ಜಿಲ್ಲೆ

ಪೊಲೀಸ್ ಠಾಣೆಯಿಂದ ಅಟ್ರಾಸಿಟಿ ಬೇರ್ಪಡಿಸಿ

ಚಿತ್ರದುರ್ಗ: ಪೊಲೀಸ್ ಠಾಣೆಯಿಂದ ಅಟ್ರಾಸಿಟಿ ಬೇರ್ಪಡಿಸಿ, ಪ್ರಕರಣ ದಾಖಲಿಸಲು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ಅಧಿಕಾರ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಕರ್ನಾಟಕ ದಲಿತ ಸಂಘರ್ಷ (ಮೀಸಲಾತಿ) ಸಮಿತಿ ಅಧ್ಯಕ್ಷ ವೈ.ರಾಜಣ್ಣ ಒತ್ತಾಯಿಸಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಟ್ರಾಸಿಟಿ ಕಾಯ್ದೆಯನ್ವಯ ಪ್ರತಿ ಜಿಲ್ಲೆಗೂ ವಿಶೇಷ ನ್ಯಾಯಾಲಯ ಸ್ಥಾಪಿಸಬೇಕು. ಸಂತ್ರಸ್ತರಿಗೆ ಸೂಕ್ತ ರಕ್ಷಣೆಯ ಜೊತೆಗೆ ಪುರ್ನವಸತಿ ಕಲ್ಪಿಸಲು ಆಕಸ್ಮಿಕ ಯೋಜನೆಯಡಿ ಪ್ರತ್ಯೇಕ ವಾರ್ಷಿಕ ಬಜೆಟ್ ಮಂಡಿಸಬೇಕು ಎಂದು ಆಗ್ರಹಿಸಿದರು.

ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಪ್ರಕಾರ ಪಾರದರ್ಶಕವಾಗಿ ಸಂತ್ರಸ್ತರಿಗೆ ಭೂಮಿ, ನಿವೇಶನ, ಉದ್ಯೋಗ, ಸಾಲ ಸೌಲಭ್ಯ ಒದಗಿಸಬೇಕು. ಕಾಯ್ದೆಯ ಕುರಿತು ಪೊಲೀಸ್ ಅಧಿಕಾರಿಗಳಿಗೆ ಸೂಕ್ತ ತರಬೇತಿ ನೀಡಬೇಕು. ನೊಂದವರಿಗೂ ನ್ಯಾಯ ಸಿಗುವಂತೆ ಅಗತ್ಯ ಕ್ರಮವಹಿಸಬೇಕು ಎಂದು ಕೋರಿದರು.

ಸಮಿತಿ ಪದಾಧಿಕಾರಿಗಳಾದ ಹುಲ್ಲೂರು ಕುಮಾರಸ್ವಾಮಿ, ಎಚ್.ಕೃಷ್ಣಮೂರ್ತಿ, ಪಿ.ಜಗದೀಶ್, ಎಂ.ಅಂಜಿನಪ್ಪ, ಈಶ್ವರ್, ಕೋಟೇಶ, ಅಣ್ಣಪ್ಪ, ರಮೇಶ, ಮಹಂತೇಶ ಇತರರಿದ್ದರು.