ಜಿಲ್ಲೆ

ಪೊಲೀಸರಿಂದ ಏಳು ರಾಸುಗಳ ರಕ್ಷಣೆ

ಹಾಸನ : ಪ್ರತ್ಯೇಕ ಪ್ರಕರಣದಲ್ಲಿ ಅಕ್ರಮವಾಗಿ ಕಸಾಯಿ ಖಾನೆಗೆ ಸಾಗಿಸುತ್ತಿದ್ದ 7 ರಾಸುಗಳನ್ನು ಶನಿವಾರ ರಕ್ಷಿಸಿರುವ ಪೊಲೀಸರು ಮೂವರನ್ನು ವಾಹನ ಸಮೇತ ಬಂಧಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಸಕಲೇಶಪುರ ಪಟ್ಟಣದಲ್ಲಿ ಎರಡು ಟಾಟಾ ಇಂಟ್ರಾ ಗೂಡ್ಸ್ ವಾಹನಗಳನ್ನು ತಡೆದು ಪರಿಶೀಲಿಸಿದಾಗ ಒಂದರಲ್ಲಿ ಮೂರು ಮತ್ತೊಂದರಲ್ಲಿ ಎರಡು ರಾಸುಗಳಿದ್ದವು. ಆಲೂರು ತಾಲೂಕು ತಿಮ್ಮನಹಳ್ಳಿ ಗ್ರಾಮದ ಪ್ರವೀಣ್ ಹಾಗು ಬೇಲೂರು ತಾಲೂಕಿ ಕೆರಲೂರು ಗ್ರಾಮದ ದರ್ಶನ್ ವಾಹನ ಚಾಲಕರಾಗಿದ್ದು, ವಿಚಾರಣೆಗೆ ಒಳಪಡಿಸಿದಾಗ ರೈತರಿಂದ ಕಡಿಮೆ ಬೆಲೆಗೆ ರಾಸುಗಳನ್ನು ಖರೀದಿಸಿ ಕಸಾಯಿ ಖಾನೆಗೆ ಸಾಗಿಸುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಮತ್ತೊಂದು ಪ್ರಕರಣದಲ್ಲಿ ಹಾಸನ ನಗರ ಹೊರವಲಯದ ಹನುಮಂತಪುರದಲ್ಲಿ ಗೂಡ್ಸ್ ವಾಹನ ಪರಿಶೀಲಿಸಿದಾಗ ಎರಡು ರಾಸುಗಳನ್ನು ಸಾಗಿಸುತ್ತಿರುವುದು ತಿಳಿದುಬಂದಿದೆ. ಅರಕಲಗೂಡು ತಾಲೂಕಿನ ಮಾಚಗೌಡನಹಳ್ಳಿ ಗ್ರಾಮದ ಅಯೂಬ್ ಪಾಷಾ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.