ವಿಶ್ವನಾಥ್ 
ಜಿಲ್ಲೆ

ಪೆನ್‌ಡ್ರೈವ್ ಇಟ್ಟುಕೊಂಡು ಹೆಸರಿಸುವುದು ಶೋಭೆಯಲ್ಲ: ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಎಚ್.ವಿಶ್ವನಾಥ್ ವಾಗ್ದಾಳಿ

ಮೈಸೂರು: ಪೆನ್‌ಡ್ರೈವ್ ತೋರಿಸಿ ಇದರಲ್ಲಿ ದಾಖಲೆಗಳಿವೆ ಎಂದು ಹೆದರಿಸುವುದು ಎರಡು ಬಾರಿ ಮುಖ್ಯಮಂತ್ರಿ ಆಗಿರುವ ಒಬ್ಬ ದೊಡ್ಡ ರಾಜಕಾರಣಿಗೆ ಗೌರವ ತರುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್, ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಕಿಡಿ ಕಾರಿದರು.
ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ, ಮಾಜಿ ಪ್ರಧಾನಿಯ ಮಗನಾಗಿ ಜೇಬಿನಲ್ಲಿ ಪೆನ್‌ಡ್ರೈವ್ ಇಟ್ಟುಕೊಂಡು, ಇದನ್ನು ಹೊರಗೆ ಬಿಡುತ್ತೇನೆಂದು ತೋರಿಸಿ ಹೆದರಿಸುವುದು ಅವರಿಗೆ ಶೋಭಾಯಮಾನವಲ್ಲ. ಅದೇನಿದೆ ಎಂಬುದನ್ನು ಕೂಡಲೇ ಹೊರಗೆ ಬಿಡಲಿ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ರಾಜ್ಯದ ಇತಿಹಾಸದಲ್ಲಿ ವಿಧಾನಸಭೆ ಮತ್ತು ವಿಧಾನ ಪರಿಷತ್ ಎರಡೂ ಸದನಗಳಲ್ಲಿ ವಿರೋಧ ಪಕ್ಷದ ನಾಯಕನಿಲ್ಲದೆ ಇದೇ ಮೊದಲ ಬಾರಿಗೆ ಬಜೆಟ್ ಮಂಡನೆಯಾಗಿರುವುದು ನಾಚಿಕೆಗೇಡಿನ ಸಂಗತಿ. ಇದು ಬಿಜೆಪಿಯಲ್ಲಿನ ಅಸಂಘಟನೆ, ಅಸಹಾಯಕತೆಯನ್ನು ತೋರಿಸುತ್ತದೆ. ಇದರಿಂದಲೇ ಜೆಡಿಎಸ್‌ನ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ನಾಯಕರಾಗುತ್ತಿದ್ದಾರೆ ಎಂದು ಟೀಕಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡುತ್ತೇವೆಂದು ಹೇಳುತ್ತಿರುವುದು ಲೋಕಸಭಾ ಚುನಾವಣೆಯ ಗಿಮಿಕ್. ಅಷ್ಟು ಸುಲಭವಾಗಿ ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡಲು ಸಾಧ್ಯವಿಲ್ಲ ಎಂದರು.
ಸರ್ವಜನಾಂಗದ ಬಜೆಟ್ ಸ್ವಾಗತಾರ್ಹ:
ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ವಜನಾಂಗದ ಬಜೆಟ್ ಮಂಡನೆ ಮಾಡಿರುವುದು ಸ್ವಾಗತಾರ್ಹ. ಅನ್ನ, ಅಕ್ಷರ, ದಾಸೋಹದ ಜತೆಗೆ, ಮಹಿಳಾ ಸಬಲೀಕರಣ, ಸಮಾಜ ಕಲ್ಯಾಣಕ್ಕೆ ಒತ್ತುಕೊಟ್ಟಿರುವುದು ಉತ್ತಮ ಬೆಳವಣಿಗೆ. ಐದು ಗ್ಯಾರಂಟಿ ಯೋಜನೆಗಳು ರಾಜ್ಯದ ಜನರ ಪಾಲಿಗೆ ಆಶಾದಾಯಕ ಎಂದು ಎಚ್.ವಿಶ್ವನಾಥ್ ಬಣ್ಣಿಸಿದರು.
ಕೆಇಬಿ ಮತ್ತು ಕೆಪಿಟಿಸಿಎಲ್, ಎಸ್ಕಾಂಗಳಲ್ಲಿ ವಿದ್ಯುತ್ ಸೋರಿಕೆ ಹೆಚ್ಚುತ್ತಿದೆ. ಇದರ ಮೇಲೆ ಹೆಚ್ಚು ನಿಗಾ ವಹಿಸಬೇಕು. ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಯಿಂದ ಪ್ರವಾಸಿ ತಾಣಗಳಲ್ಲಿ ವ್ಯಾಪಾರ ಹೆಚ್ಚಾಗಿ ಸಣ್ಣಪುಟ್ಟ ವ್ಯಾಪಾರಿಗಳ ಆರ್ಥಿಕ ಸ್ಥಿತಿ ಸುಧಾರಿಸುತ್ತಿದೆ. ಕೇಂದ್ರ ಸರ್ಕಾದ ಬೆಲೆ ಏರಿಕೆ, ಕೋವಿಡ್‌ನಿಂದ ತತ್ತರಿಸಿರುವವರಿಗೆ ಇದು ಅನುಕೂಲವಾಗಲಿದೆ ಎಂದು ಹೇಳಿದರು.
ಇದೇ ಮೊದಲ ಬಾರಿಗೆ ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ಅನುದಾನ ನೀಡಿರುವುದು ಮೆಚ್ಚುವಂಥದ್ದು. ಐದು ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುವವರು ಗ್ಯಾಸ್ ಬೆಲೆ 1,150 ರೂ. ಆದಾಗ ಏಕೆ ವಿರೋಧಿಸದೆ ದೇಶಕ್ಕಾಗಿ ಕೊಟ್ಟರೆ ಏನೂ ತೊಂದರೆ ಇಲ್ಲ ಎನ್ನುತ್ತಿದ್ದರು? ಈಗ ನಮಗೆ ಐದು ಗ್ಯಾರಂಟಿಗಳ ಸೌಲಭ್ಯ ಬೇಡವೆಂದು ಹೇಳಲಿ ಎಂದು ತಿರುಗೇಟು ನೀಡಿದರು.
ಅಶೋಕಪುರಂ ರೇವಣ್ಣ ಸೇರಿದಂತೆ ಹಲವರು ಹಾಜರಿದ್ದರು.