹ ಕೆಲಸಕ್ಕೆ ಆಸ್ಪದ ನೀಡಬಾರದು ಎನ್ನುವ ಕಾರಣಕ್ಕೆ ಇದೀಗ ಯಾವುದೇ ದಾಳಿ ನಡೆದರೂ ಅದನ್ನು ಠಾಣಾಧಿಕಾರಿ ನೇತೃತ್ವದಲ್ಲಿಯೇ ನಡೆಯಬೇಕು ಎನ್ನುವ ಸೂಚನೆಯನ್ನೂ ಎಸ್ಪಿ ಸಂತೋಷ್ಬಾಬು ನೀಡಿದ್ದಾರೆ. ಇದು ಸಹ ಪೊಲೀಸ್ ಕಾರ್ಯವೈಖರಿಯನ್ನು ಮತ್ತಷ್ಟು ಬಲಪಡಿಸಿದಂತೆ ಆಗಿದೆ. ಹೀಗೆ ಹಲವಾರು ಕಾರ್ಯಕ್ರಮಗಳು ಪೊಲೀಸ್ ಇಲಾಖೆಯಲ್ಲಿ ಸದ್ದಿಲ್ಲದೆ ನಡೆಯುತ್ತಿದ್ದು, ಜಿಲ್ಲೆಯ ಪೊಲೀಸ್ ಇಲಾಖೆ ಹೊಸ ಬದಲಾವಣೆಯತ್ತ ಕಾಲಿಟ್ಟಿದೆ.
ಇಲಾಖೆಯ ಹುದ್ದೆಯಲ್ಲಿ ಹೈಯರಾರ್ಕಿ ಇದ್ದರೂ ಕೆಳ ಹಂತದ ಸಿಬ್ಬಂದಿ ಉತ್ತಮವಾಗಿ ಕಾರ್ಯನಿರ್ವಹಿಸಿದಾಗಲಷ್ಟೇ ಇಲಾಖೆಗೆ ಗೌರವ. ಈ ಹಿನ್ನೆಲೆಯಲ್ಲಿ ಇಲಾಖೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ತರುವ ಮೂಲಕ ಜನಸ್ನೇಹಿಯಾಗಿಸುವ ನಿಟ್ಟಿನಲ್ಲಿ ಕ್ರಮವಹಿಸಲಾಗಿದೆ. ಕೆ.ಸಂತೋಷ್ ಬಾಬು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ರಾಮನಗರ