ತುಮಕೂರು : ಸಂಭಾವ್ಯ ಕರೊನಾ 3ನೇ ಅಲೆ ತಡೆಗಟ್ಟಲು ರಾಜ್ಯ ಸರ್ಕಾರ ಜಾರಿಗೊಳಿಸಿರುವ ವಾರಾಂತ್ಯ ಕರ್ಫ್ಯೂ ದಿನವಾದ ಭಾನುವಾರ ಅಗತ್ಯಸೇವೆಗಳನ್ನು ಹೊರತುಪಡಿಸಿ ಜಿಲ್ಲೆ ಸ್ತಬ್ಧವಾಗಿತ್ತು. ಬಿಗಿಬಂದೋಬಸ್ತ್ ನಡುವೆಯೂ ಪೊಲೀಸರ ಕಣ್ತಪ್ಪಿಸಿ ಅನಗತ್ಯ ಓಡಾಡುವರಿಗೇನು ಕಡಿಮೆ ಇರಲಿಲ್ಲ.
ವೀಕೆಂಡ್ ಕರ್ಫ್ಯೂ ಶುಕ್ರವಾರ ರಾತ್ರಿ 10 ಗಂಟೆಯಿಂದ ಆರಂಭವಾಗಿದ್ದು, ಸೋಮವಾರ ಬೆಳಗಿನಜಾವ 5 ಗಂಟೆವರೆಗೆ ಇರಲಿದೆ. ಶನಿವಾರ ಸಂಕ್ರಾಂತಿ ಹಬ್ಬ ಹಿನ್ನೆಲೆಯಲ್ಲಿ ಸ್ವಲ್ಪ ರಿಲ್ಯಾಕ್ಸ್ ನೀಡಲಾಗಿತ್ತು. ಭಾನುವಾರ ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಹೆಚ್ಚಿಸಲಾಗಿತ್ತು. ಹಾಗಾಗಿ, ಈ ವಾರ ಸರ್ಕಾರದ ವೀಕೆಂಡ್ ಕರ್ಫ್ಯೂಗೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತಿದೆ.
ಬಿಕೋ ಎನ್ನುತ್ತಿದ್ದ ನಗರ: ನಗರದ ಪ್ರಮುಖ ವಾಣಿಜ್ಯ ಚಟುವಟಿಕೆಯ ಕೇಂದ್ರಗಳಾದ ಎಂ.ಜಿ. ರಸ್ತೆ, ಎಸ್.ಎಸ್.ಪುರಂ, ಎಸ್‌ಐಟಿ ಮುಖ್ಯ ರಸ್ತೆ, ಬಿ.ಎಚ್. ರಸ್ತೆ, ಅಶೋಕ ರಸ್ತೆ, ಹೊರಪೇಟೆ ರಸ್ತೆ, ಮಂಡಿಪೇಟೆ, ಚಿಕ್ಕಪೇಟೆ ರಸ್ತೆಗಳಲ್ಲಿ ಅಗತ್ಯ ವಸ್ತುಗಳ ಮಾರಾಟ ಹೊರತುಪಡಿಸಿ ಉಳಿದಂತೆ ಎಲ್ಲ ಅಂಗಡಿಗನ್ನು ಬಂದ್ ಮಾಡಲಾಗಿತ್ತು. ಹಾಗಾಗಿ, ಸದಾ ಜನದಟ್ಟಣೆಯಿಂದ ಕೂಡಿರುತ್ತಿದ್ದ ನಗರವು ಬಿಕೋ ಎನ್ನುತ್ತಿತ್ತು.
ತುರ್ತು ಸೇವೆಗಳಾದ ಆಸ್ಪತ್ರೆ, ಮೆಡಿಕಲ್ ಶಾಪ್, ಹಾಲಿನ ಅಂಗಡಿ, ತರಕಾರಿ, ಮಾಂಸ, ಮೀನು ಮಾರಾಟ ಅಂಗಡಿಗಳು ಹಾಗೂ ದಿನಸಿ ಅಂಗಡಿಗಳು, ಬೇಕರಿಗಳು ಬಾಗಿಲು ತೆರೆದಿದ್ದು ಈ ಅಂಗಡಿಗಳ ಬಳಿ ಬೆರಳೆಣಿಕೆಯಷ್ಟು ಜನ ಕಂಡು ಬರುತ್ತಿದ್ದರು. ಎಲ್ಲರೂ ಮಾಸ್ಕ್ ಧರಿಸಿ ನಿಯಮ ಪಾಲನೆ ಮಾಡುತ್ತಿದ್ದ ದೃಶ್ಯಗಳು ಕಂಡು ಬಂದವು. ಭಾನುವಾರವಾದರೂ ಮಾಂಸದ ಅಂಗಡಿಗಳ ಮುಂದೆ ಅಷ್ಟಾಗಿ ಜನದಟ್ಟಣೆ ಕಾಣಲಿಲ್ಲ.
