ಜಿಲ್ಲೆ

ಪೊಲೀಸರೊಂದಿಗೆ ಕರವೇ ಅಧ್ಯಕ್ಷನ ಕಿರಿಕ್!

ಹುಬ್ಬಳ್ಳಿ: ಹೆಲ್ಮೆಟ್ ಧರಿಸದೇ ದ್ವಿಚಕ್ರ ವಾಹನ ಸವಾರಿ ಮಾಡಿದ್ದಲ್ಲದೇ ದಂಡ ಕಟ್ಟಿಸಿಕೊಳ್ಳದೇ ಬಿಡಿ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಅಧ್ಯಕ್ಷ ಎಂದು ಹೇಳಿಕೊಂಡಿದ್ದ ವ್ಯಕ್ತಿಯೊಬ್ಬ ಪೊಲೀಸರೊಂದಿಗೆ ಕಿರಿಕ್ ಮಾಡಿಕೊಂಡು, ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆ ಶನಿವಾರ ನಡೆದಿದೆ. ಇಲ್ಲಿನ ಕ್ಲಬ್ ರಸ್ತೆಯ ಹಳೇ ಡಿಆರ್​ಎಂ ಕಚೇರಿ ಕ್ರಾಸ್ ಬಳಿ ಪೂರ್ವ ಸಂಚಾರ ಠಾಣೆ ಪೊಲೀಸರು ವಾಹನಗಳ ತಪಾಸಣೆ ನಡೆಸುತ್ತಿದ್ದರು. ಆ ವೇಳೆ ಸುಳ್ಳ ರಸ್ತೆ ಬಸವೇಶ್ವರ ಪಾರ್ಕ್ ನಿವಾಸಿ ಸುನೀಲ ಚಂದ್ರಶೇಖರ ಶಲವಡಿ ಹೆಲ್ಮೆಟ್ ಧರಿಸದೇ ಬೈಕ್​ನಲ್ಲಿ ಬಂದಿದ್ದ. ಆತನನ್ನು ತಡೆದ ಪೊಲೀಸರು ವಾಹನ ದಾಖಲೆ ಕೇಳಿದ್ದರು. ಆತ ತನ್ನ ಸಹೋದರ ಪುನೀತಕುಮಾರ ಚಂದ್ರಶೇಖರ ಶಲವಡಿಗೆ ಕರೆ ಮಾಡಿ ಕರೆಸಿಕೊಂಡಿದ್ದ. ಸ್ಥಳಕ್ಕೆ ಬಂದ ಆತ ತಾನು ಕರವೇ ಅಧ್ಯಕ್ಷನಿದ್ದು, ದಂಡ ಕಟ್ಟಿಸಿಕೊಳ್ಳದೇ ಬಿಡುವಂತೆ ತಂಟೆ ತೆಗೆದಿದ್ದ. ಪೊಲೀಸರು ದಂಡ ಹಾಕಲು ಮುಂದಾಗಿದ್ದರು. ಆಗ ಸಹೋದರರಿಬ್ಬರೂ ಏನೇ ಆಗಲಿ ದಂಡ ಕಟ್ಟುವುದಿಲ್ಲ ಎಂದು ವಾಗ್ವಾದ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಕುರಿತು ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.