ಜಿಲ್ಲೆ

ಪೆಟ್ರೋಲ್ ಬಂಕ್ ಮಾಲೀಕರ ಜಿಲ್ಲಾ ಸಂಘದ:ಅಧ್ಯಕ್ಷರಾಗಿ ಪ್ರದೀಪ್ ಕುಮಾರ್ ಆಯ್ಕೆ

Hassan - Ramesh H R

ಹಾಸನ: ಜಿಲ್ಲಾ ಪೆಟ್ರೋಲ್ ಬಂಕ್‌ಗಳ ಮಾಲೀಕರ ಸಂಘದ ಅಧ್ಯಕ್ಷರಾಗಿ ಸಾಲಗಾಮೆ ಬಾಲಾಜಿ ಫ್ಯೂಯಲ್ಸ್ ಮಾಲೀಕ ಬಿ.ಪ್ರದೀಪ್ ಕುಮಾರ್ ಅವರು ಆಯ್ಕೆಯಾಗಿದ್ದಾರೆ.
ಹಾಸನದ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ನಡೆದ ಪೆಟ್ರೋಲಿಯಂ ಉತ್ಪನ್ನಗಳ ವಿತರಕರ ಸಂಘದ 2023-24ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಭೆಯ ನಂತರ ಸಂಘದ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಬಿ.ಪ್ರದೀಪ್ ಕುಮಾರ್, ಕಾರ್ಯದರ್ಶಿಯಾಗಿ ಬೇಲೂರಿನ ಮಲ್ಲಿಕಾರ್ಜುನ ಪೆಟ್ರೋಲ್ ಬಂಕ್ ಮಾಲೀಕ ರಘುನಂದನ, ಖಜಾಂಚಿಯಾಗಿ ಹಾರನಹಳ್ಳಿ ಸಿಂಚನ ಸರ್ವೀಸ್ ಸ್ಟೇಷನ್ ಮಾಲೀಕ ಮಂಜಪ್ಪ ಅವರು ಆಯ್ಕೆಯಾದರು.
ನಿರ್ದೇಶಕರಾಗಿ ಸಂದೇಶ್, ಮಂಜುನಾಥ್, ತೀರ್ಥಕುಮಾರಿ, ಶಿವಕುಮಾರ್, ರಾಮಚಂದ್ರ, ಶ್ರೀನಿವಾಸ, ಚನ್ನಕೇಶವ, ಮಂಜುನಾಥ್, ಶೆಟ್ಟಿಗೌಡ, ತಿಮ್ಮೇಗೌಡ, ಚಂದನ್ ಅವರನ್ನು ಆಯ್ಕೆ ಮಾಡಲಾಯಿತು.
ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ನಿಕಟಪೂರ್ವ ಅಧ್ಯಕ್ಷ ಗಿರೀಶ್ ಅಡವಿಗೌಡ ಅವರು ತಮ್ಮ ಅವಧಿಯಲ್ಲಿ ಸದಸ್ಯರಿಂದ ಸಿಕ್ಕಿದ ಸಹಕಾರಕ್ಕೆ ಧನ್ಯವಾದ ತಿಳಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ರಾಜ್ಯಸಂಘದ ಅಧ್ಯಕ್ಷ ಬಸವೇಗೌಡ ಅವರು ಮಾತನಾಡಿ, ಪೆಟ್ರೊಲಿಯಂ ಉತ್ಪನ್ನಗಳ ವಿತರಕರ ಕಮಿಷನ್ ಹೆಚ್ಚಳದ ಬೇಡಿಕೆ ಕಳೆದ 7 ವರ್ಷಗಳಿಂದ ಈಡೇರಿಲ್ಲ. ವಿತರಕರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಈ ಸಂಬಂಧ ಹೋರಾಟ ಅನಿವಾರ್ಯವಾಗಿದೆ. ಹೋರಾಟಕ್ಕೆ ಸಂಘ ಕರೆ ನೀಡಿದಾಗ ಎಲ್ಲ ಸದಸ್ಯರೂ ಸಂಪೂರ್ಣ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.