ಜಿಲ್ಲೆ

ಪೊಲೀಸ್ ಕಾನ್​ಸ್ಟೇಬಲ್ ಮೇಲೆ ಹಲ್ಲೆ

ಹುಬ್ಬಳ್ಳಿ: ಕಿರಾಣಿ ಅಂಗಡಿ ಬಂದ್ ಮಾಡಿ ಎಂದಿದ್ದಕ್ಕೆ ಸಿಟ್ಟಾಗಿ ಪೊಲೀಸ್ ಕಾನ್​ಸ್ಟೇಬಲ್ ಮೇಲೆಯೇ ಅಪ್ಪ- ಮಕ್ಕಳು ಸೇರಿ ಹಲ್ಲೆ ನಡೆಸಿದ ಘಟನೆ ತಾಲೂಕಿನ ತಾರಿಹಾಳ ಕೈಗಾರಿಕಾ ಪ್ರದೇಶದ ಹೊಸಮನಿ ಸಿಮೆಂಟ್ ಫ್ಯಾಕ್ಟರಿ ಬಳಿ ಸೋಮವಾರ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಗ್ರಾಮೀಣ ಠಾಣೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

ಗ್ರಾಮೀಣ ಠಾಣೆ ಕಾನ್​ಸ್ಟೇಬಲ್ ಗಿರೀಶ ತಿಪ್ಪಣ್ಣವರ ಹಲ್ಲೆಗೀಡಾದವರು. ಧಾರವಾಡ ತಾಲೂಕು ಕಣವಿ ಹೊನ್ನಾಪುರ ಮೂಲದ ಈರಪ್ಪ ಹನುಮಸಾಗರ, ಈತನ ಪುತ್ರರಾದ ಮಂಜುನಾಥ ಹನುಮಸಾಗರ, ಮಹಾಕೂಟೇಶ ಹನುಮಸಾಗರ ಹಾಗೂ ಸಂಗಮೇಶ ಹನುಮಸಾಗರ ಬಂಧಿತ ಆರೋಪಿಗಳು.

ಬೆಳಗ್ಗೆ 10 ಗಂಟೆ ನಂತರವೂ ಈರಪ್ಪ ಕಿರಾಣಿ ಅಂಗಡಿ ಬಾಗಿಲು ತೆರೆದಿದ್ದರು. ಗಸ್ತಿನಲ್ಲಿದ್ದ ಕಾನ್​ಸ್ಟೇಬಲ್ ತಿಪ್ಪಣ್ಣವರ ಅಂಗಡಿ ಮುಚ್ಚುವಂತೆ ಸೂಚಿಸಿದ್ದರು. ಇದೇ ವಿಚಾರವಾಗಿ ಈರಪ್ಪ ಹಾಗೂ ಆತನ ಪುತ್ರರು ಜಗಳ ತೆಗೆದು ಹಲ್ಲೆ ನಡೆಸಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ್ದಾರೆ. ಸಮವಸ್ತ್ರ ಹರಿದು, ನೆಲಕ್ಕೆ ಬೀಳಿಸಿ ಕಾಲಿನಿಂದ ಒದ್ದಿದ್ದಾರೆ ಎಂದು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಸ್ಟಮರ್ ಕೇರ್ ಹೆಸರಲ್ಲಿ ವಂಚನೆ

