ವಿವಿಧ ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿ ವಿಜಯಪುರದ ಗಾಂಧಿವೃತ್ತದಲ್ಲಿ ಎಬಿವಿಪಿ ಕಾರ್ಯಕರ್ತರು ಹಾಗೂ ಸರ್ಕಾರಿ ಮಹಿಳಾ ಪಿಯು ಕಾಲೇಜ್ ವಿದ್ಯಾರ್ಥಿನಿಯರು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. 
ಜಿಲ್ಲೆ

ಪೊಲೀಸರು ಮತ್ತು ಎಬಿವಿಪಿ ಕಾರ್ಯಕರ್ತರ ಮಧ್ಯೆ ವಾಗ್ವಾದ

ವಿಜಯಪುರ: ಸರ್ಕಾರಿ ಪಿಯುಸಿ ಕಾಲೇಜ್‌ಗೆ ಮೂಲಭೂತ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿ ಶನಿವಾರ ಗಾಂಧಿವೃತ್ತದಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ನಡೆಸಿದ ಪ್ರತಿಭಟನೆಯಲ್ಲಿ ಎಬಿವಿಪಿ ಮುಖಂಡರು ಹಾಗೂ ಪೊಲೀಸರ ಜತೆ ವಾಗ್ವಾದ ನಡೆಯಿತು.

ಗಾಂಧಿವೃತ್ತದ ಮುಖ್ಯರಸ್ತೆಯಲ್ಲಿ ಕುಳಿತ ನೂರಾರು ವಿದ್ಯಾರ್ಥಿನಿಯರು ರಸ್ತೆ ಬಂದ್ ಮಾಡಿಸಿದ್ದರು. ಹೀಗಾಗಿ ಏನಾದರೂ ಅನಾಹುತವಾಗಬಾರದು ಎಂದು ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿತ್ತು. ಸುಮಾರು ಅರ್ಧಗಂಟೆಗಳ ಕಾಲ ಜಾಗಬಿಟ್ಟು ವಿದ್ಯಾರ್ಥಿನಿಯರು ಕದಲಿಲ್ಲ, ಎಬಿವಿಪಿ ಮುಖಂಡರು ಸರ್ಕಾರದ ವಿರುದ್ಧ ಘೋಷಣೆ ಕೂಗಲು ಆರಂಭಿಸಿದರು. ಇದರಿಂದ ತಾಳ್ಮೆ ಕಳೆದುಕೊಂಡ ಪೊಲೀಸರು ರಸ್ತೆ ಬಿಟ್ಟು ವಾಪಸ್ ಕಾಲೇಜ್ ಸೇರಿ ಎಂದು ಮುಖಂಡರನ್ನು ಗಾಂಧಿಚೌಕ್ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಲು ಯತ್ನಿಸಿದರು. ಈ ವೇಳೆ ವಿದ್ಯಾರ್ಥಿನಿಯರು ಮತ್ತಷ್ಟು ಘೋಷಣೆ ಜೋರು ಮಾಡಿದರು. ಇದರಿಂದ ಕೆರಳಿದ ಪೊಲೀಸರು ಎಲ್ಲ ವಿದ್ಯಾರ್ಥಿನಿಯರನ್ನು ರಸ್ತೆಯಿಂದ ಎಬ್ಬಿಸಿ ಕಾಲೇಜ್‌ಗೆ ಮರಳುವಂತೆ ಮಾಡಲು ಪ್ರಯತ್ನಿಸಿದರು. ಮೊದ ಮೊದಲು ಸ್ಥಳ ಬಿಡಲು ವಿದ್ಯಾರ್ಥಿನಿಯರು ನಿರಾಕರಿಸಿದರು. ಈ ವೇಳೆ ಕೆಲ ಮುಖಂಡ ಪೊಲೀಸರು ತಳ್ಳಿ ವಾಗ್ವಾದ ನಡೆಸಿದರು.

