ಗೋಣಿಕೊಪ್ಪ; ಬೆಂಕಿ ಕಾಣಿಸಿಕೊಂಡ ಪರಿಣಾಮ ಪಟ್ಟಣದ ಪೇಂಟ್ ಅಂಗಡಿಯೊಂದು ಮಂಗಳವಾರ ಮುಂಜಾನೆ ಸುಟ್ಟು ಭಸ್ಮವಾಗಿದೆ.
ಬೆಂಕಿಗೆ ನಿಖರ ಕಾರಣ ತಿಳಿದು ಬಂದಿಲ್ಲವಾದರೂ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ನಾಶವಾಗಿವೆ. ಮೂರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ದಳ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಸಮೀಪದಲ್ಲೇ ಇದ್ದ ಬಟ್ಟೆ ಮಳಿಗೆಗೆ ಬೆಂಕಿ ಹೊತ್ತಿಕೊಳ್ಳುವುದನ್ನು ತಪ್ಪಿಸಿದರು.
ಭೇರು ಪೇಂಟ್ಸ್ ಮಳಿಗೆಯಲ್ಲಿ ಬೆಳಗ್ಗೆ 6.40ಕ್ಕೆ ಕಾಣಿಸಿಕೊಂಡ ಬೆಂಕಿ ಬಹುವೇಗದಲ್ಲಿ ಆವರಿಸಿತು ಎಂದು ಮಾಲೀಕ ಹಿಮ್ಮತ್‌ರಾವ್ ಹೇಳಿದರು.
ಗೋಣಿಕೊಪ್ಪ ಅಗ್ನಿಶಾಮಕ ದಳದ ಟ್ಯಾಂಕ್‌ನಲ್ಲಿ ನೀರಿನ ಶೇಖರಣೆ ಕಡಿಮೆ ಇದ್ದ ಕಾರಣ ಪಿರಿಯಾಪಟ್ಟಣದಿಂದ ಅಗ್ನಿ ಶಮನ ವಾಹನ ಕರೆಸಿಕೊಳ್ಳಲಾಯಿತು. ನೀರಿನ ಕೊರತೆ ನೀಗಿಸಲು ಗ್ರಾಮ ಪಂಚಾಯಿತಿ ಟ್ಯಾಂಕರ್ ಮೊರೆ ಹೋಗಲಾಯಿತು. 5 ಟ್ಯಾಂಕ್ ನೀರು ಬಳಸಿಕೊಂಡು ಬೆಂಕಿ ನಂದಿಸಲಾಯಿತು. ಈ ಸಂದರ್ಭ ವಾಹನಗಳ ದಟ್ಟಣೆ ಹೆಚ್ಚಾಗಿ, ಬೈಪಾಸ್ ಮಾರ್ಗ ಅನುಸರಿಸಲಾಯಿತು.
ಪೊಲೀಸ್ ವೃತ್ತ ನಿರೀಕ್ಷಕ ಗೋವಿಂದರಾಜು, ಉಪನಿರೀಕ್ಷಕ ದೀಕ್ಷಿತ್ ಸ್ಥಳದಲ್ಲಿ ಹಾಜರಿದ್ದು ಕಾರ್ಯಾಚರಣೆಗೆ ಸಹಕರಿಸಿದರು.