ಹಾಸನ: ಇಪಿಎಸ್ 95 ಪಿಂಚಣಿ ಹೆಚ್ಚಳ ಮಾಡಬೇಕು ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಿಎಫ್, ಇಪಿಎಸ್ ಪಿಂಚಣಿ ಕ್ಷೇಮಾಭಿವೃದ್ಧಿ ಸಂಘದಿಂದ ಶುಕ್ರವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಸಂಘದ ಅಧ್ಯಕ್ಷ ಎಸ್. ಪುಟ್ಟೇಗೌಡ ಸುದ್ದಿಗಾರರೊಂದಿಗೆ ಮಾತನಾಡಿ, 78 ಲಕ್ಷ ಇಪಿಎಸ್-95 ಪಿಂಚಣಿದಾರರಿದ್ದಾರೆ. ಎಲ್ಲರಿಗೂ ಕೇವಲ 1 ಸಾವಿರ ರೂ.ಗಳ ಪಿಂಚಣಿಯನ್ನು ಪಾವತಿ ಮಾಡಲಾಗುತ್ತಿದೆ. ಅದನ್ನು ಕನಿಷ್ಠ 9 ಸಾವಿರ ರೂ.ಗೆ ಹೆಚ್ಚಳ ಮಾಡಬೇಕು. ಅಭಿವೃದ್ಧಿ ಪಥದತ್ತ ಸಾಗುತ್ತಿರುವ ದೇಶದಲ್ಲಿ ಪ್ರಸ್ತುತ ನೀಡಲಾಗುತ್ತಿರುವ ಪಿಂಚಣಿಯಿಂದ ಜೀವನ ನಡೆಸುವುದು ಕಷ್ಟ ವಾಗಿದೆ. ಕೂಡಲೇ ಪ್ರಧಾನಿ ನರೇಂದ್ರ ಮೋದಿ ಅವರು ಈ ಬಗ್ಗೆ ಗಮನ ಹರಿಸಿ ಪಿಂಚಣಿ ಹೆಚ್ಚಿಸಿ ವಯೋವೃದ್ಧರ ಹಿತ ಕಾಪಾಡಬೇಕು ಎಂದು ಮನವಿ ಮಾಡಿದರು.
ದೇಶದ ಬೆಳವಣಿಗೆ ಮತ್ತು ಅಭಿವೃದ್ಧಿಗಾಗಿ ಸಮಾನ ಕೊಡುಗೆ ಮತ್ತು ತ್ಯಾಗವನ್ನು ಹೊಂದಿರುವ ನಾವು ಇಪಿಎಸ್-95 ಪಿಂಚಣಿದಾರರನ್ನು ಅಸಮಾನವಾಗಿ ಪರಿಗಣಿಸಲಾಗುತ್ತಿದೆ. 2013ರಲ್ಲಿ ಭಗತ್ ಸಿಂಗ್ ಖೋಶ್ಯಾರಿ ನೇತೃತ್ವದ ರಾಜ್ಯಸಭೆಯ ವಿಶೇಷ ಸಮಿತಿಯು ತಮ್ಮ ವರದಿಯಲ್ಲಿ 3000 ರೂ. ಇಪಿಎಸ್-95 ಪಿಂಚಣಿದಾರರಿಗೆ ಕನಿಷ್ಠ ಪಿಂಚಣಿ ಜತೆಗೆ ಕಳೆದ 10 ವರ್ಷದಿಂದ ಈ ಬಗ್ಗೆ ಪಿಂಚಣಿ ಹೆಚ್ಚಳಕ್ಕೆ ಹೋರಾಟ ಮಾಡಿಕೊಂಡು ಬರಲಾಗಿದೆ. ಆದರೆ ಈವರೆಗೂ ಹೆಚ್ಚಳವಾಗದೆ ಇರುವುದು ಬೇಸರದ ಸಂಗತಿ. ವಯೋ ವೃದ್ಧರ ಸಮಸ್ಯೆಗಳನ್ನು ಪರಿಗಣಿಸಿ ಕೂಡಲೇ ಪಿಂಚಣಿ ಹೆಚ್ಚಿಸಬೇಕು ಎಂದು ಒತ್ತಾಯಿಸಿರು.
ಹಲವು ವರ್ಷಗಳಿಂದ ದೇಶದಾದ್ಯಂತ ಇಪಿಎಸ್-95 ಪಿಂಚಣಿದಾರರು ಶಾಂತಿಯುತವಾಗಿ ಆಂದೋಲನ ನಡೆಸುತ್ತಿದ್ದಾರೆ ಮತ್ತು ಗೌರವಾನ್ವಿತ ಪ್ರಧಾನ ಮಂತ್ರಿಗಳಿಗೆ ಸಾಮಾಜಿಕ ಮತ್ತು ಆರ್ಥಿಕ ಭದ್ರತೆಯನ್ನು ವಿಸ್ತರಿಸಲು ಜ್ಞಾಪಕ ಪತ್ರವನ್ನು ನೀಡಲಾಗಿದೆ. ಆದರೆ ಯಾವುದೇ ಕ್ರಮಗಳಿಲ್ಲದೆ ವೃದ್ಧಾಪ್ಯ ಪಿಂಚಣಿದಾರರು ಮತ್ತು ಹಿರಿಯ ನಾಗರಿಕರು ತೀವ್ರ ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದಾರೆ. ಕನಿಷ್ಠ ಪಿಂಚಣಿಯನ್ನು 9000 ರೂಗೆ ಹೆಚ್ಚಿಸಬೇಕು. ಪಿಂಚಣಿ ಜೊತೆಗೆ ಆತ್ಮೀಯ ಭತ್ಯೆಯ ಪಾವತಿ, ಗೌರವಾನ್ವಿತ ಸುಪ್ರೀಂ ಕೋರ್ಟ್ ಆದೇಶದಂತೆ ನಿಜವಾದ ಸಂಬಳದ ಮೇಲೆ ಹೆಚ್ಚಿನ ಪಿಂಚಣಿ ಬಿಡುಗಡೆ ಮಾಡಬೇಕು ಹಾಗೂ ಎಲ್ಲಾ ಇಪಿಎಸ್ 95 ಪಿಂಚಣಿದಾರರಿಗೆ ಮತ್ತು ಅವರ ಅವಲಂಬಿತರಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ನೀಡಬೇಕು ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಸಂಘದ ಕಾರ್ಯಾಧ್ಯಕ್ಷ ಡಿ. ಮದನ್ ಮೋಹನ್ ಕುಮಾರ್, ಪ್ರಧಾನ ಕಾರ್ಯದರ್ಶಿ ವೈ.ಎಸ್.ರಾಮಭದ್ರಾಯ್, ಖಜಾಂಚಿ ಬೆಟ್ಟಾಚಾರ್, ಉಪಾಧ್ಯಕ್ಷ ಕೆ.ವಿ. ಅಶ್ವಥ್ ನಾರಾಯಣ ಶೆಟ್ಟಿ, ಚಾಮೇಗೌಡ, ಸ್ವಾಮಿ ಇತರರು ಉಪಸ್ಥಿತರಿದ್ದರು.