ಜಿಲ್ಲೆ

ಪೆನ್‌ಡ್ರೈವ್ ಮಾಹಿತಿ ಬಹಿರಂಗಪಡಿಸಿ

ಮೈಸೂರು: ಪೆನ್ ಡ್ರೈವ್‌ನಲ್ಲಿರುವ ಮಾಹಿತಿಯನ್ನು ಎಚ್.ಡಿ.ಕುಮಾರಸ್ವಾಮಿ ಬಹಿರಂಗಪಡಿಸಲಿ. ಅದಾದ ಒಂದು ಗಂಟೆಯೊಳಗೆ ನನ್ನ ಬಳಿಯಿರುವ ಪೆನ್‌ಡ್ರೈವ್ ಮಾಹಿತಿ ಬಹಿರಂಗಪಡಿಸಲಾಗುವುದು ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಸವಾಲು ಹಾಕಿದರು.


ಕುಮಾರಸ್ವಾಮಿ ಪೆನ್‌ಡ್ರೈವ್ ಇಟ್ಟುಕೊಂಡು ಆರೋಪ ಮಾಡುತ್ತಿದ್ದಾರೆ. ನನ್ನ ಬಳಿಯೂ 18 ನಿಮಿಷದ 6 ಎಪಿಸೋಡ್‌ನ ಪೆನ್‌ಡ್ರೈವ್ ಇದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.


ರಾಜ್ಯ ಸರ್ಕಾರದ ವಿರುದ್ಧ ಎಚ್.ಡಿ.ಕುಮಾರಸ್ವಾಮಿ ಹಿಟ್ ಆ್ಯಂಡ್ ರನ್ ಆರೋಪ ಮಾಡುತ್ತಿದ್ದಾರೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಇಡೀ ರಾಜ್ಯಕ್ಕೆ ಮಾಸ್ ಲೀಡರ್. ಅವರನ್ನು ಕುಮಾರಸ್ವಾಮಿ ಏನೂ ಮಾಡಿಕೊಳ್ಳಲಾಗದು ಎಂದು ತಿರುಗೇಟು ನೀಡಿದರು.


ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ವಿರುದ್ಧ ಇಲಾಖೆ ಅಧಿಕಾರಿಗಳು ಪತ್ರ ಬರೆದಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ರಾಜ್ಯಪಾಲರಿಗೆ ಬರೆದಿರುವ ಪತ್ರದಲ್ಲಿ 8 ಜನರ ಸಹಿಯನ್ನು ಒಬ್ಬರೇ ಮಾಡಿದ್ದಾರೆ. ಕೃಷಿ ನಿರ್ದೇಶಕರು, ಜಂಟಿ ನಿರ್ದೇಶಕರು ತಮಗೂ ಪತ್ರಕ್ಕೂ ಸಂಬಂಧವಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ ಎಂದರು.


ಕುಮಾರಸ್ವಾಮಿ ಮತ್ತು ಅವರ ತಂಡ ಮಾತ್ರ ಒಕ್ಕಲಿಗ ಸಮುದಾಯದ ಮುಖಂಡರೇ? ಚಲುವರಾಯಸ್ವಾಮಿ ಒಕ್ಕಲಿಗ ಸಮುದಾಯದ ನಾಯಕ. 5 ಚುನಾವಣೆಗಳಲ್ಲಿ ಸೋತಿದ್ದರೂ ಈ ಬಾರಿ ಗೆದ್ದು ಮಂತ್ರಿಯಾಗಿರುವುದನ್ನು ಕೆಲವರಿಗೆ ಸಹಿಸಿಕೊಳ್ಳಲಾಗುತ್ತಿಲ್ಲ ಎಂದು ಎಚ್‌ಡಿಕೆ ವಿರುದ್ಧ ಹರಿಹಾಯ್ದರು.
ಕುಮಾರಸ್ವಾಮಿ ಪದೇ ಪದೆ ವಿದೇಶ ಪ್ರವಾಸ ಕೈಗೊಳ್ಳುತ್ತಿರುವ ಉದ್ದೇಶವೇನು? ಯಾವ ಕಾರಣಕ್ಕೆ ಹೋಗುತ್ತಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಲಿ. ವಿದೇಶದಲ್ಲಿ ಹಣ ಹೂಡಿಕೆಗೆ ಹೋಗಿದ್ದರೇ ಅಥವಾ ಬೇರೆ ಯಾವ ಕಾರಣಕ್ಕೆ ಹೋಗಿದ್ದರೇ ಎಂಬುದನ್ನು ಬಹಿರಂಗ ಪಡಿಸಬೇಕು ಎಂದು ಆಗ್ರಹಿಸಿದರು.
ಮೂಗರ್ಜಿಗಳ ಆಧಾರದ ಮೇಲೆ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರು ಸರ್ಕಾರಕ್ಕೆ ಹೇಳಿದ್ದಾರೆ. ಈ ಮೂಲಕ ರಾಜಭವನವನ್ನು ಬಿಜೆಪಿ ದುರುಪಯೋಗ ಮಾಡಿಕೊಂಡಿದೆ ಎಂದು ದೂರಿದರು.


ಎಸ್ಸಿ, ಎಸ್ಟಿ ಸಮುದಾಯಕ್ಕೆ ಮೀಸಲಿಟ್ಟ ಅನುದಾನವನ್ನು ಅನ್ಯ ಉದ್ದೇಶಕ್ಕೆ ಬಳಕೆ ಮಾಡಿಕೊಂಡಿಲ್ಲ. ಆದರೆ, ಬಿಜೆಪಿಯವರು ಜನರಿಗೆ ತಪ್ಪು ಸಂದೇಶ ರವಾನೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.


ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಸ್ಸಿ, ಎಸ್ಟಿ ಅನುದಾನವನ್ನು ಬೇರೆ ಉದ್ದೇಶಕ್ಕೆ ಬಳಸಿಕೊಂಡಿದ್ದಾರೆ. ಇದಕ್ಕೆ ಬಿಜೆಪಿಯೇ ಕಾರಣ. ಸಚಿವರಾಗಿದ್ದ ಗೋವಿಂದ ಕಾರಜೋಳ ಇದಕ್ಕೆ ಮುನ್ನುಡಿ ಬರೆದಿದ್ದಾರೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆ ರೀತಿ ಮಾಡಿಲ್ಲ ಎಂದರು.