ಹುಬ್ಬಳ್ಳಿ: ಫೋನ್ ಪೇ ಕಸ್ಟಮರ್ ಕೇರ್ ಹೆಸರಲ್ಲಿ ಮಹಿಳೆಯೊಬ್ಬರ ಖಾತೆಯಿಂದ ಆನ್​ಲೈನ್ ಮೂಲಕ 96,356 ರೂಪಾಯಿ ವರ್ಗಾಯಿಸಿಕೊಂಡು ವಂಚಿಸಿರುವ ಕುರಿತು ಸೈಬರ್ ಕ್ರೖೆಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಧಾರವಾಡ ತೇಜಸ್ವಿ ನಗರದ ದ್ಯಾಮಕ್ಕ ವಂಚನೆಗೀಡಾದವರು. ಮೇ 13ರಂದು ದ್ಯಾಮಕ್ಕ ಅವರ ಫೋನ್ ಪೇ ಖಾತೆಯಿಂದ 6,400 ರೂ. ಕಡಿತವಾಗಿರುವ ಕುರಿತು ಸಂದೇಶ ಬಂದಿತ್ತು. ಈ ಹಿನ್ನೆಲೆಯಲ್ಲಿ ದ್ಯಾಮಕ್ಕ ಎಸ್​ಬಿಐ ಬ್ಯಾಂಕ್ ಗೆ ದೂರು ನೀಡಿದ್ದರು. ಬ್ಯಾಂಕ್ ಸಿಬ್ಬಂದಿ, ಬ್ಯಾಂಕ್ ಖಾತೆಗೆ ಲಿಂಕ್ ಇರುವ ಗೂಗಲ್ ಪೇ ಮತ್ತು ಫೋನ್ ಪೇಗಳನ್ನು ಬಂದ್ ಮಾಡಿರುವುದಾಗಿ ತಿಳಿಸಿದ್ದರು. ಮರುದಿನ ಮನೆಯಲ್ಲಿದ್ದಾಗ ದ್ಯಾಮಕ್ಕ ಅವರ ಫೋನ್ ಪೇ ಕಾರ್ಯ ನಿರ್ವಹಿಸುತ್ತಿರುವುದು ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಗೂಗಲ್​ನಲ್ಲಿ ಫೋನ್ ಪೇ ಕಸ್ಟಮರ್ ಕೇರ್ ನಂಬರ್ ಹುಡುಕಿ ಕರೆ ಮಾಡಿದ್ದರು. ದೀಪಕ್ ಶರ್ಮಾ ಎಂಬಾತ ಮಾತನಾಡಿ ಕಡಿತವಾದ ಹಣ ಮರು ಪಾವತಿಸುವುದಾಗಿ ನಂಬಿಸಿದ್ದ. ಧ್ಯಾಮಕ್ಕ ಅವರಿಂದ ಕೆಲ ಮಾಹಿತಿ ಪಡೆದು ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾನೆ ಎಂದು ದೂರಿನಲ್ಲಿ ದಾಖಲಾಗಿದೆ.

ನಕಲಿ ಫೇಸ್​ಬುಕ್​ಖಾತೆ ತೆರೆದು ಮೋಸ

ಹುಬ್ಬಳ್ಳಿ: ವ್ಯಕ್ತಿಯೊಬ್ಬರ ಹೆಸರಲ್ಲಿ ನಕಲಿ ಫೇಸ್​ಬುಕ್ ಖಾತೆ ಸೃಷ್ಟಿಸಿ ಅವರ ಸ್ನೇಹಿತರಿಗೆ ಸಂದೇಶ ಕಳುಹಿಸಿ, 40,000 ರೂಪಾಯಿ ವರ್ಗಾಯಿಸಿಕೊಂಡು ವಂಚಿಸಿರುವ ಕುರಿತು ಸೈಬರ್ ಕ್ರೖೆಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗೋಕುಲ ರಸ್ತೆ ನಿವಾಸಿ, ಸಾರಿಗೆ ಸಂಸ್ಥೆ ಅಧಿಕಾರಿ ಬೋರೇಗೌಡ ಸಿ. ಅವರ ಹೆಸರಲ್ಲಿ ಯಾರೋ ಮೇ 15ರಂದು ನಕಲಿ ಫೇಸ್​ಬುಕ್ ಖಾತೆ ಸೃಷ್ಟಿಸಿದ್ದರು. ಬೋರೇಗೌಡ ಅವರ ಸ್ನೇಹಿತ ಚಂದ್ರಕಾಂತ ಅವರಿಗೆ ಮೆಸೆಂಜರ್ ಮೂಲಕ ತುರ್ತಾಗಿ ಹಣ ಬೇಕಿದೆ ಎಂದು ಹಣಕ್ಕೆ ಬೇಡಿಕೆ ಇಟ್ಟಿದ್ದರು. ನಂತರ ಗೂಗಲ್ ಪೇ ಮೂಲಕ ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾರೆ ಎಂದು ದೂರಿನಲ್ಲಿ ದಾಖಲಾಗಿದೆ.

+++++++++

ಕೇಳಿದ್ದು 1373, ಕೊಟ್ಟಿದ್ದು 616!

