ಜಿಲ್ಲೆ

ಪೈಪ್‌ಲೈನ್ ಅಳವಡಿಕೆ ಕ್ರಮಬದ್ಧವಾಗಿರಲಿ

ಚಾಮರಾಜನಗರ: ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಕೆ ಕ್ರಮಬದ್ಧವಾಗಿರಲಿ, ರೈತರಿಗೆ ಸಕಾಲಕ್ಕೆ ಬಿತ್ತನೆ ಬೀಜಗಳ ವಿತರಣೆ ಮಾಡಿ, ಮುಚ್ಚಿರುವ ಸರ್ಕಾರಿ ಶಾಲೆಗಳನ್ನು ಮರುಪ್ರಾರಂಭಿಸಿ, ಆಶ್ರಮ ಶಾಲೆಗಳಲ್ಲಿ ಮುಂದಿನ ವರ್ಷ ದಾಖಲಾತಿ ಸಂಖ್ಯೆ ಹೆಚ್ಚಿಸಿ, ರೋಗಿಗಳನ್ನು ಹೆಚ್ಚಿನ ಚಿಕಿತ್ಸೆಯ ನೆಪ ಹೇಳಿ ಮೈಸೂರಿಗೆ ಕಳುಹಿಸದೆ ಜಿಲ್ಲಾಸ್ಪತ್ರೆಯಲ್ಲೇ ಚಿಕಿತ್ಸೆ ನೀಡಿ...

ಇದು ರೇಷ್ಮೆ, ಪಶು ಸಂಗೋಪನೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಅಧ್ಯಕ್ಷತೆಯಲ್ಲಿ ನಗರದ ಜಿಲ್ಲಾ ಪಂಚಾಯಿತಿ ಕೆಡಿಪಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವರು ಮತ್ತು ಶಾಸಕರು ಅಧಿಕಾರಿಗಳಿಗೆ ನೀಡಿದ ಸೂಚನೆ. ಜಲ ಜೀವನ ಮಿಷನ್ ಯೋಜನೆಯಡಿ ಕುಡಿಯುವ ನೀರಿನ ಪೈಪ್‌ಲೈನ್‌ಗಳನ್ನು ಅಳವಡಿಸಲು ಭೂಮಿಯಲ್ಲಿ ನಿಗದಿತ ಅಡಿಗಳಷ್ಟು ಆಳ ತೆಗೆಯುತ್ತಿಲ್ಲ ಎಂದು ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ದೂರಿದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಚಂದ್ರು ಮಾತನಾಡಿ, ಕೆಲವು ಗ್ರಾಮಗಳಲ್ಲಿ ಗ್ರಾಮಸ್ಥರೇ ಈ ಕುರಿತು ದೂರು ಹೇಳುತ್ತಿದ್ದಾರೆ. ಸಮಸ್ಯೆ ಬಗೆಹರಿಸಿ ಎಂದು ಹೇಳಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯಿತಿ ಸಿಇಒ ಮೋನಾ ರೋತ್, 3-4 ಗ್ರಾಮ ಪಂಚಾಯಿತಿಗಳಲ್ಲಿ ದೂರು ಬಂದಿವೆ. ಈ ಕುರಿತು ಪರಿಶೀಲನೆ ಮಾಡುತ್ತೇನೆ ಎಂದರು.

ಸಚಿವ ಕೆ.ವೆಂಕಟೇಶ್ ಮಾತನಾಡಿ, ಕೃಷಿ ಇಲಾಖೆಯಿಂದ ರೈತರಿಗೆ ವಿತರಣೆ ಮಾಡುವ ಬಿತ್ತನೆ ಬೀಜಗಳನ್ನು ಆಯಾ ಕ್ಷೇತ್ರದ ಶಾಸಕರ ಅಧ್ಯಕ್ಷತೆಯಲ್ಲಿ ವಿತರಣೆ ಮಾಡಬೇಕೆಂದು ಸೂಚನೆ ನೀಡಿದರು. ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಸುವರ್ಣಾವತಿ ಜಲಾಶಯವನ್ನು ಅಭಿವೃದ್ಧಿ ಪಡಿಸಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿ ಎಂದು ತಿಳಿಸಿದರು. ಈ ವೇಳೆ ಡಿಸಿ ಶಿಲ್ಪಾನಾಗ್ ಮಾತನಾಡಿ, ಸುವರ್ಣಾವತಿ ಜಲಾಶಯ ಅಭಿವೃದ್ಧಿಯೋಜನೆಯನ್ನು ರೂಪಿಸಿ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯಲು ಕಾಯಲಾಗುತ್ತಿದೆ ಎಂದು ಉತ್ತರಿಸಿದರು. ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ ಮಾತನಾಡಿ, ಮುಚ್ಚುತ್ತಿರುವ ಸರ್ಕಾರಿ ಶಾಲೆಗಳಲ್ಲಿ ತೆರೆಯಬೇಕೆಂದು ಒತ್ತಾಯ ಮಾಡಿದರು.

