ಹಾಸನ: ರಾಜ್ಯ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಮಾಡಿರುವುದನು ಖಂಡಿಸಿ ಇಂದು ನಗರದಲ್ಲಿ ಜೆಡಿಎಸ್-ಬಿಜೆಪಿ ಜಂಟಿಯಾಗಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್ ತಿಳಿಸಿದರು.
ಪೆಟ್ರೋಲ್- ಡೀಸೆಲ್ ಬೆಲೆಯನ್ನು ಪ್ರತಿ ಲೀಟರ್‌ಗೆ 3 ರೂ.ಏರಿಕೆ ಮಾಡಿರುವುದು ಖಂಡನೀಯ. ಇದರಿಂದ ಸಾರಿಗೆ ವೆಚ್ಚ ಹೆಚ್ಚಳ ಮಾತ್ರವಲ್ಲದೆ, ಹಲವು ರೀತಿಯ ಅಗತ್ಯ ವಸ್ತುಗಳ ಬೆಲೆಯೂ ಏರಿಕೆ ಆಗಲಿದೆ. ಇದರಿಂದ ಇನ್ನೂ ಬರದ ಪೆಟ್ಟಿನಿಂದ ಹೊರಬರದ ರೈತರು ಹಾಗೂ ಜನ ಸಾಮಾನ್ಯರಿಗೆ ಹೊರೆ ಬೀಳಲಿದೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸರ್ಕಾರದ ಈ ನಡೆ ಖಂಡಿಸಿ ಜೂ.18ಮಂಗಳವಾರ ಬೆಳೆಗ್ಗೆ 11 ಗಂಟೆಗೆ ಹೇಮಾವತಿ ಪ್ರತಿಮೆ ಬಳಿಯಿಂದ ಡಿಸಿ ಕಚೇರಿವರೆಗೂ ಮೆರವಣಿಗೆ ನಡೆಸಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಸರ್ಕಾರ ಕೂಡಲೇ ಇಂಧನ ಬೆಲೆ ಏರಿಕೆ ನಿರ್ಧಾರ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು. ನಾಳಿನ ಪ್ರತಿಭಟನೆಯನ್ನು ಜೆಡಿಎಸ್ ಮತ್ತು ಬಿಜೆಪಿ ಹೊಂದಾಣಿಕೆ ಆಗಿಯೇ ಮಾಡುತ್ತೇವೆ ಎಂದು ಪ್ರಶ್ನೆಗೆ ಉತ್ತರಿಸಿದರು
ದೊಡ್ಡಮಟ್ಟದ ನಿರೀಕ್ಷೆ:
ಇದೇ ವೇಳೆ ನಮ್ಮ ನಾಯಕರಾದ ಎಚ್.ಡಿ.ಕುಮಾರಸ್ವಾಮಿ ಅವರು ಇದೇ ಮೊದಲ ಬಾರಿಗೆ ಕೇಂದ್ರ ಸಚಿವರಾಗಿದ್ದು, ಪ್ರಭಾವಿ ಖಾತೆಯೂ ಅವರಿಗೆ ಸಿಕ್ಕಿವೆ. ಕುಮಾರಸ್ವಾಮಿ ಅವರಿಗೆ ಹಾಸನ ಜಿಲ್ಲೆಯ ಸಮಸ್ತ ಜನರ ಪರವಾಗಿ ಅಭಿನಂದನೆ ಸಲ್ಲಿಸುತ್ತೇವೆ. ಅವರ ಮೂಲಕ ನಮ್ಮ ಜಿಲ್ಲೆಗೆ ದೊಡ್ಡದೊಂದು ಕೈಗಾರಿಕಾ ತಂದು, ಸಾವಿರಾರು ಮಂದಿಗೆ ಉದ್ಯೋಗ ಕೊಡಿಸಿ ಎಂದು ಮನವಿ ಮಾಡಿದ್ದೇವೆ. ಹಾಗೆಯೇ ಬಾಕಿ ಇರುವ ಹೊಸ್ ಬಸ್ ನಿಲ್ದಾಣದ ಎದುರಿನ ಫ್ಲೈ ಓವರ್ ಕಾಮಗಾರಿ ಮುಗಿಸಲು 48 ಕೋಟಿ ರೂ. ನೀಡುವಂತೆ ಈ ಹಿಂದೆಯೇ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದು ಸಾಕಾರವಾಗುವ ವಿಶ್ವಾಸ ವ್ಯಕ್ತಪಡಿಸಿದರು.
ಪ್ರಗತಿಯಲ್ಲಿರುವ ವಿಮಾನ ನಿಲ್ದಾಣ ಕಾಮಗಾರಿ ತ್ವರಿತವಾಗಿ ಮುಗಿಯಬೇಕು. ಕುಮಾರಸ್ವಾಮಿ ಅವರ ಬಗ್ಗೆ ದೊಡ್ಡ ನೀರಿಕ್ಷೆ ಇಟ್ಟುಕೊಂಡಿದ್ದೇವೆ. ಅದರಲ್ಲೂ ಹಳೇ ಮೈಸೂರು ಭಾಗದ ಜನರು ಬೆಟ್ಟದಷ್ಟು ಆಸೆ ಹೊಂದಿದ್ದಾರೆ. ಹಾಸನ ಸೇರಿದಂತೆ ಈ ಭಾಗದ ಜಿಲ್ಲೆಗಳಿಗೆ ಬೃಹತ್ ಕಾರ್ಖಾನೆ ಸೇರಿದಂತೆ ವಿವಿಧ ಕಾಮಗಾರಿ ಅನುಷ್ಠಾನಗೊಳಿಸುವ ಸಂಬಂಧ ಶೀಘ್ರವೇ ಮಾಜಿ ಸಚಿವ ಎಚ್.ಡಿ.ರೇವಣ್ಣ, ಶಾಸಕರ ನೇತೃತ್ವದಲ್ಲಿ ನಿಯೋಗ ತೆರಳಿ ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸುತ್ತೇವೆ, ಹಾಗೆಯೇ ಬೃಹತ್ ನಾಗರಿಕ ಸನ್ಮಾನಕ್ಕೆ ಅವರನ್ನು ಆಹ್ವಾನ ಮಾಡುತ್ತೇವೆ ಎಂದು ಹೇಳಿದರು.