ಧಾರವಾಡ : ತಾಲೂಕಿನ ಮುಗದ ಗ್ರಾಮದಲ್ಲಿರುವ ಪೊಲೀಸ್ ವಸತಿಗೃಹಗಳ ಅತಿಕ್ರಮಣ ತೆರವು ಮಾಡಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ಹಾಗೂ ಅಧಿಕಾರಿ, ಸಿಬ್ಬಂದಿ ಶುಕ್ರವಾರ ಗ್ರಾಮಕ್ಕೆ ತೆರಳಿ ಗಡಿ ಗುರುತು ಮಾಡಿಸಿ ತಂತಿಬೇಲಿ ಹಾಕಿಸಿದರು.
ಮುಗದ ಗ್ರಾಮದಲ್ಲಿ 1970ರಿಂದ ಪೊಲೀಸ್ ಠಾಣೆ ಇತ್ತು. ಸುಮಾರು 1 ಎಕರೆ ಜಾಗದಲ್ಲಿ ಠಾಣೆ, ಪಿಎಸ್ಐ ವಸತಿಗೃಹ, ಸಿಬ್ಬಂದಿಗಾಗಿ 12 ವಸತಿಗೃಹಗಳನ್ನು ನಿರ್ವಿುಸಲಾಗಿತ್ತು. ಪೊಲೀಸ್ ಠಾಣೆ ಅಳ್ನಾವರಕ್ಕೆ ಸ್ಥಳಾಂತರವಾದ ನಂತರ ವಸತಿಗೃಹಗಳು ಈಗಲೂ ಇದ್ದು, 15 ವರ್ಷಗಳಿಂದ ಗ್ರಾಮಸ್ಥರು ಅತಿಕ್ರಮಣ ಮಾಡಿಕೊಂಡಿದ್ದರು. ವಸತಿಗೃಹಗಳಲ್ಲಿ ಗ್ರಾಮಸ್ಥರೇ ವಾಸವಿರುವ ಮಾಹಿತಿ ಬಂದ ಹಿನ್ನೆಲೆಯಲ್ಲಿ ಎಸ್ಪಿ ವರ್ತಿಕಾ, ಡಿವೈಎಸ್ಪಿ ರವಿ ನಾಯ್ಕ ಹಾಗೂ ಗ್ರಾಮೀಣ ಠಾಣೆ ಸಿಬ್ಬಂದಿ ಜೂನ್ನಲ್ಲಿ ಭೇಟಿ ನೀಡಿ ತೆರವುಗೊಳಿಸುವಂತೆ ಗಡುವು ನೀಡಿದ್ದರು. ಗ್ರಾಮಸ್ಥರು ತೆರವು ಮಾಡಿದ್ದು, ಸರ್ವೆ ಇಲಾಖೆಯಿಂದ ಗಡಿ ಗುರುತು ಮಾಡಿಸಿ ಸುತ್ತಲೂ ತಂತಿ ಬೇಲಿ ಹಾಕಲಾಗಿದೆ.
ಪೊಲೀಸ್ ಇಲಾಖೆ ಅಧೀನದ ಜಾಗದ ದಾಖಲೆಗಳನ್ನು ಪಿಡಿಒಗೆ ನೀಡಲಾಗಿದ್ದು, ಇ ಸ್ವತ್ತು ವೆಬ್ಸೈಟ್ಗೆ ಅಳವಡಿಸಲಾಗಿದೆ. ಇನ್ನು ಮುಂದೆ ಯಾರಾದರೂ ಅತಿಕ್ರಮಣ ಮಾಡಿದರೆ ಕಠಿಣ ಕ್ರಮ ಜರುಗಿಸುವುದಾಗಿ ಫಲಕ ಅಳವಡಿಸಲಾಗಿದೆ.