ಸಭೆಯಲ್ಲಿ ಸಂಸದ ಸುನೀಲ್ ಬೋಸ್, ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್, ವಿಧಾನ ಪರಿಷತ್ತಿನ ಸದಸ್ಯ ಡಾ.ಡಿ.ತಿಮ್ಮಯ್ಯ, ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಚೂಡಾ ಅಧ್ಯಕ್ಷ ಮಹಮದ್ ಅಸ್ಗರ್ ಮುನ್ನ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ಕೆಡಿಪಿ ಸದಸ್ಯರಾದ ಮಹದೇವು, ಸೈಯದ್ ಮುಸೈಯೀಬ್ ಇದ್ದರು.

ಸಚಿವ ಕೆ.ವೆಂಕಟೇಶ್‌ಗೆ ಶ್ಲಾಘನೆ:

ಸಭೆಯಲ್ಲಿ ಜಿಲ್ಲಾ ಉಸ್ತುವಾರಿಸ ಸಚಿವ ಕೆ.ವೆಂಕಟೇಶ್ ಅವರನ್ನು ಶಾಸಕರು ಶ್ಲಾಸಿದರು. ಜಿಲ್ಲೆಯ ರೇಷ್ಮೆ ಇಲಾಖೆ ಪ್ರಗತಿಯಲ್ಲಿ ರಾಜ್ಯದಲ್ಲೇ ನಂ.1 ಸ್ಥಾನದಲ್ಲಿದೆ ಎಂಬ ವಿಷಯವನ್ನು ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ತಿಳಿಸಿ ಅಂಕಿ-ಅಂಶ ಪಡೆದುಕೊಂಡರು. ಮುಡಿಗುಂಡದಲ್ಲಿರುವ ರೇಷ್ಮೆ ಮಾರುಕಟ್ಟೆಯಲ್ಲಿ ಉತ್ತಮ ಅಧಿಕಾರಿಗಳು ಕೆಲಸ ಮಾಡುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ರೇಷ್ಮೆ ಅಧಿಕ ಬೆಲೆಗೆ ಮಾರಾಟವಾಗುತ್ತಿದೆ. ಮೊದಲಿನಂತೆ ರೈತರು ಪ್ರತಿಭಟನೆಗಳನ್ನು ನಡೆಸುತ್ತಿಲ್ಲ. ಸಚಿವರ ಕಾಳಜಿಗೆ ಧನ್ಯವಾದ ಹೇಳಿ ಶ್ಲಾಸಿದರು. ಜತೆಗೆ ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ.ಹನುಮೇಗೌಡ ಮಾಹಿತಿ ನೀಡಿ, ಜಿಲ್ಲೆಗೆ 8 ಹೊಸ ಪಶು ಆಸ್ಪತ್ರೆಗಳಾಗಿವೆ. 7 ಪಶು ವೈದ್ಯರು, 5 ಪಶು ವೈದ್ಯಕೀಯ ಸಹಾಯಕರು ಕೆಲಸ ಮಾಡುತ್ತಿದ್ದಾರೆ. ಹೊಸದಾಗಿ 8 ಕಟ್ಟಡಗಳಿಗೆ ಮಂಜೂರಾಗಿದೆ. ರಾಜ್ಯ ಬಜೆಟ್‌ನಲ್ಲಿ ಪಶುಗಳ ಆಕಸ್ಮಿಕ ಸಾವಿಗೆ ಪರಿಹಾರ ಧನವನ್ನು ಹೆಚ್ಚಳ ಮಾಡಲಾಗಿದೆ ಎಂದು ತಿಳಿಸಿದರು. ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಸಚಿವ ಕೆ.ವೆಂಕಟೇಶ್ ಅವರು ಕಾಳಜಿವಹಿಸಿ ಜಿಲ್ಲೆಗೆ ಕೊಡುಗೆ ನೀಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜನನ ಪ್ರಮಾಣ ಕಡಿಮೆ:

ಜಿಲ್ಲೆಯಲ್ಲಿ ಜನನ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಚಿದಂಬರ ಮಾಹಿತಿ ನೀಡಿದರು. ಗುಂಡ್ಲುಪೇಟೆ ತಾಲೂಕಿನಲ್ಲಿ ಅಧಿಕ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ. ಜಿಲ್ಲೆಗೆ ಸಿಮ್ಸ್ ಅಧೀನದ ಜಿಲ್ಲಾಸ್ಪತ್ರೆ ಹೊರತುಪಡಿಸಿ ಆರೋಗ್ಯ ಇಲಾಖೆಯಿಂದ ಮತ್ತೊಂದು ಜಿಲ್ಲಾಸ್ಪತ್ರೆಯ ತೆರೆಯುವ ಅಗತ್ಯವಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಎ.ಆರ್.ಕೃಷ್ಣಮೂರ್ತಿ, ಕೊಳ್ಳೇಗಾಲದಲ್ಲಿ ಆಸ್ಪತ್ರೆ ತೆರೆಯಲು ಸೂಚನೆ ನೀಡಿದರು. ಬೆಟ್ಟಗುಡ್ಡಗಳಲ್ಲಿರುವ ಆಸ್ಪತ್ರೆಗಳಲ್ಲಿ ನರ್ಸಿಂಗ್ ಮಾಡಿರುವ ಗಿರಿಜನರಿಗೆ ಉದ್ಯೋಗ ನೀಡಿ. ಗುಡ್ಡಗಾಡುಗಳಿಗೆ ಆಶಾ ಕಾರ್ಯಕರ್ತೆಯರು ಭೇಟಿ ನೀಡಲು ಸೂಚನೆ ನೀಡಿ ಎಂದು ತಿಳಿಸಿದರು. ಜಿಲ್ಲಾಸ್ಪತ್ರೆಗೆ ಬರುವ ರೋಗಿಗಳನ್ನು ಮೈಸೂರಿಗೆ ರೆರ್ ಮಾಡಲಾಗುತ್ತಿದೆ. ರಜೆ ದಿನಗಳಲ್ಲಿ, ಸಂಜೆ ವೇಳೆ ವೈದ್ಯರು ಸಿಗುತ್ತಿಲ್ಲ. ಈ ಸಮಸ್ಯೆ ಸರಿಪಡಿಸಿಕೊಳ್ಳಿ ಎಂದು ನಿರ್ದೇಶನ ನೀಡಿದರು.

ದೌರ್ಜನ್ಯದ ವಿರುದ್ಧ ಪ್ರಕರಣ ದಾಖಲಿಸಿ:

ಜಿಲ್ಲೆಯಲ್ಲಿ ಎಸ್ಸಿ/ಎಸ್ಟಿಗಳ ವಿರುದ್ಧ ನಡೆಯುವ ದೌರ್ಜನ್ಯದ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ತಿಳಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಮತ್ತು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮುನಿರಾಜು ಮಾತನಾಡಿ, ಕಳೆದ ವರ್ಷ 36 ಪ್ರಕರಣಗಳು ದಾಖಲಾಗಿವೆ. ಈ ವರ್ಷ 25 ಪ್ರಕರಣಗಳು ದಾಖಲಾಗಿವೆ. 60 ದಿನಗಳ ಒಳಗೆ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಕುಡಿಯುವ ನೀರಿನ ಸಮಸ್ಯೆಯಾಗದಿರಲಿ:

ಜಿಲ್ಲೆಯಲ್ಲಿ ಬೇಸಿಗೆ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಿರಲಿ ಎಂದು ಸಚಿವ ಕೆ.ವೆಂಕಟೇಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಕುರಿತು ಪಿಡಿಒಗಳು ಸೂಕ್ತ ಕ್ರಮವಹಿಸಬೇಕೆಂದು ನಿರ್ದೇಶನ ನೀಡಿದರು.

ನನ್ನ ಸಹಪಾಠಿ ಸರಿಯಾಗಿ ಮಾತಾಡಲಿಲ್ಲ:

ಜಿಲ್ಲೆಯಲ್ಲಿ ಅರಣ್ಯ ಭೂಮಿ ಪರಿವರ್ತನೆ, ಕಂದಾಯ ಭೂಮಿ ಪರಿವರ್ತನೆ ಹಾಗೂ ರೈತರ ಸಾಗುವಳಿ ಪ್ರಕರಣಗಳ ಬಗ್ಗೆ ಕೈಗೊಂಡಿರುವ ಕ್ರಮಗಳೇನು ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಂದ ಅನುಪಾಲನಾ ವರದಿ ಪಡೆದುಕೊಂಡ ಶಾಸಕ ಎ.ಆರ್.ಕೃಷ್ಣಮೂರ್ತಿ, ನಾನು ಸದನದಲ್ಲಿ ಈ ವಿಚಾರ ಚರ್ಚೆ ಮಾಡಿದೆ. ನಾನು ಗೌರವಯುತವಾಗಿ ಮಾತನಾಡಿದೆ. ನನ್ನ ಸಹಪಾಠಿ ಮಾತನಾಡಲಿಲ್ಲ ಎಂದರು.