ಜಿಲ್ಲೆ

ಪೊಲೀಸರ ಅಮಾನತು ಆದೇಶ ಹಿಂತೆಗೆತಕ್ಕೆ ಒತ್ತಾಯ

ಚಿತ್ರದುರ್ಗ: ಐಪಿಎಲ್ ಕ್ರಿಕೆಟ್ ಟೂರ್ನಿಯಲ್ಲಿ ಜಯ ಸಾಧಿಸಿದ ಆರ್‌ಸಿಬಿ ತಂಡದ ಸಂಭ್ರಮಾಚರಣೆ ವೇಳೆ ಬೆಂಗಳೂರಲ್ಲಿ ಕಾಲ್ತುಳಿತದಿಂದ 11 ಜ ನರು ಅಸು ನೀಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳ ಅಮಾನತು ಮಾಡಿರುವ ರಾಜ್ಯ ಸರ್ಕಾರದ ಕ್ರಮವನ್ನು ರಾಜ್ಯ ರೈತ ಸಂಘ, ಹಸಿರು ಸೇನೆ ಕಾರ‌್ಯಕರ್ತರು ಖಂಡಿಸಿದ್ದಾರೆ.

ಯಾವುದೇ ಪೂರ್ವ ಸಿದ್ಧತೆ ಇಲ್ಲದೆ ಏಕಾಏಕಿ ಕಾರ್ಯಕ್ರಮ ಆಯೋಜಿಸಿದ್ದು ಸರ್ಕಾರದ ವೈಫಲ್ಯವಾಗಿದೆ. ಪೊಲೀಸರಿಗೆ ಧಮಕಿ ಹಾಕಿರುವ ಪ್ರಮುಖ ರಾಜಕಾರಣಿಗಳು ಕಾರ್ಯಕ್ರಮಕ್ಕೆ ಸೂಚನೆ ನೀಡಿದ್ದಾರೆ. ಇದರಿಂದ ಹೃದಯ ವಿದ್ರಾವಕ ದುರಂತವೊಂದು ನಡೆದು ಹೋಗಿದೆ. ಯಾವುದೇ ಮಾನದಂಡದವಿಲ್ಲದೆ ಮಾಡಿರುವ ಪೊಲೀಸರ ಅಮಾನತು ಆದೇಶ ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ದುರ್ಘಟನೆಗೆ ಪೊಲೀಸ್ ಇಲಾಖೆ ಕಾರಣವಲ್ಲ, ರಾಜ್ಯಸರ್ಕಾರವೇ ನೇರ ಹೊಣೆ. ಆದ್ದರಿಂದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಗೃಹ ಸಚಿವ ಡಾ.ಜಿ. ಪರಮೇಶ್ವರ್ ಕೂಡಲೇ ರಾಜೀನಾಮೆ ನೀಡಬೇಕು. ಇಲ್ಲವಾದಲ್ಲಿ ಪ್ರತಿಭಟನೆ ತೀವ್ರಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಸಂಘದ ಜಿಲ್ಲಾಧ್ಯಕ್ಷ ಇ.ಎನ್. ಲಕ್ಷ್ಮೀಕಾಂತ್, ಪಿ. ನಾಗರಾಜ್, ಬಿ. ಶ್ರೀನಿವಾಸ್, ನಾಗರಾಜ್‌ಮೀಸೆ, ವೇಮರೆಡ್ಡಿ, ವೆಂಕಟೇಶ್‌ರೆಡ್ಡಿ, ವೆಂಕಟೇಶ್, ಅಂಜಿನಪ್ಪ ಇತರರು ಇದ್ದರು.