ಜಿಲ್ಲೆ

ಪೆನ್‌ಡ್ರೈವ್ ಪ್ರಕರಣ,ಕೇಂದ್ರದಿಂದ ಅಸಹಕಾರ

ಚಿತ್ರದುರ್ಗ:ಹಾಸನ ಸಂಸದ ಪ್ರಜ್ವಲ್‌ರೇವಣ್ಣ ‘ಪೆನ್‌ಡ್ರೈವ್’ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ರಾಜ್ಯಸರ್ಕಾರಕ್ಕೆ ಸಹಕಾರ ಕೊಡುತ್ತಿಲ್ಲವೆಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ದೂರಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜತಾಂತ್ರಿಕ ಪಾಸ್‌ಪೋರ್ಟ್ ಕೊಡುವ ಮೂಲಕ ಕೇಂದ್ರ,ಪ್ರಜ್ವಲ್‌ರನ್ನು ದೇಶ ಬಿಟ್ಟು ಕಳಿಸಿದೆ. ಭಾರತದಲ್ಲೇ ಎಲ್ಲೇ ಇದ್ದಿದ್ದರೂ ಹತ್ತು ನಿಮಿಷದಲ್ಲಿ ಸರ್ಕಾರ ಪ್ರಜ್ವಲ್‌ರನ್ನು ಕರೆತರುತ್ತಿತ್ತು. ಆದರೆ ಬಿಜೆಪಿ-ಜೆಡಿಎಸ್ ಜೊತೆ ಮೈತ್ರಿಯಿಂದಾಗಿ ಬಿಜೆಪಿ ಪ್ರಜ್ವಲ್ ಪ್ರಕರಣ ಸುಮ್ಮನಿದೆ ಎಂದು ಕೇಂದ್ರದ ವಿರುದ್ಧ ದೂರಿದ ಅವರು,ಸಿಬಿಐ ಮತ್ತಿತರ ತನಿಖಾ ಸಂಸ್ಥೆಗಳ ಮೂಲಕ ಆರೋಪಿಯನ್ನು ಹುಡುಕಲಿ,ಪಾಸ್‌ಪೋರ್ಟ್ ರದ್ದುಪಡಿಸಲಿ ಎಂದು ಒತ್ತಾಯಿಸಿದರು.
ಎಸ್‌ಐಟಿ ಪೆನ್‌ಡ್ರೈವ್ ಪ್ರಕರಣವನ್ನು ಸರಿಯಾಗಿ ತನಿಖೆ ಮಾಡುತ್ತಿಲ್ಲ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು,ಎಸ್‌ಐಟಿ ಸ್ವತಂತ್ರವಾಗಿ ತನಿಖೆ ನಡೆಸುತ್ತಿದೆ. ಸಾವಿರಾರು ಮಹಿಳೆಯರಿಗೆ ಅನ್ಯಾಯವಾಗಿದೆ.
ಚುನಾವಣೆ ಬಳಿಕ ರಾಜ್ಯಸರ್ಕಾರ ಪತನವಾದರೆ ನಾವು ಜವಾಬ್ದಾರರಲ್ಲವೆಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು,ಚುನಾವಣೆ ಬಳಿಕ ಕಾಂಗ್ರೆಸ್ಸಿಗೆ ಜೆಡಿಎಸ್,ಬಿಜೆಪಿ ನಾಯಕರು ಬರುತ್ತಾರೆ. ಈ ಎರಡೂ ಪಕ್ಷಗಳಿಂದ 25-30 ಶಾಸಕರು ನಮ್ಮ ಸೇರುತ್ತಾರೆ.
ನಮ್ಮ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿದೆ. ಗೃಹ ಸಚಿವ ಗೃಹ ಡಾ.ಜಿ.ಪರಮೇಶ್ವರ್ ಅವರು ದಕ್ಷತೆಯಿಂದ ಖಾತೆಯ ನ್ನು ನಿರ್ವಹಿಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಗಮನಹರಿಸಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹ ದಗೆಟ್ಟಿಲ್ಲ,ಹದಗೆಡುವುದಿಲ್ಲವೆಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರ ಟೀಕೆಗೆ ಪ್ರತಿಕ್ರಿಯಿಸಿದರು.
ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ ಪ್ರಕರಣದಲ್ಲಿ ಪೊಲೀಸರ ನಿರ್ಲಕ್ಷ್ಯವಹಿಸಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿದಂತೆ ಸಿಎಂ,ಡಿಸಿಎಂ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಈ ಕುರಿತು ಮಾತನಾಡಲು ನಿರಾಕರಿಸಿದರು. ವಾರದೊಳಗೆ ಚಿತ್ರದುರ್ಗ ಜಿಲ್ಲಾಸ್ಪತ್ರೆ ಅವ್ಯವಸ್ಥೆ ಸರಿಪಡಿಸು ವುದಾಗಿ ಹೇಳಿದರು.