ವಿರಾಜಪೇಟೆ: ಪಟ್ಟಣ ವ್ಯಾಪ್ತಿಯಲ್ಲಿ ವಾಹನ ನಿಲುಗಡೆಗೆ ಸುಂಕ ಎತ್ತುವಳಿ(ಪೇ ಪಾರ್ಕಿಂಗ್) ಕುರಿತು ಉಂಟಾದ ಗದ್ದಲ, ಪ್ರತಿ ಪಕ್ಷಗಳ ಸದಸ್ಯರ ಪ್ರತಿಭಟನೆ ನಡುವೆಯೂ ತಮ್ಮ ನಿಲುವು ಬದಲಿಸದ ಆಡಳಿತ ನಿರ್ಣಯ ಕೈಗೊಂಡಿದ್ದರಿಂದ ಪೂರ್ವಭಾವಿ ಸಭೆ ಮುಂದೂಡಲ್ಪಟ್ಟಿತು.
ವಿರಾಜಪೇಟೆ ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ಸುಶ್ಮಿತಾ ಅಧ್ಯಕ್ಷತೆಯಲ್ಲಿ ನಡೆದ ಬಜೆಟ್ ಪೂರ್ವಭಾವಿ ಸಭೆ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಸದಸ್ಯ ಸಿ.ಕೆ.ಪೃಥ್ವಿನಾಥ್ ಕಳೆದ ವರ್ಷದ ಅಯವ್ಯಯದಲ್ಲಿ ಮಂಡಿಸಿದ್ದ ವಿಚಾರಗಳು ಯಾವುದೂ ಅನುಷ್ಠಾನಗೊಂಡಿಲ್ಲ. ನಡೆದಿರುವ ಅಭಿವೃದ್ಧಿ ಕಾರ್ಯಗಳ ಮಾಹಿತಿ ನೀಡಿ ಎಂದು ಆಗ್ರಹಿಸಿದರು.
ಮಹಮ್ಮದ್ ರಫಿ ಮಾತನಾಡಿ, ಸಾರ್ವಜನಿಕರಿಗೆ ಹೊರೆಯಾಗುತ್ತದೆ ಎಂಬ ಕಾರಣಕ್ಕೆ ಕಳೆದ ಬಾರಿ ವಾಹನ ಸುಂಕ ಎತ್ತುವಳಿ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಲಾಗಿತ್ತು. ಈ ಬಾರಿ ವಾಹನ ಸುಂಕ ಎತ್ತುವಳಿಗೆ ಟೆಂಡರ್ ಕರೆಯಲಾಗಿದೆ. ಇದಕ್ಕೆ ಅವಕಾಶ ನೀಡುವುದಿಲ್ಲ ಎಂದರು. ಈ ವೇಳೆ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.
ನಾಮನಿರ್ದೇಶನ ಸದಸ್ಯ ಕೂತಂಡ ಸಚಿನ್ ಮಾತನಾಡಿ, ವಾಹನ ಸುಂಕ ಎತ್ತ್ತುವಳಿ ಟೆಂಡರ್ ಕರೆದಿರುವುದರಿಂದ ಪುಸಭೆಗೆ ಆದಾಯ ಹೆಚ್ಚಾಗುತ್ತದೆ. ಅಂಗಡಿ ಮಾಲೀಕರು ತಮ್ಮ ವಾಹನವನ್ನು ಬೆಳಗ್ಗಿನಿಂದ ಸಂಜೆವರೆಗೆ ತಮ್ಮ ಅಂಗಡಿ ಮುಂದೆ ನಿಲ್ಲಿಸುವುದರಿಂದ ಗ್ರಾಮೀಣ ಪ್ರದೇಶದಿಂದ ಬರುವ ಸಾರ್ವಜನಿಕರು ಪರದಾಡುವಂತಾಗಿದೆ. ಕಳೆದ ಸಭೆಯಲ್ಲಿಯೇ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ. ವಿರೋಧ ವ್ಯಕ್ತಪಡಿಸುತ್ತಿರುವರು ಕೂಡ ಕಡತಕ್ಕೆ ಸಹಿ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಟೆಂಡರನ್ನು ರದ್ದು ಮಾಡುವುದು ಬೇಡ ಎಂದಾಗ ಆಡಳಿತ ಪಕ್ಷ ಸದಸ್ಯರು ಧ್ವನಿಗೂಡಿಸಿದರು.
ಪೃಥ್ವಿನಾಥ್ ಮಾತನಾಡಿ, ಟೆಂಡರ್ ಪ್ರಕ್ರಿಯೆಗೆ ವಿರೋಧ ಪಕ್ಷದ ವಿರೋಧ ಇದೆ. ಸರ್ಕಾರಿ ಕಚೇರಿ ಮಿನಿ ವಿಧಾನಸೌಧದಲ್ಲಿಯೇ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಪಟ್ಟಣದ ಬಹುತೇಕ ಕಡೆ ಅಂಗಡಿಗಳಲ್ಲಿ ಸೆಲ್ಲಾ ಪಾರ್ಕಿಂಗ್ ಇಲ್ಲ. ರಸ್ತೆಬದಿ ವಾಹನ ನಿಲ್ಲಿಸಿದರೆ ಪುರಸಭೆಯಿಂದ ಅವರಿಗೆ ಸುಂಕದ ಹೊರೆ ಹಾಕುತ್ತಿದ್ದಿರಾ? ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷರು, ನಾವು ತೆಗೆದುಕೊಂಡಿರುವ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು. ವಾಹನ ನಿಲುಗಡೆಗೆ ಸುಂಕ ಎತ್ತುವಳಿ ನಿರ್ಣಯದ ಗದ್ದಲದಿಂದ ಬಜೆಟ್ ಪೂರ್ವ ಸಭೆಯಲ್ಲಿ ಯಾವುದೇ ವಿಷಯಗಳು ಚರ್ಚೆಯಾಗಲಿಲ್ಲ.
ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷೆ ಅಂಜಪರವಂಡ ಯಶೋದಾ, ಮುಖ್ಯಾಧಿಕಾರಿ ಚಂದ್ರಕುಮಾರ್, ಅಭಿಯಂತರ ಹೇಮಕುಮಾರ್, ಸದಸ್ಯರಾದ ಡಿ.ಪಿ.ರಾಜೇಶ್, ರಾಫಿ, ಮತೀನ್, ಅಗಸ್ಟಿನ್ ಬೆನ್ನಿ, ರಜನಿಕಾಂತ್, ಫಸಿಯಾ ತಬಸಮ್, ತಸ್ಲಿಂ ಅಕ್ತರ್, ಸುನೀತಾ ಇತರರು ಇದ್ದರು.