ತುಮಕೂರು: ಮಕ್ಕಳ ಹಕ್ಕುಗಳ ರಕ್ಷಣೆ ಆದ್ಯತೆಯ ವಿಷಯವಾಗಿದ್ದು, ವಿವಿಧ ಇಲಾಖೆಗಳ ಸಮನ್ವಯದಿಂದ ಅದು ಸಾಧ್ಯವಾಗುತ್ತದೆ. ಪೊಲೀಸ್ ಇಲಾಖೆ ಕೂಡ ಮಹತ್ವದ ಪಾತ್ರವಹಿಸಲಿದೆ. ಅಧಿಕಾರಿಗಳು, ಸಿಬ್ಬಂದಿ ಅರಿವು ಬೆಳಸಿಕೊಳ್ಳಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ಕೆ.ಟಿ.ತಿಪ್ಪೇಸ್ವಾಮಿ ಹೇಳಿದರು. ನಗರದ ಜಿಲ್ಲಾ ಪೊಲೀಸ್ ಕಚೇರಿಯ ಸಭಾಂಗಣದಲ್ಲಿ ಗುರುವಾರ ತುಮಕೂರು ಜಿಲ್ಲೆಯ ಮಕ್ಕಳ ವಿಶೇಷ ಪೊಲೀಸ್ ಘಟಕಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಮಕ್ಕಳ ನ್ಯಾಯ ಕಾಯ್ದೆ ಸೆಕ್ಷನ್ 107 ಅಡಿ ಪ್ರತಿಯೊಂದು ಪೊಲೀಸ್ ಠಾಣೆಯಲ್ಲಿ ಮಕ್ಕಳ ವಿಶೇಷ ಪೊಲೀಸ್ ಘಟಕಗಳ ರಚನೆ ಕಡ್ಡಾಯವಾಗಿದೆ. ಪ್ರತಿಯೊಂದು ಪೊಲೀಸ್ ಠಾಣೆಯಲ್ಲಿ ಮಕ್ಕಳ ಕಾಯ್ದೆಗಳ ಬಗ್ಗೆ ತರಬೇತಿ ಪಡೆದ ಮಕ್ಕಳ ಕಲ್ಯಾಣ ಪೊಲೀಸ್ ಅಧಿಕಾರಿ ಇರಬೇಕು ಎಂದರು.
ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಲ್ಲಿ ನಡೆದ ಪೋಕ್ಸೋ ಪ್ರಕರಣಗಳು, ಬಾಲ್ಯವಿವಾಹಕ್ಕೆ ಸಂಬಂಧಿಸಿದ ಪ್ರಕರಣಗಳು, ಬಾಲ ಮತ್ತು ಕಿಶೋರ ಕಾರ್ಮಿಕ ಪದ್ದತಿ ಪ್ರಕರಣಗಳು, ಮಕ್ಕಳ ನಾಪತ್ತೆ (ಮಕ್ಕಳ ಅಪಹರಣ) ಪ್ರಕರಣಗಳು, ಮಕ್ಕಳ ಕಳ್ಳ ಸಾಗಣೆಗೆ ಸಂಬಂಧಿಸಿದ ಪ್ರಕರಣಗಳು, ಮಕ್ಕಳ ನ್ಯಾಯ ಕಾಯ್ದೆಯ ಸೆಕ್ಷನ್ 75, 77, 78, 79ರಡಿಯಲ್ಲಿ ದಾಖಲಾದ ಪ್ರಕರಣಗಳ ಕುರಿತು ಮಾಹಿತಿ ಪಡೆದರು.
ರಾಜ್ಯದಾದ್ಯಂತ ಮಕ್ಕಳ ಮೇಲಿನ ಲೈಂಗಿಕ ಹಿಂಸೆಯ ಪ್ರಕರಣಗಳು ಹೆಚ್ಚುತ್ತಿದ್ದು, ಅದನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ನಿಟ್ಟಿನಲ್ಲಿ ಮಕ್ಕಳ ಕಲ್ಯಾಣ ಪೊಲೀಸ್ ಅಧಿಕಾರಿಗಳು ಶಾಲಾ ಕಾಲೇಜುಗಳ ಸಹಯೋಗದೊಂದಿಗೆ ಎಲ್ಲ ಠಾಣೆಗಳಲ್ಲೂ ಪ್ರತಿ ಗುರುವಾರ "ತೆರೆದ ಮನೆ' ಕಾರ್ಯಕ್ರಮವನ್ನು ವ್ಯಾಪಕವಾಗಿ ನಡೆಸಬೇಕು. ಅದರಲ್ಲೂ ಸಾಮಾಜಿಕ ಜಾಲತಾಣಗಳಿಂದ ಮಕ್ಕಳ ಮೇಲಾಗುತ್ತಿರುವ ದೌರ್ಜನ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದರು.
ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ವಿ.ಅಶೋಕ್ ಮಾತನಾಡಿ, ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳಲ್ಲೂ ಮಕ್ಕಳ ವಿಶೇಷ ಪೊಲೀಸ್ ಘಟಕಗಳ ರಚನೆ ಮಾಡಲಾಗಿದ್ದು ಮಕ್ಕಳ ರಕ್ಷಣೆಗೆ ವಿಶೇಷ ಆದ್ಯತೆ ವಹಿಸಲಾಗಿದೆ. ಅಲ್ಲದೇ ಮಕ್ಕಳ ವಿಶೇಷ ಪೊಲೀಸ್ ಘಟಕದ ಮಕ್ಕಳ ಕಲ್ಯಾಣ ಪೊಲೀಸ್ ಅಧಿಕಾರಿಗಳಿಗೆ ಸೂಕ್ತ ತರಬೇತಿ ನೀಡಲಾಗಿದೆ. ಮುಂದುವರೆದು ಮಕ್ಕಳ ರಕ್ಷಣೆಯ ಬಗ್ಗೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಶಿಪಾರಸುಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದರು. ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನಿಸಾ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅಬ್ದುಲ್ ಖಾದರ್, ಡಿವೈಎಸ್ಪಿ ಚಂದ್ರಶೇಖರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದಿನೇಶ್ ರವರು, ರಕ್ಷಣಾಧಿಕಾರಿ ಶಿವಣ್ಣ ಮತ್ತಿತರರು ಇದ್ದರು.