ಜಿಲ್ಲೆ

ಪೊಲೀಸರಿಂದ ಮಾರಣಾಂತಿಕ ಹಲ್ಲೆ

ರಮೇಶ ಮೇಳಕುಂದಾ

ಕಲಬುರಗಿ: ಆಂದೋಲಾ ಗ್ರಾಮದ ರಮೇಶ ದರ್ಶನಾಪುರ ಅವರ ಮೇಲೆ ಜೇವರ್ಗಿ ಪೊಲೀಸ್ ಠಾಣೆಯ ಪೊಲೀಸರು ಕಾನೂನು ಬಾಹಿರವಾಗಿ ಬಂಧಿಸಿ, ನಿರಂತರವಾಗಿ ದೈಹಿಕ, ಮಾನಸಿಕ ಹಲ್ಲೆ ಮಾಡಿದ್ದಾರೆ ಎಂದು ಶ್ರೀರಾಮ ಸೇನೆ ಗೌರವಾಧ್ಯಕ್ಷ ಆಂದೋಲಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಆರೋಪಿಸಿದರು.

ಡಿ.೨ರಂದು ಆಂದೋಲಾ ಗ್ರಾಮದಲ್ಲಿ ಜೇವರ್ಗಿ ಠಾಣೆಯ ಪೇದೆಗಳಾದ ಯಲ್ಲಾಲಿಂಗ, ಸಿದ್ರಾಮ ಪೊಲೀಸ್ ಪಾಟೀಲ್, ಪಿಎಸ್‌ಐ ಸುರೇಶಕುಮಾರ ಅವರು ವಿನಾಕಾರಣ ರಮೇಶನನ್ನು ಬಂಧಿಸಿದ್ದಾರೆ. ಗ್ರಾಮದಲ್ಲಿ ಸಾರ್ವಜನಿಕವಾಗಿಯೇ ಕೈಗಳನ್ನು ಹಗ್ಗದಿಂದ ಕಟ್ಟಿ, ಭಯಂಕರವಾಗಿ ಹೊಡೆದಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ದಿಢೀರ್ ಎಂದು ಬಂಧಿಸಿದ್ದಲ್ಲದೇ ಹೊಡಿ ಬಡಿ ಮಾಡಿ, ಆಂದೋಲಾದಲ್ಲಿನ ಶ್ರೀರಾಮಸೇನೆಯ ನಾಮಫಲಕಕ್ಕೆ ಸೆಗಣಿ ಬಳಿದಿರುವುದು ನೀನೆ ಎಂದು ಒಪ್ಪಿಕೊಳ್ಳಬೇಕು, ಇಲ್ಲದಿದ್ದರೆ ನಿನ್ನನ್ನು ಖಲ್ಲಾಸ್ ಮಾಡುತ್ತೇವೆ ಎಂದು ಕೊಲೆ ಬೆದರಿಕೆ ಹಾಕಿ ಒತ್ತಡ ಹೇರಿದ್ದಾರೆ. ನಂತರ ಸುಮಾರು ೪೦ ಗಂಟೆ ಅನಧಿಕೃತ ಬಂಧನಲ್ಲಿ ಇಟ್ಟುಕೊಂಡು ದೈಹಿಕ, ಮಾನಸಿಕ ಹಿಂಸೆ ನೀಡಿದ್ದಾರೆ. ೪೦ ಗಂಟೆ ನಂತರ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ತಹಸೀಲ್ದಾರ್ ಎದುರು ಹಾಜರಿಪಡಿಸಿದ್ದಾರೆ ಎಂದು ತಿಳಿಸಿದರು.

ತಹಸೀಲ್ದಾರ್ ಮುಂದೆ ಹಲ್ಲೆ, ಹಿಂಸೆ ನೀಡಿದ ಬಗ್ಗೆ ಬಾಯಿ ಬಿಡಬೇಡ. ಇಲ್ಲದಿದ್ದರೆ ನಿನಗೆ ಜಾಮೀನು ಸಿಗದಂತೆ ಮಾಡುತ್ತೇವೆ. ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ. ಜೈಲಿಗೆ ಕಳುಹಿಸಿದ್ದಾರೆ. ಪೊಲೀಸರು ನೀಡಿದ ದೈಹಿಕ ಹಿಂಸೆಯಿಂದ ರಮೇಶ ದರ್ಶನಾಪುರ ಅವರ ಪಾದಗಳಲ್ಲಿ ಬಾವು ಕಾಣಿಸಿಕೊಂಡಿದೆ. ಎದೆ ಮತ್ತು ಗುಪ್ತಾಂಗದಲ್ಲಿ ನೋವು ಕಾಣಿಸಿಕೊಂಡಿದೆ. ಮಾರಣಾಂತಿಕವಾಗಿ ಹಲ್ಲೆ ಮಾಡಿದ ಪಿಎಸ್‌ಐ ಮತ್ತು ಪೇದೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ರಮೇಶ ದರ್ಶನಾಪುರ ಅವರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.

ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಮಹೇಶ ಗೊಬ್ಬುರ, ಪ್ರಮುಖರಾದ ಅಂಬಾರಾಯ ಕಂಬಾರ, ಮಹೇಶ ಯಾದವ, ಶರಣು ಗುತ್ತೇದಾರ, ವೀರೇಶ ಸುತಾರ, ಪರಮೇಶ್ವರ ಇದ್ದರು.