ಜಿಲ್ಲೆ

ಪೊಲೀಸ್ ತಂಡಕ್ಕೆ ರೋಚಕ ಜಯ

ಮೈಸೂರು: ಗಂಗೋತ್ರಿ ಗ್ಲೇಡ್ಸ್‌ನಲ್ಲಿ ಮಂಗಳವಾರ ಡಿಸಿ ಇಲೆವೆನ್ ಮತ್ತು ಸಿಪಿ ಇಲೆವೆನ್ ನಡುವೆ ಜರುಗಿದ ‘ಗಣರಾಜ್ಯೋತ್ಸವ ಕ್ರಿಕೆಟ್ ಕಪ್’ ಪಂದ್ಯದಲ್ಲಿ ಸಿಪಿ ಇಲೆವೆನ್ ತಂಡ ರೋಚಕ ಗೆಲುವು ಸಾಧಿಸಿತು.
ಗಣರಾಜ್ಯೋತ್ಸವದ ಅಂಗವಾಗಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಈ ಪಂದ್ಯವನ್ನು ಆಯೋಜಿಸಲಾಗಿತ್ತು. ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಪಂದ್ಯಕ್ಕೆ ಚಾಲನೆ ನೀಡಿ ಶುಭ ಕೋರಿದರು.
ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ನೇತೃತ್ವದ ಸಿಪಿ ಇಲೆವೆನ್ ತಂಡ ಮೊದಲು ಬ್ಯಾಟಿಂಗ್ ಮಾಡಿ 20 ಓವರ್‌ಗಳಲ್ಲಿ 114 ರನ್ ಗಳಿಸಿತು. ಗೆಲುವಿಗೆ 115 ರನ್‌ಗಳ ಗುರಿಯೊಂದಿಗೆ ಬೆನ್ನಟಿದ ಮಹಾನಗರ ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ನೇತೃತ್ವದ ಡಿಸಿ ಇಲೆವೆನ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 102 ರನ್‌ಗಳನ್ನು ಗಳಿಸಲು ಶಕ್ತವಾಗಿ ಸೋಲೊಪ್ಪಿಕೊಂಡಿತು. ಇದರೊಂದಿಗೆ 12 ರನ್‌ಗಳಿಂದ ಪೊಲೀಸ್ ತಂಡವು ಜಯ ಗಳಿಸಿತು.
ಟ್ರೋಫಿ ವಿತರಣೆ ಸಮಾರಂಭದಲ್ಲಿ ಜಿಎಸ್‌ಎಸ್ ಯೋಗ ಸಂಸ್ಥೆಯ ಶ್ರೀಹರಿ, ಕ್ಲಿಯರ್‌ಮೆಡಿ ರೇಡಿಯಂಟ್ ಸಂಸ್ಥೆಯ ಮುಖ್ಯ ವ್ಯವಸ್ಥಾಪಕ ಎ.ಆರ್.ಮಂಜುನಾಥ್‌ಉಪಸ್ಥಿತರಿದ್ದರು.