ಶಿರಸಿ: ನೀರು ಪೂರೈಕೆ ಯೋಜನೆಯ ದೀರ್ಘಾವಧಿ ಪೈಪುಗಳನ್ನು ಪ್ರತ್ಯೇಕ ಮಾರ್ಗದ ಮೂಲಕವೇ ಕೊಂಡೊಯ್ಯಬೇಕೆಂಬ ನಿಯಮವಿದೆ. ಆದರೂ ನಗರಕ್ಕೆ ನಿರಂತರ ನೀರು ಪೂರೈಸುವ ಯೋಜನೆಯ ಬಹುತೇಕ ನೂತನ ಪೈಪ್ಗಳನ್ನು ಮಳೆ ನೀರು ಹರಿಯುವ ನೈಸರ್ಗಿಕ ಕಾಲುವೆಯನ್ನೇ ಇನ್ನಷ್ಟು ಅಗೆದು ಜೋಡಿಸುತ್ತಿದ್ದಾರೆ. ಇದಕ್ಕೆ ಮಣ್ಣು ಮುಚ್ಚಿದ್ದರೂ ಮಳೆಯ ರಭಸಕ್ಕೆ ಅವು ಕೊಚ್ಚಿಹೋಗುತ್ತವೆ. ಪೈಪುಗಳಿಗೆ ಧಕ್ಕೆಯಾಗುವ ಸಾಧ್ಯತೆಯೂ ಇದೆ. ದೀರ್ಘಾವಧಿ ನೀರು ಪೂರೈಕೆ ಯೋಜನೆಯ ಪೈಪುಗಳನ್ನು ಪ್ರತ್ಯೇಕ ಮಾರ್ಗದ ಮೂಲಕವೇ ಕೊಂಡೊಯ್ಯಬೇಕು. ಪದೇಪದೆ ದುರಸ್ತಿಗೆ ಕಾಲುವೆ ಅಗೆಯಬೇಕಾಗುತ್ತದೆ. ಇದರಿಂದ ಮಳೆಗಾಲದಲ್ಲಿ ಸಮಸ್ಯೆ ಹೆಚ್ಚುತ್ತದೆ ಎಂದು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಸಾಮಾಜಿಕ ಕಾರ್ಯಕರ್ತ ಸಂತೋಷ ನಾಯ್ಕ, ಕಾಲುವೆ ತೋಡುವ ಹಣ ಉಳಿಸಲು ಗುತ್ತಿಗೆದಾರರು ನೈಸರ್ಗಿಕ ಕಾಲುವೆಯಲ್ಲಿ ಒಂದೆರಡು ಅಡಿ ಆಳ ತೆಗೆದು ಪೈಪ್ಲೈನ್ ಜೋಡಿಸುತ್ತಿದ್ದಾರೆ. ಈ ಬಗ್ಗೆ ನಗರಸಭೆ ಆಡಳಿತ ಹಾಗೂ ಅಧಿಕಾರಿಗಳು ಗಮನ ಹರಿಸಿ ಸಮರ್ಪಕ ಕಾಮಗಾರಿ ಮಾಡಿಸಲು ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.
ಕಾಲುವೆ ಪಕ್ಕ ಪ್ರತ್ಯೇಕವಾಗಿ ಹೊಂಡ ತೆಗೆದು ಪೈಪುಗಳನ್ನು ಜೋಡಿಸಲಾಗುತ್ತಿದೆ. ಕೆಲವೆಡೆ ಕಾಲುವೆಯಲ್ಲಿ ಪೈಪು ಹಾಯ್ದು ಬಂದಿದೆ. ಐದು ಅಡಿಗೂ ಹೆಚ್ಚು ಆಳದಲ್ಲಿ ಪೈಪ್ ಜೋಡಣೆಯಾಗುವುದರಿಂದ ಸಮಸ್ಯೆ ಆಗುವುದಿಲ್ಲ.
| ಕೇಶವ ಚೌಗುಲೆ