ದಂಡಂ ದಶಗುಣಃ: ನಗರದ ಆಯಕಟ್ಟಿನ ಸ್ಥಳಗಳಲ್ಲಿ ತೆರೆಯಲಾಗಿರುವ ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸ್ ತಪಾಸಣೆ ತೀವ್ರಗೊಳಿಸಲಾಗಿತ್ತು. ಹಾಗಾಗಿ, ಅನಗತ್ಯವಾಗಿ ರಸ್ತೆಗಿಳಿದಿದ್ದ ವಾಹನಗಳ ಸವಾರರಿಗೆ ಬಿಸಿ ಮುಟ್ಟಿಸುವ ಜತೆಗೆ ದಂಡ ಪ್ರಯೋಗಿಸಲಾಯಿತು. ಇದಲ್ಲದೆ ಕೊರೊನಾ ನಿಯಮಗಳ ಕಟ್ಟುನಿಟ್ಟು ಪಾಲನೆಗೆ ಪೊಲೀಸರು ತಿಳಿಹೇಳುತ್ತಿದ್ದದ್ದು ಸಾಮಾನ್ಯವಾಗಿತ್ತು.
ಹೋಟೆಲ್‌ಗಳಲ್ಲಿ ಗ್ರಾಹಕರ ಅಭಾವ : ಹೋಟೆಲ್‌ಗಳಲ್ಲಿ ಪಾರ್ಸೆಲ್‌ಗೆ ಅವಕಾಶ ಕಲ್ಪಿಸಲಾಗಿತ್ತಾದರೂ ಸಂಕ್ರಾಂತಿ ಹಬ್ಬಕ್ಕೆ ಕಾಲೇಜು ವಿದ್ಯಾರ್ಥಿಗಳು ಹಾಗೂ ಬಾಡಿಗೆ ರೂಂ, ಪಿಜಿಗಳಲ್ಲಿರುವ ಉದ್ಯೋಗಿಗಳು ಊರಿಗೆ ತೆರಳಿದ್ದರಿಂದ ಪಾರ್ಸೆಲ್ ತೆಗೆದುಕೊಳ್ಳುವರ ಸಂಖ್ಯೆಯು ಕ್ಷೀಣಿಸಿತ್ತು. ಇನ್ನೂ ಗ್ರಾಹಕರಿಲ್ಲದೆ ಬಣಗುಡುತ್ತಿದ್ದ ದೃಶ್ಯಗಳು ನಗರದಾದ್ಯಂತ ಕಂಡು ಬಂದವು.
ಪ್ರಯಾಣಿಕರೇ ಇಲ್ಲ : 2ನೇ ವಾರದ ವಾರಾಂತ್ಯ ಕರ್ಫ್ಯೂ ಹಿನ್ನೆಲೆಯಲ್ಲಿ ರಾಜ್ಯ ಸಾರಿಗೆ ಮತ್ತು ಖಾಸಗಿ ಬಸ್ ನಿಲ್ದಾಣಗಳು ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿದ್ದವು. ಬಸ್‌ಗಳ ಸಂಖ್ಯೆಯೂ ವಿರಳವಾಗಿತ್ತು. ಗಂಟೆಗೊಮ್ಮೆ ಅಲ್ಲೊಂದು, ಇಲ್ಲೊಂದು ಬಸ್‌ಗಳು ಸಂಚರಿಸುತ್ತಿದ್ದನ್ನು ಹೊರತುಪಡಿಸಿದರೆ ಉಳಿದಂತೆ ಬಸ್, ಖಾಸಗಿ ವಾಹನಗಳ ಸಂಚಾರವು ಅಷ್ಟಾಗಿ ಇರಲಿಲ್ಲ.
ಮಾಸ್ಕ್ ಧರಿಸದ 122 ಮಂದಿಗೆ ದಂಡ ! : ಜಿಲ್ಲೆಯಲ್ಲಿ ಮಾಸ್ಕ್ ಧರಿಸದೆ ಓಡಾಡುತ್ತಿದ್ದ 122 ಮಂದಿ ವಿರುದ್ಧ ಕರೊನಾ ಮಾರ್ಗಸೂಚಿ ಉಲ್ಲಂಘನೆ ಪ್ರಕರಣ ದಾಖಲಿಸಿದ್ದು, 23,100 ರೂ., ದಂಡವನ್ನು ಪೊಲೀಸರು ವಸೂಲಿ ಮಾಡಿದ್ದಾರೆ.