ಜಿಲ್ಲೆ

ಪೊಲೀಸ್ ಅಧಿಕಾರಿಗಳ ಅಮಾನತ್ತು ಆದೇಶ ವಾಪಸ್ ಪಡೆಯಿರಿ; ಎಬಿವಿಪಿ ಸಂಘಟಣೆಯಿಂದ ಆಗ್ರಹಿಸಿ ಪ್ರತಿಭಟನೆ

ಹಾಸನ: ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳ ಆತ್ಮಸ್ಥೆರ್ಯ ಕುಂದಿಸುವಂತಹ ಮತ್ತು ಅವರ ಸಾಮರ್ಥ್ಯವನ್ನು ಪ್ರಶ್ನಿಸುವಂತಹ ಅಮಾನತ್ತು ಆದೇಶವನ್ನು ರಾಜ್ಯ ಸರ್ಕಾರ ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿ ನಗರದ ಹೇಮಾವತಿ ಪ್ರತಿಮೆ ಮುಂಬಾಗ ಎಬಿವಿಪಿ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಸಂಘಟನೆಯ ಮುಖಂಡ ಯಶವಂತ್ ಸುದ್ದಿಗಾರರೊಂದಿಗೆ ಮಾತನಾಡಿ, ಬೆಂಗಳೂರಿನಲ್ಲಿ ಆರ್‌ಸಿಬಿ ಐಪಿಎಲ್ ಟ್ರೋಫಿ ಗೆಲುವಿನ ಸಂಭ್ರಮಾಚರಣೆ ವೇಳೆ ರಾಜ್ಯ ಕಾಂಗ್ರೆಸ್ ಸರ್ಕಾರದ ವಿವೇಚನಾ ರಹಿತ ತೀರ್ಮಾನದಿಂದ ಜರುಗಿದ ಕಾಲ್ತುಳಿತದಿಂದ ಉಂಟಾದ ಸಾವು-ನೋವಿನ ಕುರಿತು ಎಬಿವಿಪಿ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸುತ್ತದೆ. 18 ವರ್ಷಗಳ ನಂತರ ಐಪಿಎಲ್ ಟ್ರೋಫಿ ಗೆದ್ದ ಆರ್‌ಸಿಬಿ ತಂಡಕ್ಕೆ ಸನ್ಮಾನಿಸಲು ವಿಧಾನಸೌಧದ ಭದ್ರತಾ ವಿಭಾಗದ ಡಿಸಿಪಿ ಎಂ.ಎನ್. ಕರಿಬಸವನಗೌಡ ಅವರ ಎಚ್ಚರಿಕೆಯ ನಡುವೆಯೂ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸನ್ಮಾನ ಕಾರ್ಯಕ್ರಮ ಆತುರದ ಯೋಜನೆಯಾಗಿತ್ತು. ಹಾಗೂ ವ್ಯವಸ್ಥಿತ ತಯಾರಿ ಇಲ್ಲದೆ ಕ್ರೀಡಾಂಗಣದಲ್ಲಿ ಸಂಭ್ರಮಾಚರಣೆ ಆಯೋಜಿಸಿದ ಪರಿಣಾಮ 11 ಯುವ ಜನರು ಸಾವಿಗೆ ಈಡಾಗಿದ್ದು ಈ ನಾಡಿನ ದುರ್ದೈವ ಎಂದರು.