ಧಾರವಾಡ ಜಿಲ್ಲೆ, ಖಾಸಗಿ ಆಸ್ಪತ್ರೆ, ರೆಮ್ೆಸಿವಿರ್, ಅಭಾವ

ಧಾರವಾಡ: ಕರೊನಾ ಪೀಡಿತರಲ್ಲಿ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡಾಗ ರೆಮ್ೆಸಿವಿರ್ ಚುಚ್ಚುಮದ್ದು ನೀಡಲಾಗುತ್ತಿದೆ. ಒಂದೆಡೆ ಜಿಲ್ಲೆಯಲ್ಲಿ ಕೋವಿಡ್ 2ನೇ ಅಲೆಯಿಂದಾಗಿ ಪೀಡಿತರ ಸಂಖ್ಯೆ ದಿನೇದಿನೇ ಹೆಚ್ಚಳವಾಗುತ್ತ ಸಾಗುತ್ತಿದೆ. ಮತ್ತೊಂದೆಡೆ ಜಿಲ್ಲೆಯ ಖಾಸಗಿ ಆಸ್ಪತ್ರೆಗಳು ಬೇಡಿಕೆ ಇಟ್ಟಷ್ಟು ರೆಮ್ೆಸಿವಿರ್ ಚುಚ್ಚುಮದ್ದು ಪೂರೈಕೆಯಾಗುತ್ತಿಲ್ಲ.

ಜಿಲ್ಲೆಯಲ್ಲಿ ರೆಮ್ೆಸಿವಿರ್ ಇಂಜೆಕ್ಷನ್ ಅಭಾವ ಇದೆ ಎನ್ನುವುದಕ್ಕೆ ಜಿಲ್ಲಾಡಳಿತ ನೀಡಿರುವ ಅಧಿಕೃತ ಅಂಕಿ- ಅಂಶಗಳೇ ಸಾಕ್ಷಿ. ಜಿಲ್ಲೆಯ ಬಹುತೇಕ ಖಾಸಗಿ ಆಸ್ಪತ್ರೆಗಳು ಕೋವಿಡ್ ಪೀಡಿತರಿಗೆ ಚಿಕಿತ್ಸೆ ನೀಡುತ್ತಿವೆ. ಪ್ರಮುಖ 33 ಆಸ್ಪತ್ರೆಗಳು 1,373 ರೆಮ್ೆಸಿವಿರ್ ವಯಲ್ಸ್ ಪೂರೈಸುವಂತೆ ಆರೋಗ್ಯ ಇಲಾಖೆಗೆ ಬೇಡಿಕೆ (ಇಂಡೆಂಟ್) ಸಲ್ಲಿಸಿದ್ದವು. ಮೇ 15ರ ಅಂಕಿ- ಅಂಶಗಳ ಪ್ರಕಾರ ಸರಬರಾಜು ಆಗಿರುವುದು 616 ವಯಲ್ಸ್ ಮಾತ್ರ.

ಜಿಲ್ಲೆಯ ಪ್ರಮುಖ ಆಸ್ಪತ್ರೆಗಳು ಶೇ. 50ರಷ್ಟು ಹಾಸಿಗೆ ಗಳನ್ನು ಕೋವಿಡ್ ಚಿಕಿತ್ಸೆಗೆ ಮೀಸಲಿಡುವಂತೆ ಜಿಲ್ಲಾಡಳಿತದ ನಿರ್ದೇಶನವಿದೆ. ಬಹುತೇಕ ಆಸ್ಪತ್ರೆಗಳು ಜಿಲ್ಲಾಡಳಿತದ ಆದೇಶವನ್ನು ಪಾಲಿಸುತ್ತಿವೆ. ಆದರೆ, ಕೋವಿಡ್​ನಿಂದ ಆರೋಗ್ಯ ತೀವ್ರ ಹದಗೆಟ್ಟ ಪೀಡಿತರಿಗೆ ನೀಡಲಾಗುವ ರೆಮ್ೆಸಿವಿರ್ ಚುಚ್ಚುಮದ್ದಿಗಾಗಿ ಖಾಸಗಿ ಆಸ್ಪತ್ರೆಗಳು ಜಿಲ್ಲಾಡಳಿತದ ಎದುರು ನೋಡುವಂತಾಗಿದೆೆ. ಪ್ರಮುಖ ಆಸ್ಪತ್ರೆಗಳು ಬೇಡಿಕೆ ಇಟ್ಟರೂ ಸರಬರಾಜು ಆಗಿಲ್ಲ. ಮತ್ತೊಂದೆಡೆ ಕೆಲ ಆಸ್ಪತ್ರೆಗಳಿಗೆ ಕಡಿಮೆ ಬೇಡಿಕೆ ಇದ್ದರೂ ದುಪ್ಪಟ್ಟು ರೆಮ್ೆಸಿವಿರ್ ಸರಬರಾಜು ಮಾಡಲಾಗಿದೆ.

