ಜಿಲ್ಲೆ

ಪೊಲೀಸ್, ಸೇನಾಧಿಕಾರಿ ಹೆಸರಲ್ಲಿ ವಂಚನೆಗೆ ಯತ್ನ

ಕೊಪ್ಪಳ: ಪೊಲೀಸ್ ಅಧಿಕಾರಿ ಪರಿಚಯ ಹೇಳಿಕೊಂಡು 60 ಸಾವಿರ ರೂ. ಮನೆ ಬಳಕೆ ಸಾಮಗ್ರಿಗಳನ್ನು ಕಳಿಸುವುದಾಗಿ ವಂಚಕರು ಸಾರ್ವಜನಿಕರಿಗೆ ಯಾಮಾರಿಸುತ್ತಿರುವುದು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.


ಇಷ್ಟು ದಿನ ಫೇಸ್‌ಬುಕ್, ಮೆಸೆಂಜರ್‌ನಲ್ಲಿ ಜನರಿಗೆ ಯಾಮಾರಿಸುತ್ತಿದ್ದ ಕಳ್ಳರು ಇದೀಗ ಪರಿಚಿತರ ವಾಟ್ಸಾಪ್ ವಿವರ ಬಳಸಿ ವಂಚನೆಗೆ ಜಾಲ ಬೀಸುತ್ತಿದ್ದಾರೆ. ಇತ್ತೀಚೆಗೆ ಯಲಬುರ್ಗಾ ಸಿಪಿಐ ಆಗಿ ವರ್ಗವಾಗಿರುವ ಮೌನೇಶ್ವರ ಮಾಲಿ ಪಾಟೀಲ್ ತನಗೆ ಪರಿಚಯಸ್ಥರು ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ತಾನು ಸೇನೆಯಲ್ಲಿ ಕೆಸಲ ಮಾಡುತ್ತಿದ್ದೇನೆ. ಬೆಂಗಳೂರಿನಿಂದ ದೆಹಲಿಗೆ ತೆರಳುತ್ತಿರುವೆ. ಗೃಹ ಬಳಕೆ ವಸ್ತುಗಳಾದ ಸೋಫಾ ಸೆಟ್, ಡೈನಿಂಗ್ ಟೇಬಲ್, ಮಂಚ, ಟಿವಿ ಹಾಗೂ ಲಕ್ಷಾಂತರ ರೂ.ಬೆಲೆ ಬಾಳುವ ವಸ್ತುಗಳನ್ನು ಕೇವಲ 60 ಸಾವಿರ ರೂ.ಗೆ ನೀಡುತ್ತಿರುವೆ. ಮೌನೇಶ್ವರ ಅವರು ನಿಮಗೆ ನೀಡುವಂತೆ ತಿಳಿಸಿದ್ದಾರೆಂದು ಕರೆ ಮಾಡಿ ತಿಳಿಸಿ, ವಿವರಗಳನ್ನು ವಾಟ್ಸಾಪ್‌ಗೆ ಕಳಿಸಿದ್ದಾನೆ.


ತಾನೇ ಇನ್ನೊಂದು ಸಂಖ್ಯೆ ಬಳಸಿ ಸಿಪಿಐ ಫೋಟೋ ಹಾಕೊಕೊಂಡು ನವೀನ್ ನನಗೆ ಪರಿಚಿತ. ಅವರಿಂದ ವಸ್ತುಗಳನ್ನು ಪಡೆದುಕೊಳ್ಳಿ. ನಾನು ಮೀಟಿಂಗ್‌ನಲ್ಲಿದ್ದು, ವಾಟ್ಸಾಪ್ ಮಾಡಿರುವೆ ಎಂದು ಸಂದೇಶ ಕಳಿಸಿದ್ದಾನೆ. ಸೇನೆಯಲ್ಲಿ ಕೆಲಸ ಮಾಡುವುದಾಗಿ ನಕಲಿ ಗುರುತಿನ ಪತ್ರ ಸಹ ಕಳಿಸಿದ್ದಾನೆ. ತಕ್ಷಣ ಸಿಪಿಐಗೆ ಕರೆ ಮಾಡಿದಾಗ ಅವರ ಸಾಮಾಜಿಕ ಜಾಲತಾಣ ಹ್ಯಾಕ್ ಆಗಿರುವುದು ಗೊತ್ತಾಗಿದೆ. ಅವರೂ ದಯವಿಟ್ಟು ಯಾರಿಗೂ ಯಾವುದೇ ಹಣ ನೀಡಬೇಡಿ ಎಂದು ತಿಳಿಸಿದಾಗ ವಂಚನೆ ವಿಷಯ ಬಯಲಾಗಿದೆ.


ಇಷ್ಟು ದಿನ ಬ್ಯಾಂಕ್ ನೌಕರರು, ಪರಿಚಿತರ ಹೆಸರಿನಲ್ಲಿ ವಂಚಿಸುತ್ತಿದ್ದ ವಂಚಕರು ಇದೀಗ ಪೊಲೀಸರು ಹಾಗೂ ಸೇನೆ ಅಧಿಕಾರಿಗಳ ಹೆಸರಿನಲ್ಲಿ ವಂಚನೆಗೆ ಮುಂದಾಗಿದ್ದು, ಸಾರ್ವಜನಿಕರು ಎಚ್ಚರದಿಂದ ಇರಬೇಕಿದೆ.