ಬೆಳಗಾವಿ: ತಾಲೂಕಿನ ಸಂತಿಬಸ್ತವಾಡ ಗ್ರಾಮದಲ್ಲಿ ಇಸ್ಲಾಂ ಧರ್ಮಗ್ರಂಥ ಸುಟ್ಟ ಪ್ರಕರಣದಲ್ಲಿ ನಗರ ಪೊಲೀಸರು ವಿಚಾರಣೆ ಹೆಸರಿನಲ್ಲಿ ದಲಿತ, ಮರಾಠಾ ಯುವಕರನ್ನು ಹೆದರಿಸಿ, ಬೆದರಿಸಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಹಿಂದುಪರ ಸಂಘಟನೆಗಳ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬುಧವಾರ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಪೊಲೀಸರು ಸಂತಿಬಸ್ತವಾಡ ಸೇರಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕೂಲಿ ಕಾರ್ಮಿಕರನ್ನು ಠಾಣೆಗೆ ಕರೆಸಿ ಬೆದರಿಸಿ ನಾವೇ ಗ್ರಂಥ ಸುಟ್ಟಿದ್ದೇವೆ ಎಂದು ಒಪ್ಪಿಕೊಳ್ಳುವಂತೆ ಕಿರುಕುಳ ನೀಡುತ್ತಿದ್ದಾರೆ. ಹೀಗಾಗಿ ಅವರು ಕೆಲಸಕ್ಕೆ ಹೋಗದೆ ಮನೆಯಲ್ಲಿ ಕುಳಿತುಕೊಳ್ಳುತ್ತಿದ್ದಾರೆ. ಅಮಾಯಕರನ್ನು ಓಡಾಡದಂತೆ ಹೆದರಿಸುತ್ತಿದ್ದಾರೆ ಎಂದು ಮಹಿಳೆಯರು ದೂರಿದರು.
ಆರು ತಿಂಗಳ ಹಿಂದೆ ಗ್ರಾಮದ ಹಿಂದು ಯುವತಿಯನ್ನು ಅನ್ಯಕೋಮಿನ ಯುವಕ ಅಪಹರಿಸಿಕೊಂಡು ಹೋಗಿದ್ದ ಪ್ರಕರಣ ಮುಚ್ಚಿ ಹಾಕಿದ್ದಾರೆ. ಇದೀಗ ಈ ಪ್ರಕರಣ ಮುಂದಿಟ್ಟುಕೊಂಡು ಅಮಾಯಕರನ್ನು ಬಂಧಿಸುವ ಕೆಲಸ ನಡೆಯುತ್ತಿದೆ. ಹಿಂದು ಮಹಿಳೆಯರ ವಿರುದ್ಧ ದೌರ್ಜನ್ಯ ನಡೆಯುತ್ತಿದ್ದರೂ ಪೊಲೀಸರು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಪಾದಿಸಿದರು.
ಅಲ್ಲಿನ ಪ್ರಾರ್ಥನಾ ಮಂದಿರದ ಒಳಗೆ ಅನ್ಯ ಕೋಮಿನವರು ಹೋಗಲು ಸಾಧ್ಯವೇ ಇಲ್ಲ. ಅಲ್ಲಿ 24 ಗಂಟೆಯೂ ಮೌಲ್ವಿಗಳು, ಜನರು ಇರುತ್ತಾರೆ. ಅವರೆಲ್ಲರ ಕಣ್ತಪ್ಪಿಸಿ ಈ ಕೃತ್ಯ ಮಾಡಲು ಸಾಧ್ಯವಿಲ್ಲ. ಅವರೇ ಈ ಕೃತ್ಯ ಮಾಡಿ ಬೇರೆ ಸಮುದಾಯದವರ ತಲೆಗೆ ಕಟ್ಟುತ್ತಿದ್ದು, ಪೊಲೀಸರು ಸಹಕಾರ ನೀಡುತ್ತಿದ್ದಾರೆ ಎಂದು ಹೋರಾಟಗಾರರು ಆರೋಪ ಮಾಡಿದರು. ಮಾಜಿ ಶಾಸಕ ಸಂಜಯ ಪಾಟೀಲ, ಪವನ ನಾಯಕ,
ಕೃಷ್ಣ ಭಟ್ ಇತರರಿದ್ದರು.
ಕಾಂಗ್ರೆಸ್ ವಿರುದ್ಧ ಘೋಷಣೆ: ಇಸ್ಲಾಂ ಧರ್ಮಗ್ರಂಥ ಸುಟ್ಟ ಪ್ರಕರಣದಲ್ಲಿ ಪೊಲೀಸರ ನಡೆ ಖಂಡಿಸಿ ಹಿಂದುಪರ ಸಂಘಟನೆಗಳು, ವಿವಿಧ ಗ್ರಾಮಸ್ಥರು ಪ್ರತಿಭಟನೆಯ ಉದ್ದಕ್ಕೂ ಕಾಂಗ್ರೆಸ್ ಸರ್ಕಾರ, ನಾಯಕರ ವಿರುದ್ಧ ಘೋಷಣೆ ಕೂಗಿದರು. ರಾಜಕೀಯ ಲಾಭಕ್ಕಾಗಿ ಮರಾಠಿಗರ ವಿರುದ್ಧ ಅನ್ಯಕೋಮಿನವರನ್ನು ಎತ್ತಿಕಟ್ಟುವ ಕೆಲಸ ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ.
ಪಾರ್ಸಿ, ಬಾಂಗ್ಲಾ ಸೇರಿ ವಿವಿಧ ಮುಸ್ಲಿಂ ರಾಷ್ಟ್ರಗಳಿಂದ ಅಕ್ರಮವಾಗಿ ಬಂದಿರುವ ನೂರಾರು ಇಸ್ಲಾಂ ಧರ್ಮ ಪ್ರಚಾರಕರು ಆರಾಮವಾಗಿ ಓಡಾಡುತ್ತಿದ್ದಾರೆ ಎಂದು ಹಿಂದುಪರ ಸಂಘಟನೆಗಳು ಮುಖಂಡರು ದೂರಿದರು.