ಹಾಸನ: ದಾರಿಯಲ್ಲಿ ಬರುವ ವ್ಯಕ್ತಿಗಳನ್ನು ಅಥವಾ ವಾಹನವನ್ನು ಅಡ್ಡಗಟ್ಟಿ ಕಣ್ಣಿಗೆ ಖಾರದಪುಡಿ ಎರಚಿ, ಮಾರಕಾಸ್ತ್ರಗಳಿಂದ ಹೆದರಿಸಿ, ಚಿನ್ನಾಭರಣ ದರೋಡೆ ಮಾಡುತ್ತಿದ್ದ ಗ್ಯಾಂಗ್ ಮೇಲೆ ಪೊಲೀಸರು ದಾಳಿ ಮಾಡಿದಾಗ ಐವರು ಆರೋಪಿಗಳು ಪೊಲೀಸರನ್ನು ದೂಡಿ ಪರಾರಿಯಾಗಿದ್ದಾರೆ.
ಜು.30ರಂದು ಬೆಳಗಿನ ಜಾವ 5.15 ಗಂಟೆ ಸಮಯದಲ್ಲಿ ಹಾಸನ ಸಂಚಾರಿ ಪೊಲೀಸ್ ಠಾಣಾ ಪಿಎಸ್‌ಐ ಆಕಾಶ್ ಮತ್ತು ಸಿಬ್ಬಂದಿ ಹಾಸನ ನಗರದ ಹೊಸ ಬಸ್‌ನಿಲ್ದಾಣದ ಬಳಿ ಕರ್ತವ್ಯದಲ್ಲಿದ್ದರು. ಈ ವೇಳೆ ಬಸ್ ನಿಲ್ದಾಣದ ಎದುರು ಇರುವ ಫ್ಲೈಓವರ್ ಕೆಳಗಿನ ಅಂಡರ್ ಪಾಸ್ ರಸ್ತೆಯಲ್ಲಿ ಹೌಸಿಂಗ್‌ಬೋರ್ಡ್‌ಗೆ ಹೋಗುವ ರಸ್ತೆಯ ಬಳಿ 5 ಜನ ಆರೋಪಿಗಳು ಕೈಯಲ್ಲಿ ಮಾರಕಾಸ್ತ್ರಗಳನ್ನು ಇಟ್ಟುಕೊಂಡು ರಸ್ತೆಯಲ್ಲಿ ಹೋಗುವ ಜನರನ್ನು ಹೆದರಿಸಿ, ದರೋಡೆ ಮಾಡಲು ಹೊಂಚು ಹಾಕುತ್ತಿದ್ದರು. ಇವರನ್ನು ಕಂಡು ಪೊಲೀಸರು ಹಿಡಿಯಲು ಹೋದಾಗ ಪೊಲೀಸರನ್ನು ಕೈಯಿಂದ ತಳ್ಳಿ ಆರೋಪಿಗಳು ಪರಾರಿಯಾಗಿದ್ದಾರೆ.
ಹುಣಸಿನಕೆರೆ ಬಡಾವಣೆಯ ಮೊಹಮ್ಮದ್ ಶಾಹಿದ್ ಪಾಷಾ (27), ದೇವೇಗೌಡ ನಗರ ನಿವಾಸಿ ಮಲ್ಲಿಕ್ ಪೈಸನ್ (25) ಹಾಗೂ ಇತರೆ ಮೂರು ಜನರು ಓಡಿ ಹೋಗಿದ್ದಾರೆ. ಈ ವೇಳೆ ಕಬ್ಬಿಣದ ರಾಡು, ಚಾಕು, ಖಾರದಪುಡಿ, ಪ್ಲಾಸ್ಟಿಕ್ ಕವರ್‌ನಲ್ಲಿ ಇಟ್ಟುಕೊಂಡಿದ್ದ ಒಂದು ಪ್ಯಾಕೆಟ್ ಗಾಂಜಾ, 4 ಶೀಟು ಅಮಲು ಬರುವ ಮಾತ್ರೆಗಳು ಹಾಗೂ ಒಂದು ಮೋಟಾರು ಬೈಕ್ ವಶಕ್ಕೆ ಪಡೆದುಕೊಳ್ಳಲಾಗಿದ್ದು, ಐವರು ಆರೋಪಿಗಳ ವಿರುದ್ಧ ಹಾಸನ ನಗರ ಪೊಲೀಸ್‌ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.