ಪುಕ್ಕಟ್ಟೆ ಪ್ರಚಾರಪ್ರಿಯತೆಗಾಗಿ ರಾಜ್ಯ ಕಾಂಗ್ರೆಸ್ ಸರ್ಕಾರದ ಎಡಬಿಡಂಗಿ ನಿಲುವು, ಲಕ್ಷಾಂತರ ಜನರು ಸೇರಬಹುದಾದ ನಿರೀಕ್ಷೆಯಲ್ಲಿದ್ದ ಕಾರ್ಯಕ್ರಮದ ಅಪಾಯಗಳು ಮತ್ತು ಸವಾಲುಗಳ ಬಗ್ಗೆ ಅರಿವಿದ್ದು ತೋರಿದ ತಿಳಿಗೇಡಿತನದ ಪರಿಣಾಮ 11 ಯುವಜನರ ಸಾವು ಆಗಿದೆ. ಮನೆ ಬೆಳಗಬೇಕಿದ್ದ ಕುಡಿಗಳನ್ನು ಕಳೆದುಕೊಂಡ ಕುಟುಂಬಗಳ ಆಕ್ರಂದನ ರಾಜ್ಯದ ಇತಿಹಾಸದಲ್ಲಿ ಕರಾಳ ಅಧ್ಯಾಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ಕಾಲ್ತುಳಿತ ಪ್ರಕರಣದಲ್ಲಿ ಸರ್ಕಾರ, ಪೊಲೀಸ್ ಇಲಾಖೆ, ಕೆಎಸ್‌ಸಿಎ, ಆರ್‌ಸಿಬಿ ಮ್ಯಾನೇಜ್‌ಮೆಂಟ್ ಹಾಗೂ ಜನರ ಅತಿರೇಕದ ನಡವಳಿಕೆ ಸೇರಿದಂತೆ ಹಲವಾರು ಹಂತಗಳಲ್ಲಿ ಲೋಪಗಳಾಗಿದ್ದು ಕಣ್ಣಿಗೆ ಕಾಣುವ ಸತ್ಯ. ಈ ಪ್ರಕರಣದ ತೀವ್ರತೆಯನ್ನು ಅರಿತು ರಾಜ್ಯ ಸರ್ಕಾರ ಈಗಾಗಲೇ ಮ್ಯಾಜಿಸ್ಟ್ರೇಟ್ ತನಿಖೆ, ನ್ಯಾಯಾಂಗ ತನಿಖೆ, ಸಿಐಡಿ ತನಿಖೆ ಈ ರೀತಿ ಬಹುವಿಧದ ತನಿಖೆಗಳಿಗೆ ಆದೇಶಿಸಿ, ಹಲವು ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳ ತಲೆದಂಡ ಮಾಡಿರುವುದು ಅಕ್ಷಮ್ಯ. ಆದರೆ ಈ ಕಾಲ್ತುಳಿತ ಪ್ರಕರಣಕ್ಕೆ ನೇರ ಹೊಣೆಗಾರರಾಗಿರುವ ಅಧಿಕಾರಿಗಳ ಮೇಲೆ ದರ್ಪ ತೋರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ತಾವೇ ಐಪಿಎಲ್ ಟ್ರೋಫಿ ಜೈಸಿದಷ್ಟು ಉಮೇದಿನಲ್ಲಿದ್ದ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಮ್ಮ ಬೇಜವಾಬ್ದಾರಿತನದ ನಡವಳಿಕೆಗಳನ್ನು ಒಪ್ಪಿಕೊಳ್ಳದಿರುವುದು ದುರದೃಷ್ಟಕರ. ಈ ದೇಶದಲ್ಲಿ ಕಳೆದೊಂದು ವರ್ಷದಲ್ಲಿ ಅತ್ಯಂತ ಹೆಚ್ಚು ಜನ ಸಂದಣಿ ಇರುವ ಕಾರ್ಯಕ್ರಮಗಳಲ್ಲಿ ಕಾಲ್ತುಳಿತಕ್ಕೊಳಗಾಗಿ ಈಗಾಗಲೇ ನೂರಾರು ಜನರು ಸಾವನ್ನಪ್ಪಿರುವ ಘಟನೆಗಳು ಉತ್ತರ ಪ್ರದೇಶ, ಗೋವಾ ಹಾಗೂ ತಿರುಪತಿ ಸೇರಿದಂತೆ ಸಾಕಷ್ಟು ಕಡೆ ನಡೆದಿರುವ ಪ್ರಕರಣಗಳು ಕಣ್ಣ ಮುಂದಿದ್ದರು ಮುಂಜಾಗ್ರತೆ ಕ್ರಮ ವಹಿಸದೆ ಇದ್ದದ್ದು ಆಡಳಿತಗಾರರ ದಿವ್ಯ ನಿರ್ಲಕ್ಷಕ್ಕೆ ಹಿಡಿದ ಕೈಗನ್ನಡಿ ಎಂದು ದೂರಿದರು.

ಈ ಸಂಭ್ರಮಾಚರಣೆಯ ಆತುರದ ಆಯೋಜನೆ, ವಿವೇಚನಾ ರಹಿತ ತೀರ್ಮಾನ, ಪೊಲೀಸ್ ಇಲಾಖೆಯ ಎಚ್ಚರಿಕೆಯ ಕಡೆಗಣನೆ, ಪುಕ್ಕಟೆ ಪ್ರಚಾರಪ್ರಿಯ ಕಾಂಗ್ರೆಸ್ ನಾಯಕರ ವರ್ತನೆ, ಯುವಜನರ ಉನ್ಮಾದ, ಸಾಮಾಜಿಕ ಜಾಲತಾಣಗಳಲ್ಲಿನ ಅನಿಯಂತ್ರಿತ ಮಾಹಿತಿ ಸೇರಿದಂತೆ ಹಲವಾರು ಲೋಪಗಳಿಂದ ದುರ್ಘಟನೆ ಸಂಭವಿಸಿದೆ. ಈ ಸಂದರ್ಭದಲ್ಲಿ ಮುಂದಿನ ದಿನಗಳಲ್ಲಿ ಇಂತಹ ದುರ್ಘಟನೆಗಳು ನಡೆಯದಂತೆ ಸೂಕ್ತ ಕ್ರಮ ವಹಿಸಬೇಕೆಂದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ವಿದ್ಯಾರ್ಥಿ ಪರಿಷತ್ ಆಗ್ರಹಿಸುತ್ತದೆ ಎಂದರು.

ಇಂತಹ ಪ್ರಕರಣದ ಸೂಕ್ತ ತನಿಖೆ ನಡೆಸದೆ ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳ ಆತ್ಮಸ್ಥೆರ್ಯ ಕುಂದಿಸುವಂತಹ ಮತ್ತು ಅವರ ಸಾಮರ್ಥ್ಯವನ್ನು ಪ್ರಶ್ನಿಸುವಂತಹ ಅಮಾನತ್ತು ಆದೇಶವನ್ನು ಹಿಂಪಡೆಯಬೇಕೆಂದು ಹಾಗೂ ಈ ದುರ್ಘಟನೆಯ ನೈತಿಕ ಹೊಣೆಗಾರಿಕೆಯಿಂದ ನುಣಚಿಕೊಳ್ಳದಂತೆ ರಾಜ್ಯದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಉತ್ತರದಾಯಿತ್ವದ ಅರಿವು ಮೂಡಿಸಬೇಕೆಂದು ವಿದ್ಯಾರ್ಥಿ ಪರಿಷತ್ ಒತ್ತಾಯಿಸುತ್ತದೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಎಬಿವಿಪಿ ಮುಖಂಡರಾದ ಶ್ರೀನಿವಾಸ್ ಸಾವರ್ಕರ್, ಲೇಪಾಕ್ಷ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.