ಜಿಲ್ಲೆ

ಪೊಲೀಸರು ನಿಸ್ಪಕ್ಷಪಾತವಾಗಿ ಕೆಲಸ ಮಾಡಬೇಕು : ನಿವೃತ್ತ ಪಿಎಸ್‌ಐ ಎಚ್.ಪ್ಮಟ್ಟರಾಜಯ್ಯ

ಹಾಸನ : ನೊಂದವರಿಗೆ ಸಮಾಜಿಕ ನ್ಯಾಯ ಕೊಡಿಸಲು ಪೊಲೀಸರು ನಿಸ್ಪಕ್ಷಪಾತವಾಗಿ ಕೆಲಸ ಮಾಡಬೇಕು ಎಂದು ನಿವೃತ್ತ ಪಿಎಸ್‌ಐ ಎಚ್.ಪ್ಮಟ್ಟರಾಜಯ್ಯ ಕರೆ ನೀಡಿದರು.

ನಗರದ ಡಿಎಆರ್ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ರಾಜ್ಯ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಎಲ್ಲ ಇಲಾಖೆಗಳಿಗಿಂತ ಅಗ್ರ ಸ್ಥಾನದಲ್ಲಿರುವ ನಮ್ಮ ಇಲಾಖೆ ಅನ್ಯಾಯಕ್ಕೆ ಒಳಗಾದವರು, ದಮನಿತರು, ಬಡವರು, ದೀನ ದಲಿತರಿಗೆ ನ್ಯಾಯ ಕೊಡಿಸಲು ದಿನದ 24 ಗಂಟೆ ಸಿದ್ಧವಿರಬೇಕಾಗುತ್ತದೆ ಎಂದರು.

ಹಿಂದಿಗಿಂತ ಈಗ ಪೊಲೀಸ್ ಇಲಾಖೆಯಲ್ಲಿ ಸಾಕಷ್ಟು ಸುಧಾರೆಣೆಗಳಾಗಿವೆ. ಅಗತ್ಯಗಳಿಗೆ ಅನುಗುಣವಾಗಿ ಸವಲತ್ತುಗಳನ್ನೂ ಸರ್ಕಾರ ಒದಗಿಸುತ್ತಿದೆ. ಅವುಗಳನ್ನು ಸರಿಯಾದ ರೀತಿಯಿಂದ ಬಳಸಿಕೊಂಡು ನಾಗರಿಕರಿಗೆ ಹತ್ತಿರವಾದ ನಡವಳಿಕೆ, ಸಹಾನುಭೂತಿಯಿಂದ ಕೆಲಸ ಮಾಡಬೇಕು. ಜನರೊಂದಿಗೆ ಹೊಂದಾಣಿಕೆಯಿಂದ ಕರ್ತವ್ಯ ನಿರ್ವಹಿಸಿದರೆ ಅಪರಾಧ ಪ್ರಕರಣಗಳು ಸುಲಭವಾಗಿ ಇತ್ಯರ್ಥವಾಗಲಿವೆ. ಸರ್ಕಾರಿ ಸೇವೆ ನಿಷ್ಠೆಯಿಂದ ಮಾಡಿದರೆ ಯಶಸ್ಸು ಖಚಿತ ಎಂಬುದಕ್ಕೆ ನಾನೇ ನಿದರ್ಶನ ಎಂದು ಹೇಳಿದರು.

ಸಾರ್ವಜನಿಕ ಅನುಕೂಲಕ್ಕಾಗಿ ಆರಂಭಿಸಿರುವ 112 ಪೊಲೀಸ್ ಸೇವೆ ಉತ್ತಮವಾಗಿದೆ. ಅಗತ್ಯ ಇರುವವರು ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಕರ್ತವ್ಯದ ವೇಳೆ ಅನೇಕ ಕಷ್ಟಗಳು ಎದುರಾದರೂ ಎಲ್ಲವನ್ನೂ ಸಮರ್ಥವಾಗಿ ಎದುರಿಸಿ ಸಾರ್ಥಕತೆಯಿಂದ ನಿವೃತ್ತಿಯಾಗಲು ಹೆಮ್ಮೆಯ ವಿಷಯ. ಅಂತಹ ಸುಯೋಗ ನನಗೆ ಒದಗಿ ಬಂದಿದ್ದು ವೃತ್ತಿ ಜೀವನದಲ್ಲಿ ಅನೇಕರ ಸಲಹೆ, ಸಹಕಾರ ಪ್ರೇರೇಪಣೆಯಾದವು ಎಂದು ಅನುಭವ ಹಂಚಿಕೊಂಡರು.

ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಕೆ.ತಮ್ಮಯ್ಯ ಮಾತನಾಡಿ, ಅಪರಾಧ ತಡೆಗಟ್ಟುವುದು, ಸಂಚಾರ ನಿಯಮ ಪಾಲನೆಯಲ್ಲಿ ಅತ್ಯಂತ ಕಠಿಣ ಪರಿಸ್ಥಿತಿಯಲ್ಲೂ ಕರ್ತವ್ಯ ನಿರ್ವಹಿಸುವ ಪೊಲೀಸರು ತಮ್ಮ ಜೀವಿತ ಅವಧಿಯನ್ನು ಜನರ ಸೇವೆಯಲ್ಲಿಯೇ ಕಳೆಯುತ್ತಾರೆ. ಇದನ್ನು ಮನಗಂಡು ಸಾರ್ವಜನಿಕರು ನಮ್ಮ ಇಲಾಖೆಯ ಮೇಲೆ ನಂಬಿಕೆ ಇಟ್ಟುಕೊಳ್ಳಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಪೊಲೀಸ್ ನಿಧಾನಗತಿ ಮತ್ತು ಶೀಘ್ರ ಪಥ ಸಂಚಲನ ನಡೆಸಲಾಯಿತು. ಹೊಳೆನರಸೀಪುರ ಗ್ರಾಮಾಂತರ ಠಾಣೆ ನಿವೃತ್ತ ಪೊಲೀಸ್ ಉಪನಿರೀಕ್ಷಕರಾದ ಹೆಚ್. ಪುಟ್ಟರಾಜಯ್ಯ, ಹಳ್ಳಿ ಮೈಸೂರು ಎಎಸ್‌ಐ ಸಣ್ಣಮಲ್ಲಯ್ಯ, ಡಿಎಆರ್ ಪಿ.ಟಿ. ರಘುನಾಥ್, ಎಆರ್‌ಎಸ್‌ಐ ಶಿವಸ್ವಾಮಿ, ನುಗ್ಗೆಹಳ್ಳಿ ಠಾಣೆ ಸಿಎಚ್‌ಸಿ ಟಿ.ಜಿ. ನಂಜುಂಡೇಗೌಡ ಅವರನ್ನು ಸನ್ಮಾನಿಸಲಾಯಿತು.