ಹುಬ್ಬಳ್ಳಿಯ ತತ್ವದರ್ಶ ಆಸ್ಪತ್ರೆ 30, ಶಕುಂತಲಾ ಹಾಸ್ಪಿಟಲ್ 180, ಸೆಕ್ಯುರ್ ಹಾಸ್ಪಿಟಲ್ 36, ಸುಚಿರಾಯು 6, ಶಿವಕೃಪಾ ಆಸ್ಪತ್ರೆ 6 ಹಾಗೂ ಹುಬ್ಬಳ್ಳಿ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ 9 ರೆಮ್ೆಸಿವಿರ್​ಗೆ ಬೇಡಿಕೆ ಇಟ್ಟಿದ್ದವು. ಆದರೆ, ಮೇ 15ರ ಅಂಕಿ- ಅಂಶದಂತೆ ಈ ಆಸ್ಪತ್ರೆಗಳಿಗೆ ರೆಮ್ೆಸಿವಿರ್ ಪೂರೈಕೆ ಮಾಡಿಲ್ಲ.

ಹುಬ್ಬಳ್ಳಿಯ ವಿವೇಕಾನಂದ ಹಾಸ್ಪಿಟಲ್​ನ ಬೇಡಿಕೆ 114 ಇದ್ದರೂ ಪೂರೈಕೆ ಆಗಿದ್ದು 18 ಮಾತ್ರ. ಅಶೋಕ ಆಸ್ಪತ್ರೆಯಿಂದ ಬೇಡಿಕೆ ಇಲ್ಲದಿದ್ದರೂ 48 ವಯಲ್ಸ್ ಪೂರೈಕೆ ಮಾಡಲಾಗಿದೆ. ಧಾರವಾಡದ ಶ್ರೀಯಾ ಆಸ್ಪತ್ರೆ 240ಕ್ಕೆ ಬೇಡಿಕೆ ಇಟ್ಟರೆ ಪೂರೈಸಿದ್ದು 48. ಹುಬ್ಬಳ್ಳಿಯ ಲೈಫ್​ಲೈನ್ ಹಾಸ್ಪಿಟಲ್​ನಲ್ಲಿ 9ಕ್ಕೆ ಬೇಡಿಕೆ ಇದ್ದರೆ ಪೂರೈಕೆಯಾಗಿರುವುದು 70. ಅದೇ ರೀತಿ ಧಾರವಾಡ ರಾಮನಗೌಡರ ಹಾಸ್ಪಿಟಲ್ 6ಕ್ಕೆ ಬೇಡಿಕೆ ಇಟ್ಟರೆ 12 ಪೂರೈಸಲಾಗಿದೆ. ಹುಬ್ಬಳ್ಳಿಯ ಕ್ಯಾನ್ಸರ್ ಆಸ್ಪತ್ರೆಗೆ 154ರಲ್ಲಿ 48, ಧಾರವಾಡದ ಜರ್ಮನ್ ಆಸ್ಪತ್ರೆಗೆ 60ರಲ್ಲಿ 36, ವಿಠ್ಠಲ್ ನರ್ಸಿಂಗ್ ಹೋಂಗೆ 150ರಲ್ಲಿ 24, ಆರ್ಯಾ ಮಲ್ಟಿ ಸ್ಪೆಷಾಲಿಟಿಗೆ 60ರಲ್ಲಿ 24 ಪೂರೈಕೆಯಾಗಿವೆ. ಹುಬ್ಬಳ್ಳಿಯ ಸಂಜೀವಿನಿ

ಹಾಸ್ಪಿಟಲ್​ಗೆ 1 ಡೋಸ್ ಬೇಡಿಕೆ ಇದ್ದರೆ ಪೂರೈಸಲ್ಪಟ್ಟಿದ್ದು 6 ರೆಮ್ೆಸಿವಿರ್.

