ಜಿಲ್ಲೆ

ಪೊನ್ನಂಪೇಟೆಯಲ್ಲಿ ಸಾಂಸ್ಕೃತಿ ಲೋಕ ಅನಾವರಣ

ಗೋಣಿಕೊಪ್ಪ: ಪೊನ್ನಂಪೇಟೆ ನಿನಾದ ವಿದ್ಯಾಸಂಸ್ಥೆಯಲ್ಲಿ ಕ್‌ಗ್ಗಟ್ಟ್‌ನಾಡ್ ಹಿರಿಯ ನಾಗರಿಕ ವೇದಿಕೆ ಮತ್ತು ನಿನಾದ ವಿದ್ಯಾಸಂಸ್ಥೆ ಸಹಯೋಗದಲ್ಲಿ ಕೊಡವ ಭಾಷಿಕ ಜನಾಂಗಗಳಿಗೆ ಆಯೋಜಿಸಿದ್ದ ಉಮ್ಮತ್ ಬೊಳಕ್ ಕಾರ್ಯಕ್ರಮದಲ್ಲಿ ಮಹಿಳೆಯರು ಉಮ್ಮತ್ತಾಟ್, ಪುರುಷರು ಬೊಳಕಾಟ್ ಸ್ಪರ್ಧೆಯಲ್ಲಿ ಪಾಲ್ಗೊಂಡು ಸಂಸ್ಕೃತಿ ಅನಾವರಣಗೊಳಿಸಿದರು.

ಉಮ್ಮತ್ತಾಟ್ ಸ್ಪರ್ಧೆಯಲ್ಲಿ ಅಜ್ಜಿಕುಟ್ಟೀರ, ಚಂಗುಲಂಡ, ಮೂಕಳೇರ, ನಾಗಂಡ ತಂಡಗಳು ಪ್ರದರ್ಶನ ನೀಡಿದವು. ಕೊಡವ ಸೀರೆ, ಪತ್ತಾಕ್, ಜೋಮಾಲೆಯಲ್ಲಿ ಮಹಿಳೆಯರು ಕಂಗೊಳಿಸಿದರು. ಪುರುಷರು ಕುಪ್ಯಚೇಲೆ, ಪೀಚೆಕತ್ತಿ ತೊಟ್ಟು ಬೊಳಕಾಟ್ ಪ್ರದರ್ಶನ ನೀಡಿದರು. ಮೂವತೊಕ್ಲು, ಬೇಗೂರು ತಂಡಗಳು ಭಾಗವಹಿಸಿದವು.

ಚೆಕ್ಕೇರ ಪಂಚಮ್ ತ್ಯಾಜರಾಜ್ ಅವರಿಂದ ಕೊಡವ ಹಾಡು ಮೂಡಿಬಂತು. ಪೊಂದೇನ್ ಚೋದ್‌ಕ್.. ಪೊಮ್ಮಾಲೆ ಕೊಡಗ್‌ನೊಮ್ಮ ನೋಟಿ.. ನೀಡದೇ ಓ ನೀಡದೇ.. ಮುಕ್ಕೋಟಿ ದೇವ ಹಾಡು.. ನಿಪ್ಪ್‌ಲಳ್‌ಪಳ ಬೊಳ್ಳವ್ವ ರಂಜಿಸಿತು.

ಉದ್ಘಾಟನೆ: ಪೊನ್ನಂಪೇಟೆ ಕೊಡವ ಸಮಾಜ ಅಧ್ಯಕ್ಷ ಕಾಳಿಮಾಡ ಎಂ ಮೋಟಯ್ಯ ದೀಪ ಬೆಳಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಉಮ್ಮತ್ತಾಟ್ ಎಂಬುವುದು ಕೊಡವ ಜಾನಪದ ನೃತ್ಯವಾಗಿದ್ದು, 12 ವಿಧದ ನೃತ್ಯದ ಭಂಗಿಗಳಿವೆ. 12 ಜನ ಕಲಾವಿದರು ನೃತ್ಯ ಮಾಡಬೇಕಿದೆ. ಉಮ್ಮತ್ ಎಂದರೆ ಹೂವಿನ ಹೆಸಳಿನಂತಿರುವ ತಾಳದಲ್ಲಿ ಹೆಜ್ಜೆಗೆ ತಕ್ಕವಾಗಿ ಬಡಿದುಕೊಂಡು ಕುಣಿಯುವ ವಿಶಿಷ್ಟ ಕಲೆಯಾಗಿದೆ. ಕಾವೇರಮ್ಮೆ ದೇವಿಯನ್ನು ಆಸ್ವಾದಿಸಿಕೊಂಡು, ಅತಿಥಿಗಳನ್ನು ಸತ್ಕರಿಸುವ ಹಾಡಿನೊಂದಿಗೆ ಹೆಜ್ಜೆ ಹಾಕಲಾಗುತ್ತದೆ. ತಾಳಕ್ಕೆ ತಕ್ಕ ಹೆಜ್ಜೆ ಈ ಕಲೆಯ ವಿಶೇಷತೆಯಲ್ಲೊಂದು ಎಂದರು.


