ಜಿಲ್ಲೆ

ಪೊಲೀಸರ ವಿರುದ್ಧ ವಕೀಲರ ಪ್ರತಿಭಟನೆ

Dharwad

ಧಾರವಾಡ: ವಕೀಲರೊಬ್ಬರ ಜತೆ ಅನುಚಿತವಾಗಿ ವರ್ತಿಸಿರುವ ಧಾರವಾಡ ಗ್ರಾಮೀಣ ಠಾಣೆಯ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಧಾರವಾಡ ವಕೀಲರ ಸಂಘದ ಸದಸ್ಯರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಪಕ್ಷಗಾರರ ಪರವಾಗಿ ವಿಚಾರಿಸಲು ಠಾಣೆಗೆ ಹೋಗಿದ್ದ ವಕೀಲ ಸುನೀಲ ಗುಡಿ ಅವರನ್ನು ಪೊಲೀಸರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಎಳೆದಾಡಿ ನಂತರ ಹೊರಗೆ ಹಾಕಿದ್ದಾರೆ. ಪೊಲೀಸರ ವರ್ತನೆ ನ್ಯಾಯಾಂಗದ ಘನತೆಗೆ ಧಕ್ಕೆ ತರುವುದಾಗಿದೆ. ಈ ಹಿನ್ನೆಲೆಯಲ್ಲಿ ಅನುಚಿತವಾಗಿ ವರ್ತಿಸಿರುವ ಧಾರವಾಡ ಗ್ರಾಮೀಣ ಠಾಣೆಯ ಪೊಲೀಸರ ವಿರುದ್ಧ ಕ್ರಮ ಕೈಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮೂಲಕ ಗೃಹ ಸಚಿವರಿಗೆ ಮನವಿ ರವಾನಿಸಿದರು.

ಧಾರವಾಡ ವಕೀಲರ ಸಂಘದ ಅಧ್ಯಕ್ಷ ಬಿ.ಎಸ್. ಘೊಡ್ಸೆ, ಉಪಾಧ್ಯಕ್ಷ ರಾಜು ಕೋಟಿ, ಕಾರ್ಯದರ್ಶಿ ಎನ್.ಆರ್. ಮಟ್ಟಿ, ಸದಸ್ಯರಾದ ರಾಜು ಅವಲಕ್ಕಿ, ಕೆ.ಎಚ್. ಪಾಟೀಲ, ರೂಪಾ ಕೆಂಗಾನೂರ, ಕೃಷ್ಣ ಪವಾರ, ರಾಹುಲ ಅರವೇಡ, ಸಂತೋಷ ಭಾವಿಹಾಳ, ವೀಣಾ ನಾಗಮ್ಮನವರ, ಜ್ಯೋತಿ ಪೂಜಾರ, ಸಂತೋಷ ಕಮತರ, ರೇಣುಕಾ ಪಾಟೀಲ, ಸುನೀಲ ಗುಡಿ, ವೀಣಾ ಗೌರಪ್ಪನವರ, ಇತರರಿದ್ದರು.

ಪೇದೆ ಅಮಾನತು: ಠಾಣೆಯಲ್ಲಿ ವಕೀಲರು, ದೂರು ನೀಡಲು ಹೋದವರೊಂದಿಗೆ ವಾಗ್ವಾದ ನಡೆಸಿದ ಆರೋಪ ಎದುರಿಸುತ್ತಿದ್ದ ಗ್ರಾಮೀಣ ಠಾಣೆ ಪೇದೆ ಗಣೇಶ ಕಾಂಬಳೆ ಎಂಬುವರನ್ನು ಅಮಾನತು ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ಸೋಮವಾರ ಆದೇಶಿಸಿದ್ದಾರೆ. ಮೇಲ್ನೋಟಕ್ಕೆ ಪೇದೆಯ ತಪ್ಪು ಕಂಡುಬಂದ ಹಿನ್ನೆಲೆಯಲ್ಲಿ ಅಮಾನತು ಮಾಡಿ ಆದೇಶಿಸಿದ್ದಾರೆ.