ಜಿಲ್ಲಾಡಳಿತ ನೀಡಿರುವ ಈ ಅಂಕಿ- ಅಂಶ ಕೆಲವು ಅನುಮಾನಗಳಿಗೆ ಕಾರಣವಾಗಿದೆ. ಬಹುತೇಕ ಆಸ್ಪತ್ರೆಗಳ ಬೇಡಿಕೆಗೆ ಅನುಗುಣವಾಗಿ ಅರ್ಧದಷ್ಟು ಸಹ ಪೂರೈಕೆಯಾಗಿಲ್ಲ. ಕೆಲ ಆಸ್ಪತ್ರೆಗಳಿಗೆ ಒಂದೇ ಒಂದು ಡೋಸ್ ಕೂಡ ನೀಡಿಲ್ಲ. ಕೆಲ ಆಸ್ಪತ್ರೆಗಳಿಗೆ ಬೇಡಿಕೆಯ ದುಪ್ಪಟ್ಟು ಡೋಸ್​ಗಳನ್ನು ನೀಡಲಾಗಿದೆ.

ದರ 3500 ರೂಪಾಯಿ

ಖಾಸಗಿ ಆಸ್ಪತ್ರೆಯವರಿಗೆ ಜಿಲ್ಲಾಡಳಿತವು 100 ಎಂ.ಜಿ.ಯ ಒಂದು ರೆಮ್ೆಸಿವಿರ್ ವಯಲ್ ಅನ್ನು 3500 ರೂ.ಗೆ ಪೂರೈಸುತ್ತಿದೆ. ಈ ಚುಚ್ಚುಮದ್ದನ್ನು ಖಾಸಗಿ ಆಸ್ಪತ್ರೆಯವರು ತಮ್ಮಲ್ಲಿ ದಾಖಲಾಗಿರುವ ರೋಗಿಗಳ ಸಂಖ್ಯೆಯ ಆಧಾರದ ಮೇಲೆ ಜಿಲ್ಲಾಡಳಿತದಿಂದಲೇ ಪಡೆಯಬೇಕಿದೆ. ರೆಮ್ೆಸಿವಿರ್ ಸೇರಿ ಎಲ್ಲ ಔಷಧಗಳನ್ನು ಲಾಜಿಸ್ಟಿಕ್ ಸೊಸೈಟಿ ಎಂಬ ಸಂಸ್ಥೆ ಜಿಲ್ಲಾಡಳಿತಕ್ಕೆ ಪೂರೈಸುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ರೆಮ್ೆಸಿವಿರ್ ಸೇರಿ ಯಾವುದೇ ಔಷಧ ಕೊರತೆ ಇಲ್ಲ.

ಹಳ್ಳಿಗಳಿಗೆ ಪಸರಿಸಿದ ಮಾರಿ

ಕೋವಿಡ್ 2ನೇ ಅಲೆಯಿಂದಾಗಿ ಲಾಕ್​ಡೌನ್ ಜಾರಿಯಲ್ಲಿದ್ದರೂ ಪೀಡಿತರ ಸಂಖ್ಯೆ ಇಳಿಮುಖವಾಗುತ್ತಿಲ್ಲ. ಪ್ರತಿದಿನ ಸರಾಸರಿ 900 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿವೆ. ಬೆಳಗ್ಗೆ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿದೆ. ಜೊತೆಗೆ ರೈತರು ತರಕಾರಿ, ಹೂವು- ಹಣ್ಣು ಮಾರಾಟಕ್ಕೆ ಅನುಕೂಲ ಕಲ್ಪಿಸಲಾಗಿದೆ. ಸಾರಿಗೆ ಬಸ್ ಸಂಚಾರ ಇಲ್ಲದಿರುವುದರಿಂದ ಹಳ್ಳಿಗಳಿಂದ ಜನ ಟಂಟಂಗಳಲ್ಲಿ ಗುಂಪಾಗಿ ಬರುತ್ತಿದ್ದಾರೆ. ಪರಸ್ಪರ ಅಂತರವಿಲ್ಲದೆ ಮಾರುಕಟ್ಟೆಗೆ ಆಗಮಿಸಿ ಗ್ರಾಮಗಳಿಗೆ ಮರಳುತ್ತಿದ್ದಾರೆ. ಇದರಿಂದಾಗಿ ಕರೊನಾ ಸೋಂಕು ಹಳ್ಳಿಗಳಿಗೂ ಪಸರಿಸುತ್ತಿದೆ. ಜಿಲ್ಲೆಗೆ ಹೊಂದಿಕೊಂಡ ಬೇರೆ ಜಿಲ್ಲೆಗಳ ಜನ ಚಿಕಿತ್ಸೆಗಾಗಿ ಧಾರವಾಡ- ಹುಬ್ಬಳ್ಳಿ ನಗರಗಳಿಗೆ ಬರುತ್ತಿದ್ದಾರೆ. ಲಾರಿ ಸೇರಿದಂತೆ ಇತರ ಗೂಡ್ಸ್ ವಾಹನಗಳಲ್ಲಿ ಬಂದು ಹೋಗುತ್ತಿದ್ದಾರೆ.