ಬೊಳಕಾಟ್ ಪುರುಷರ ದೇವಸ್ಥಾನದಲ್ಲಿ ಕುಣಿಯುವ ಕಲೆಯಾಗಿದ್ದು, ಇದರಲ್ಲಿ ಕೂಡ 12 ವಿಧದ ಕುಣಿತವಿರುತ್ತದೆ. 12 ಕಲಾವಿದರು ದೇವಸ್ಥಾನ, ಹಬ್ಬದ ದಿನಗಳಲ್ಲಿ ಕುಣಿಯುವ ಆಚರಣೆಯಾಗಿದೆ. ಇಂತಹ ನೃತ್ಯ ಕಲೆಯನ್ನು ಪೋಷಿಸುವುದು ಎಲ್ಲರ ಜವಾಬ್ದಾರಿ. ಸಂಸ್ಕೃತಿ, ನೀತಿಯ ನಡೆ ಉಳಿಯಲು ಆಚರಣೆ ಮುಖ್ಯವಾಗುತ್ತದೆ. ಇಂತಹ ಕಲೆಗೆ ಪ್ರೋತ್ಸಾಹ ನೀಡುತ್ತಿರುವುದು ಮೆಚ್ಚುವ ಕಾರ್ಯವಾಗಿದೆ. ಮಕ್ಕಳಲ್ಲಿ ಸಂಸ್ಕೃತಿ ಪಾಲನೆಗೆ ಒತ್ತು ನೀಡಲಾಗುತ್ತಿದೆ. ಪೊನ್ನಂಪೇಟೆ ಕೊಡವ ಸಮಾಜದ ಮೂಲಕ ಪದ್ಧತಿ, ಉಡುಪು-ತೊಡುಪು ಕಾರ್ಯಕ್ರಮದ ಮೂಲಕ ತರಬೇತಿ ಶಿಬಿರ ನಡೆಸಲಾಗಿದೆ. ಸಣ್ಣ ಮಕ್ಕಳು ಕೂಡ ಕಲಿಯಲು ಉತ್ಸಾಹ ತೋರುತ್ತಿರುವುದು ಕೊಡವ ಸಂಸ್ಕೃತಿ ಪೋಷಣೆಯಲ್ಲಿ ಭರವಸೆ ಹೆಚ್ಚಿಸುತ್ತಿದೆ ಎಂದರು.


ನಿನಾದ ವಿದ್ಯಾಸಂಸ್ಥೆ ಅಧ್ಯಕ್ಷೆ ಚೇಂದೀರ ನಿರ್ಮಲಾ ಬೋಪಣ್ಣ ಮಾತನಾಡಿ, ಒಂದು ದಶಕದ ಹಿಂದೆ ಉಮ್ಮತ್ತಾಟ್ ಮತ್ತು ಬೊಳಕಾಟ್ ಕಲೆಗೆ ಪ್ರೋತ್ಸಾಹಿಸಲು ಕೌಟುಂಬಿಕ ಸ್ಪರ್ಧೆಯಾಗಿ ಆಚರಿಸಿಕೊಂಡು ಬರಲಾಗುತ್ತಿದ್ದು, ಕಲಾವಿದರ ಕೊರತೆಯಿಂದ ಬೊಳಕಾಟ್ ತಂಡವನ್ನು ಗ್ರಾಮದ ಹೆಸರಿನಲ್ಲಿ ನಡೆಸಲಾಗುತ್ತಿದೆ. ಉಮ್ಮತ್ತಾಟ್ ಕಲೆಗೆ ಮಹಿಳೆಯರು ಕುಟುಂಬದ ಹೆಸರಿನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಕಲೆ ಉಳಿಸಲು ಪ್ರಯತ್ನ ನಡೆಸಲಾಗುತ್ತಿದೆ. ಕಲೆ ಪೋಷಣೆಗೆ ಹೆಚ್ಚು ಕುಟುಂಬಗಳು ಭಾಗಿಯಾಗಬೇಕಿದೆ ಎಂದರು.


ವೇದಿಕೆ ಸ್ಥಾಪಕ ಅಧ್ಯಕ್ಷ ಕಾಟಿಮಾಡ ಜಿಮ್ಮಿ ಅಣ್ಣಯ್ಯ, ಹಿರಿಯರಾದ ಚೆಕ್ಕೇರ ಸನ್ನಿ ಸುಬ್ಬಯ್ಯ, ಅಧ್ಯಕ್ಷ ಕೊಟ್ಟ್‌ಕತ್ತಿರ ಪಿ. ಸೋಮಣ್ಣ, ಉಪಾಧ್ಯಕ್ಷ ಮಂಡೇಚಂಡ ಪಿ.ಗಣಪತಿ, ಕಾರ್ಯದರ್ಶಿ ಚೇಂದೀರ ಎಂ. ಬೋಪಣ್ಣ, ಖಜಾಂಚಿ ಐನಂಡ ಕೆ. ಮಂದಣ್ಣ, ಜಂಟಿ ಕಾರ್ಯದರ್ಶಿ ದೇಯಂಡ ಎಂ.ಕಾವೇರಮ್ಮ ಇದ್ದರು.