ಜಿಲ್ಲೆ

ಪೆನ್ಶನ್ ಶುಲ್ಕ ಏರಿಕೆಗೆ  ಕೈಗಾರಿಕೆಗಳ ಸಂಘ ವಿರೋಧ

ಮೈಸೂರು: ವಿದ್ಯುತ್ ದರ ಪರಿಷ್ಕರಣೆ ಸ್ವಾಗತವಾದರೂ ಸ್ವಲ್ಪ ಪ್ರಮಾಣದ ಕಡ್ಡಾಯ ಶುಲ್ಕ ಮತ್ತು ಯುನಿಟ್‌ಗೆ 36 ಪೈಸೆ ವಿದ್ಯುತ್ ಇಲಾಖೆ ನೌಕರರ ಪೆನ್ಷನ್ ಮತ್ತು ಗ್ರಾಚ್ಯುಟಿ ಹಣದ ಹೊರೆ ಅಸಮಾಧಾನ ತಂದಿದೆ ಎಂದು ಮೈಸೂರು ಕೈಗಾರಿಕೆಗಳ ಸಂಘ, ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಪರಿಷತ್ ಹೇಳಿದೆ.

ಸಾರ್ವಜನಿಕ ವಿಚಾರಣೆಯಲ್ಲಿ ಪ್ರಸ್ತಾಪಿಸಿದ್ದ ವಿದ್ಯುತ್ ನಿಶ್ಚಿತ ಠೇವಣಿ ಮೇಲಿನ ಬಡ್ಡಿಯನ್ನು ಎಂಸಿಎಲ್‌ಆರ್ ದರಕ್ಕೆ ನಿಗದಿ ಪಡಿಸಬೇಕೆಂಬ ಪ್ರಸ್ತಾವನೆಯನ್ನು ಪರಿಗಣಿಸಿಲ್ಲ. ಆರ್‌ಬಿಐ ರೆಪೊ ದರವನ್ನೇ ಮುಂದುವರಿಸಿರುವುದು ಅಸಮಾಧಾನ ತಂದಿದೆ ಎಂದು ಮೈಸೂರು ಕೈಗಾರಿಕೆಗಳ ಸಂಘದ ಅಧ್ಯಕ್ಷ ಪಿ.ವಿಶ್ವನಾಥ್ ಮತ್ತು ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಪರಿಷತ್ ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್ ಜೈನ್ ಪ್ರಕಟಣೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ವಿದ್ಯುತ್ ಗ್ರಾಹಕರ 8,000 ಕೋಟಿ ರೂ. ಠೇವಣಿ ಹಣ ಇಂದು 6% ಬಡ್ಡಿ ದರದಲ್ಲಿ ಎಸ್ಕಾಂಗಳು ಬಳಸುತ್ತಿವೆ. ಕರ್ನಾಟಕ ವಿದ್ಯುತ್ ಶಕ್ತಿ ನಿಯಂತ್ರಣ ಆಯೋಗ ಆದೇಶಿಸಿರುವ ವಿದ್ಯುತ್ ದರ ಇಳಿಕೆ ರೂಪದ ಪರಿಷ್ಕರಣೆ ಎಲ್ಲ ವರ್ಗದ ಗ್ರಾಹಕರಿಗೆ ವಿಶೇಷವಾಗಿ ಎಲ್ಲ ವರ್ಗದ ಕೈಗಾರಿಕೆಗಳಿಗೆ ಹೆಚ್ಚಿನ ಉಳಿತಾಯ ಆಗಲಿರುವುದರಿಂದ ಸಂತಸ ತಂದಿದೆ ಎಂದು ತಿಳಿಸಿದ್ದಾರೆ.

ಕನಿಷ್ಠ ಪ್ರಮಾಣದ ನಿಶ್ಚಿತ ಶುಲ್ಕ ಏರಿಕೆ ಮತ್ತು ಕೆಪಿಟಿಸಿಎಲ್ ಮತ್ತು ಎಸ್ಕಾಂ ಸಿಬ್ಬಂದಿ, ನೌಕರರ ಗ್ರಾಚ್ಯುಟಿ ಮತ್ತು ಪೆನ್ಷನ್ ಶುಲ್ಕ 36 ಪೈಸೆ ಏರಿಕೆ ಅತೃಪ್ತಿ ತಂದಿದೆ ಎಂದು ಹೇಳಿದ್ದಾರೆ.