ಖಾಸಗಿ ಆಸ್ಪತ್ರೆಗಳಲ್ಲಿ ರೆಮ್ೆಸಿವಿರ್ ಇದ್ದರೂ ಬೇಡಿಕೆ ಬರುತ್ತಿರುತ್ತದೆ. ಹಾಗಾಗಿ ಅಂಥ ಆಸ್ಪತ್ರೆಗಳ ಅಂಕಿ- ಅಂಶವನ್ನು ಪರಿಶೀಲಿಸಿ ಪೂರೈಕೆಯ ಮೇಲುಸ್ತುವಾರಿ ಮಾಡಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಬಳಕೆಯಾದ ಪ್ರತಿದಿನದ ವರದಿ ತರಿಸಿಕೊಳ್ಳಲಾಗುತ್ತಿದೆ. ಕರೊನಾ ಪೀಡಿತ ಐಸಿಯು, ವೆಂಟಿಲೇಟರ್, ಎಚ್​ಡಿಯು ಪ್ರಕರಣಗಳಿಗೆ ಪಾರದರ್ಶಕವಾಗಿ ರೆಮ್ೆಸಿವಿರ್ ಚುಚ್ಚುಮದ್ದು ಸಿಗುವಂತೆ ನಿಗಾ ವಹಿಸಲಾಗುತ್ತಿದೆ. ಜಿಲ್ಲೆಯಲ್ಲಿ ಮುಂಚೆ ಇದ್ದ ಅಭಾವ ನಿಯಂತ್ರಣಕ್ಕೆ ಬಂದಿದೆ.

| ಅಜಯ ಮುದಗಲ್

ಜಿಲ್ಲಾ ಸಹಾಯಕ ಔಷಧ ನಿಯಂತ್ರಕರು, ಧಾರವಾಡ

ಮುಚ್ಚಿದ ಹಳ್ಳಿ ಕ್ಲಿನಿಕ್​ಗಳು

ಗ್ರಾಮೀಣ ಪ್ರದೇಶದಲ್ಲಿ ಊರಿಗೊಂದರಂತೆ ಖಾಸಗಿ ಕ್ಲಿನಿಕ್​ಗಳು ಸಾಮಾನ್ಯ ಕಾಯಿಲೆ ಪೀಡಿತರಿಂದ ತುಂಬಿವೆ. ಸಾಮಾನ್ಯ ಶೀತ, ಕೆಮ್ಮು, ಜ್ವರ, ನೆಗಡಿಯಂಥ ಬಾಧೆಗಳಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. 2ನೇ ಅಲೆಯ ತೀವ್ರತೆಯ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ಜನ ಎಚ್ಚೆತ್ತುಕೊಳ್ಳುತ್ತಿಲ್ಲ. ಹಳ್ಳಿ ಕ್ಲಿನಿಕ್​ಗಳ ವೈದ್ಯರು ರೋಗಿಗಳಲ್ಲಿ ಕೋವಿಡ್ ಲಕ್ಷಣ ಕಂಡುಬಂದಾಗ ಪರೀಕ್ಷೆಗೊಳಗಾಗುವಂತೆ ಸಲಹೆ ನೀಡಿದರೂ ಪ್ರಯೋಜನವಾಗುತ್ತಿಲ್ಲ. ಕೋವಿಡ್​ನ ಗಂಭೀರತೆ ಅರಿತಿರುವ ಅನೇಕ ಗ್ರಾಮೀಣ ವೈದ್ಯರು ಕ್ಲಿನಿಕ್​ಗಳನ್ನು ಬಂದ್ ಮಾಡಿದ್ದಾರೆ.

