ನಾಪೋಕ್ಲು:
ಕೃಷಿಕರು ತಾವು ಬೆಳೆದ ಕಾಫಿ, ಕರಿಮೆಣಸು ಮತ್ತಿತರ ವಾಣಿಜ್ಯ ಬೆಳೆಗಳನ್ನು ಪೊನ್ನಾಡ್ ರೈತ ಉತ್ಪಾದಕ ಸಂಸ್ಥೆಯ ಮೂಲಕವೇ ಮಾರಾಟ ಮಾಡಿದ್ದಲ್ಲಿ ಸಂಸ್ಥೆಯು ಆರ್ಥಿಕವಾಗಿ ಸದೃಢವಾಗಲು ಸಾಧ್ಯವೆಂದು ನಬಾರ್ಡ್ ಬ್ಯಾಂಕ್‌ನ ಡಿಡಿಎಂ ರಮೇಶ್ ಬಾಬು ಸಲಹೆ ನೀಡಿದರು.
ಸ್ಥಳೀಯ ಕೊಡವ ಸಮಾಜದಲ್ಲಿ ನಡೆದ ಪೊನ್ನಾಡ್ ರೈತ ಉತ್ಪಾದಕ ಸಂಸ್ಥೆಯ ವಾರ್ಷಿಕ ಮಹಾ ಸಭೆಯಲ್ಲಿ ಮಾತನಾಡಿ, ಸಹಕಾರ ಸಂಸ್ಥೆಯನ್ನು ನಡೆಸಲು ನಬಾರ್ಡ್ ವತಿಯಿಂದ ಪ್ರಾಥಮಿಕ ಹಂತದಲ್ಲಿ ಸಹಕಾರ ನೀಡಲಾಗುವುದು. ಮುಂದೆ ಸಂಘದ ಸದಸ್ಯರೇ ಒಗ್ಗೂಡಿ ಸಂಸ್ಥೆಯನ್ನು ಉತ್ತಮವಾಗಿ ಮುನ್ನೇಡೆಸಿಕೊಂಡು ಹೋಗಬೇಕಾಗಿದೆ. ಯಾವುದೇ ಸಂಸ್ಥೆ ಸ್ವಾವಲಂಬನೆ ಮೂಲಕ ದೀರ್ಘಕಾಲಿಕವಾಗಿ ಉಳಿಯಲು ಸಂಘದ ಸದಸ್ಯರ ಒಗ್ಗಟ್ಟು ಮತ್ತು ಸಹಕಾರಿ ಮನೋಭಾವನೆ ಬಹುಮುಖ್ಯವೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪೊನ್ನಾಡ್ ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷರಾದ ಅಪ್ಪಚೇಟ್ಟೋಳ ಮನುಮುತ್ತಪ್ಪ, ಇಶಾ ಕ್ಲಸ್ಟರ್ ಆಧಾರಿತ ವ್ಯಾಪಾರ ಸಂಸ್ಥೆಯ ಸಂಯೋಜಕಿ ರಮಾಪ್ರಿಯಾ, ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ದೇವಯ್ಯ, ವೀರೇಂದ್ರ ಕುಮಾರ್, ಈಶಾ ಫೌಂಡೇಶನ್ ಕೊಯಮತ್ತೂರಿನ ಸ್ವಾಮಿ ನಕುಜಾ, ಸ್ವಾಮಿ ನಳದ, ಸಂಸ್ಥೆಯ ನಿರ್ದೇಶಕರಾದ ಮುಕ್ಕಟಿರ ಎಂ.ವಿನಯ್, ಕೇಟೋಳಿರ ರತ್ನ ಚರ್ಮಣ, ಕಾಟುಮಣಿಯಂಡ ಉಮೇಶ್, ಕೋಡಿರ ಪ್ರಸನ್ನ, ಕುಲ್ಲೇಟಿರ ಅಜಿತ್ ನಾಣಯ್ಯ, ಸಂಸ್ಥೆಯ ಸಂಯೋಜಕಿ ಪವಿತ್ರಾ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೋಮಣ್ಣ ಇದ್ದರು.