ಯಳಂದೂರು: ತಾಲೂಕಿನ ಕಂದಹಳ್ಳಿ ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಪೈಪ್ ಒಡೆದಿರುವ ಪರಿಣಾಮ ಮೂರು ದಿನದಿಂದ ನೀರಿಗಾಗಿ ಹಾಹಾಕಾರ ಸೃಷ್ಟಿಯಾಗಿದೆ.
ಗ್ರಾಮದಿಂದ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 209 ರಲ್ಲಿ ರಸ್ತೆ ವಿಸ್ತರಣೆ ಕಾರ್ಯ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಇಕ್ಕೆಲಗಳಲ್ಲಿ ಹೊಸ ರಸ್ತೆ ನಿರ್ಮಾಣಕ್ಕಾಗಿ ಜೆಸಿಬಿ ಯಂತ್ರದ ಮೂಲಕ ಹಳ್ಳ ತೋಡಲಾಗುತ್ತಿದೆ. ಈ ಸಂದರ್ಭದಲ್ಲಿ ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಪೈಪ್ ಐದು ಕಡೆಗಳಲ್ಲಿ ಒಡೆದಿದ್ದು, ಗ್ರಾಮಕ್ಕೆ ಓವರ್ ಹೆಡ್‌ಟ್ಯಾಂಕ್ ಮೂಲಕ ನೀರು ಪೂರೈಸುವ ಏಕೈಕ ಪೈಪ್ ಇದಾಗಿದೆ. ಆದರೆ ಇದನ್ನು ದುರಸ್ತಿ ಮಾಡುವ ಗೋಜಿಗೆ ಸಂಬಂಧಪಟ್ಟ ಗುತ್ತಿಗೆದಾರ ಅಥವಾ ಗ್ರಾಮ ಪಂಚಾಯಿತಿ ಸೂಕ್ತ ಕ್ರಮ ವಹಿಸಿಲ್ಲ. ಈಗ ಬೇಸಿಗೆಯಾಗಿದ್ದು ನೀರಿನ ಸಮಸ್ಯೆ ತುಸು ಹೆಚ್ಚಾಗಿಯೇ ಇದೆ. ಇಂತಹ ಸಂದರ್ಭದಲ್ಲಿ ನೀರು ಬಾರದ ಕಾರಣ ಇಲ್ಲಿನ ನಾಗರಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕುಡಿಯುವ ನೀರು ಸಂಗ್ರಹಿಸಲು ದೂರದ ಜಮೀನು, ಕೈಪಂಪುಗಳನ್ನು ಹುಡುಕಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕು ಎಂದು ಗ್ರಾಮದ ಕಂದಹಳ್ಳಿ ಮಹೇಶ್, ದೊರೆಸ್ವಾಮಿ ಸೇರಿದಂತೆ ಅನೇಕರು ಆಗ್ರಹಿಸಿದ್ದಾರೆ.