===========

ಬ್ಲ್ಯಾಕ್​ಫಂಗಸ್ ಚಿಕಿತ್ಸೆಗೆ ಔಷಧ ಒದಗಿಸಲು ಸೂಚನೆ

ಬ್ಲ್ಯಾಕ್​ಫಂಗಸ್, ಚಿಕಿತ್ಸೆ, ಔಷಧ, ಒದಗಿಸಲು ಸೂಚನೆ,

ಹುಬ್ಬಳ್ಳಿ: ಕೋವಿಡ್ ಚಿಕಿತ್ಸೆಯ ಅಡ್ಡಪರಿಣಾಮದಿಂದ ಬ್ಲ್ಯಾಕ್ ಫಂಗಸ್ ಹೆಚ್ಚಾಗುತ್ತಿದೆ. ಈ ಕುರಿತು ತಜ್ಞ ವೈದ್ಯರಿಂದ ಮಾಹಿತಿ ಪಡೆದಿದ್ದೇನೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ನಗರದ ಕಿಮ್್ಸ ಆವರಣದಲ್ಲಿ ಜೈನ್ ಇಂಟರ್​ನ್ಯಾಷನಲ್ ಟ್ರೇಡ್ ಆರ್ಗನೈಜೇಷನ್ ವತಿಯಿಂದ ನಿರ್ವಿುಸಲಾದ ‘ಆಕ್ಸಿಜನ್ ಆನ್ ವ್ಹೀಲ್ಸ್’ ಎಂಬ ವಾಹನವನ್ನು ಕಿಮ್ಸ್​ಗೆ ಹಸ್ತಾಂತರಿಸಿ ಅವರು ಮಾತನಾಡಿದರು. ಬ್ಲ್ಯಾಕ್​ಫಂಗಸ್ ನಿಯಂತ್ರಣ ಹಾಗೂ ಚಿಕಿತ್ಸೆಗೆ ಅಗತ್ಯವಿರುವ ಔಷಧವನ್ನು ರಾಜ್ಯಕ್ಕೆ ಸಾಕಷ್ಟು ಪ್ರಮಾಣದಲ್ಲಿ ಒದಗಿಸುವಂತೆ ಕೇಂದ್ರ ಸರ್ಕಾರದ ಆರೋಗ್ಯ ಕಾರ್ಯದರ್ಶಿಗೆ ದೂರವಾಣಿ ಮೂಲಕ ಕರೆ ಮಾಡಿ ಸೂಚಿಸಿದ್ದೇನೆ. ರಾಜ್ಯದ ಆರೋಗ್ಯ ಸಚಿವರು ಹಾಗೂ ಕಾರ್ಯದರ್ಶಿಗಳಿಗೆ ಟೆಂಡರ್ ಮೂಲಕ ಅಗತ್ಯವಿರುವ ಔಷಧ ಖರೀದಿಸುವಂತೆ ತಿಳಿಸಿದ್ದೇನೆ ಎಂದು ಹೇಳಿದರು.

ಎಂಎಲ್​ಸಿ ಪ್ರದೀಪ ಶೆಟ್ಟರ್, ಕಿಮ್್ಸ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ, ಕೆಎಲ್​ಇ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಆರ್​ಎಸ್​ಎಸ್​ನ ಶ್ರೀಧರ ನಾಡಗೇರ, ಜಿಟೋ ಸಂಘಟನೆಯ ರಾಕೇಶ ಕಠಾರಿಯಾ, ಗೌತಮ ಓಸವಾಲ್, ಕಿಷನ್ ಕಠಾರಿಯಾ, ವಿನೋದ್ ಪಠವಾನ್ ಇತರರು ಇದ್ದರು.

ಹೇಗಿದೆ ಆಕ್ಸಿಜನ್ ಆನ್ ವ್ಹೀಲ್?