ಈ ರೀತಿ ಪ್ರತಿಭಟನೆಗೆ ವಿದ್ಯಾರ್ಥಿನಿಯರನ್ನು ಕರೆದುಕೊಂಡು ಬಂದು ಅವರ ಭವಿಷ್ಯ ಹಾಳು ಮಾಡುತ್ತಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು. ಅನುಮತಿ ಇಲ್ಲದೇ ಈ ರೀತಿ ಪ್ರತಿಭಟನೆ ಮಾಡುವುದು ಕಾನೂನು ಬಾಹಿರವಾಗಿದೆ. ನೀವು ವಿದ್ಯಾರ್ಥಿಗಳಿದ್ದೀರಿ ರಾಜಕೀಯ ಮಾಡುವುದು ಬಿಟ್ಟು ವಿದ್ಯಾಭ್ಯಾಸ ಮಾಡಿ ಎಂದು ಬುದ್ದಿವಾದ ಹೇಳಿ ಅವರನ್ನು ವಾಪಸ್ ಕಾಲೇಜ್‌ಗೆ ಕಳಿಸುವಲ್ಲಿ ಯಶಸ್ವಿಯಾದ ನಂತರ ರಸ್ತೆ ಸಂಚಾರಕ್ಕೆ ಮುಕ್ತಗೊಳಿಸಿದರು.
ಇದಕ್ಕೂ ಮೊದಲು ಬೆಳಗ್ಗೆ 11 ಗಂಟೆ ಸುಮಾರಿಗೆ ಜಮಾವಣೆಗೊಂಡಿದ್ದ ಎಬಿವಿಪಿ ಕಾರ್ಯಕರ್ತರು ಹಾಗೂ ಪಿಯು ಕಾಲೇಜ್ ವಿದ್ಯಾರ್ಥಿನಿಯರು ಮೊದಲು ಸಾಂಕೇತವಾಗಿ ಪ್ರತಿಭಟನೆ ನಡೆಸಿದರು. ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಒಂದು ಬದಿ ರಸ್ತೆಯನ್ನು ಬಸವೇಶ್ವರ ಸರ್ಕಲ್‌ದಿಂದ ಗಾಂಧಿವೃತ್ತದವರೆಗೆ ಸಂಚಾರ ನಿರ್ಬಂಧಿಸಿದರು. ಈ ವೇಳೆ ರಸ್ತೆಯಲ್ಲಿ ವಿದ್ಯಾರ್ಥಿನಿಯರು ಕುಳಿತು ಪ್ರತಿಭಟನೆ ಆರಂಭಿಸಿದರು. ಮಹಿಳಾ ಪಿಯು ಕಾಲೇಜ್‌ನಲ್ಲಿ ಸುಮಾರು 2300 ವಿದ್ಯಾರ್ಥಿನಿಯರು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ ಸೂಕ್ತ ಕೊಠಡಿಗಳು ಇಲ್ಲ. ಕೇವಲ 12 ಕೊಠಡಿಗಳು ಇವೆ. ಒಂದು ಕೊಠಡಿಯಲ್ಲಿ 80 ವಿದ್ಯಾರ್ಥಿನಿಯರು ಅಧ್ಯಯನ ಮಾಡುವಲ್ಲಿ 200 ವಿದ್ಯಾರ್ಥಿನಿಯರು ಅಭ್ಯಾಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಹಿಂದಿನ ಸರ್ಕಾರಿ ಈ ಕಾಲೇಜ್‌ಗೆ 7 ಕೊಠಡಿ ಮಂಜೂರು ಮಾಡಿತ್ತು. ಆದರೆ ಇಂದಿನ ಸರ್ಕಾರ ಅದನ್ನು ತಡೆ ಹಿಡಿದಿದೆ. ಇದರ ಜತೆ ಪಿಯು ಕಾಲೇಜ್‌ನಲ್ಲಿ ಮೂಲಸೌಲಭ್ಯದ ಕೊರತೆ ಇದೆ. ಪ್ರಯೋಗಾಲಯ ಸೇರಿದಂತೆ ಅಗತ್ಯ ಸೌಲಭ್ಯಗಳು ಇಲ್ಲ. ಕೂಡಲೇ ಸರ್ಕಾರ ಹೆಚ್ಚಿನ ಅನುದಾನ ನೀಡಬೇಕೆಂದು ಒತ್ತಾಯಿಸಿದರು.