ಜೈನ್ ಇಂಟರ್​ನ್ಯಾಷನಲ್ ಟ್ರೇಡ್ ಆರ್ಗನೈಜೇಷನ್ ವತಿಯಿಂದ ಸ್ಕೂಲ್ ವಾಹನವನ್ನು ತುರ್ತು ಸಂದರ್ಭದ ಚಿಕಿತ್ಸೆಗಾಗಿ ಮಾರ್ಪಡಿಸಲಾಗಿದೆ. ಕೋವಿಡ್​ನಿಂದ ಬಳಲುತ್ತಿರುವ ರೋಗಿಗಳಿಗೆ ಕಿಮ್್ಸ ನಲ್ಲಿ ಬೆಡ್ ದೊರಕುವವರೆಗೆ ವಾಹನದಲ್ಲಿದ್ದು ಚಿಕಿತ್ಸೆ ಪಡೆಯಬಹುದು. ಒಟ್ಟು 6 ಜನರಿಗೆ ಆಕ್ಸಿಜನ್ ಸಹಿತ ಇತರ ಸೌಕರ್ಯಗಳನ್ನು ಬಸ್​ನಲ್ಲಿ ಕಲ್ಪಿಸಲಾಗಿದೆ. 72 ಸಾವಿರ ರೂಪಾಯಿ ವೆಚ್ಚದ 9 ಲೀಟರ್ ಸಾಮರ್ಥ್ಯದ 6 ಆಕ್ಸಿಜನ್ ಕಾನ್ಸನ್​ಟ್ರೇಟರ್​ಗಳನ್ನು ಅಳವಡಿಸಲಾಗಿದೆ. ದುಬೈನಿಂದ ಆಮದು ಮಾಡಿಕೊಂಡು ಬಸ್ ಸಿದ್ಧಪಡಿಸಲಾಗಿದೆ. ಮುಂದಿನ ದಿನದಲ್ಲಿ ಧಾರವಾಡ ಜಿಲ್ಲಾಸ್ಪತ್ರೆಗೂ ಇಂಥ ವಾಹನ ನೀಡುವುದಾಗಿ ಜಿಟೋ ಸಂಘಟನೆಯ ಹುಬ್ಬಳ್ಳಿ ಅಧ್ಯಕ್ಷ ಶಾಂತಿಲಾಲ್ ಓಸವಾಲ್ ತಿಳಿಸಿದ್ದಾರೆ.

ರಾಜ್ಯ ಸರ್ಕಾರದಿಂದ ಸೂಕ್ತ ತೀರ್ಮಾನ

ರಾಜ್ಯದಲ್ಲಿ ಲಾಕ್​ಡೌನ್ ಮುಂದುವರಿಸುವ ಕುರಿತು ತಜ್ಞರು ನೀಡಿದ ವರದಿಯನ್ನು ನಾನು ಪರಿಶೀಲಿಸಿಲ್ಲ. ಸದ್ಯ ಮೇ 24ರವರೆಗೆ ಕಠಿಣ ಲಾಕ್​ಡೌನ್ ಜಾರಿಯಲ್ಲಿದೆ. ಮೇ 22ರ ನಂತರ ಪರಿಸ್ಥಿತಿ ನೋಡಿಕೊಂಡು ಲಾಕ್​ಡೌನ್ ಮುಂದುವರಿಸುವ ಕುರಿತು ಸೂಕ್ತ ತೀರ್ಮಾನ ರಾಜ್ಯ ಸರ್ಕಾರ ಕೈಗೊಳ್ಳಬೇಕು ಎಂಬುದು ನನ್ನ ಸಲಹೆಯಾಗಿದೆ ಎಂದು ಪ್ರಲ್ಹಾದ ಜೋಶಿ ಹೇಳಿದರು.

972 ಕೋವಿಡ್ ಪ್ರಕರಣ ಪತ್ತೆ

ಧಾರವಾಡ ಜಿಲ್ಲೆಯಲ್ಲಿ ಸೋಮವಾರ 972 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಐವರು ಮೃತಪಟ್ಟಿದ್ದಾರೆ. 681 ಜನರು ಬಿಡುಗಡೆಯಾಗಿದ್ದು, 6026 ಸಕ್ರಿಯ ಪ್ರಕರಣಗಳಿವೆ. ಕೋವಿಡ್​ನಿಂದ ಇದುವರೆಗೆ 803 ಜನರು ಮೃತಪಟ್ಟಿದ್ದಾರೆ.

765 ಬೆಡ್​ಗಳು ಲಭ್ಯ

ಧಾರವಾಡ ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಸೋಮವಾರ 765 ಕೋವಿಡ್ ಬೆಡ್​ಗಳು ಲಭ್ಯ ಇದ್ದವು. ಒಟ್ಟು 3127 ಬೆಡ್​ಗಳನ್ನು ಮೀಸಲಿರಿಸಲಾಗಿದೆ. 178 ಆಕ್ಸಿಜನ್, ಒಂದು ಐಸಿಯು, 4 ವೆಂಟಿಲೇಟರ್ ಬೆಡ್​ಗಳು ಖಾಲಿ ಇವೆ.