ಜಿಲ್ಲೆ

ಪೆಂಡ್ಲಿವಾರಹಳ್ಳಿ ಶಿಕ್ಷಕಿಗೆ ರಾಜ್ಯಮಟ್ಟದ ಗೌರವ, ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ವಿ.ಉಷಾ

ಶಿಡ್ಲಘಟ್ಟ: ಪೆಂಡ್ಲಿವಾರಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ವಿ.ಉಷಾ ರಾಜ್ಯಮಟ್ಟದ 2021-21ನೇ ಸಾಲಿನ ಉತ್ತಮ ಶಿಕ್ಷಕ ಪ್ರಶಸ್ತಿಗೆ ಪ್ರಾಥಮಿಕ ಶಾಲಾ ವಿಭಾಗದಿಂದ ಆಯ್ಕೆಯಾಗಿದ್ದಾರೆ. ‘ಮಾತೆ ಸಾವಿತ್ರಿಬಾಯಿ ುಲೆ’ ಪ್ರಶಸ್ತಿ, 10 ಸಾವಿರ ರೂ. ನಗದು ಪುರಸ್ಕಾರ ಹಾಗೂ ಶಾಲೆಯ ಅಭಿವೃದ್ಧಿಗೆ 50 ಸಾವಿರ ರೂ. ನೀಡಲಾಗುತ್ತಿದೆ.

ವಿ.ಉಷಾ 2007 ಜೂ.21ರಂದು ಪೆಂಡ್ಲಿವಾರಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾಮಾನ್ಯ ಕನ್ನಡ ವಿಷಯದ ಶಿಕ್ಷಕಿಯಾಗಿ ನೇಮಕಗೊಂಡವರು. ಗುಡ್ಡಗಾಡು ಪ್ರದೇಶದಲ್ಲಿರುವ, ರಸ್ತೆ ಸಾರಿಗೆ ಸಂಪರ್ಕವಿರದ ಚಿಕ್ಕಬಳ್ಳಾಪುರ ಮತ್ತು ಶಿಡ್ಲಘಟ್ಟ ತಾಲೂಕುಗಳ ಗಡಿಪ್ರದೇಶ ಪೆಂಡ್ಲಿವಾರಹಳ್ಳಿ. ಕಾಂಪೌಂಡ್ ಇಲ್ಲದೆ, ರಸ್ತೆಗೆ ತೆರೆದುಕೊಂಡ ಎರಡು ಹಳೇ ಕೊಠಡಿಗಳು, ಕನ್ನಡ ಭಾಷೆಯೂ ಸರಿಯಾಗಿ ಬಾರದ ಮಕ್ಕಳು, ಪಾಲಕರ ಅಸಹಕಾರದ ಸವಾಲನ್ನು ಸಮರ್ಥವಾಗಿ ಎದುರಿಸಿದ ಉಷಾ ಶಾಲೆಗೆ ಹೊಸರೂಪ ನೀಡಿದ್ದಾರೆ.

ಕಾಂಪೌಂಡ್, ಕುಡಿಯುವ ನೀರು, ಸಂಪ್, ವಿದ್ಯುತ್, ಉತ್ತಮ ಪೀಠೋಪಕರಣಗಳು, ಒಳ್ಳೆಯ ಪುಸ್ತಕಗಳನ್ನೊಳಗೊಂಡ ಗ್ರಂಥಾಲಯ, ಗುಣಮಟ್ಟದ ಕಲಿಕೋಪಕರಣಗಳು, ಬಣ್ಣದ ಚಿತ್ತಾರದ ಕೊಠಡಿಗಳು, ಬಿಸಿಯೂಟ, ಶುದ್ಧ ಪರಿಸರ, ಪಠ್ಯ ಮತ್ತು ಸಹಪಠ್ಯ ಚಟುವಟಿಕೆಗಳಲ್ಲಿ ಮಕ್ಕಳ ಉತ್ತಮ ಪ್ರಗತಿ ಹಾಗೂ ಸಮುದಾಯದ ಅಗತ್ಯ ಸಹಕಾರ ಪಡೆಯುವುದರೊಂದಿಗೆ ಶಾಲೆಯನ್ನು ಮಾದರಿಯನ್ನಾಗಿಸುತ್ತಿದ್ದಾರೆ.

ಶೈಕ್ಷಣಿಕ ವಿಭಾಗದಷ್ಟೇ ಸಾಂಸ್ಕೃತಿಕ ವಿಭಾಗವೂ ಮುಖ್ಯ ಎಂಬುದನ್ನು ಅರಿತು ಪ್ರತಿಭಾ ಕಾರಂಜಿ, ಕ್ರೀಡೆ, ವಿಜ್ಞಾನ ವಸ್ತು ಪ್ರದರ್ಶನ, ಪ್ರಯೋಗಗಳು, ಸಂವಾದ, ರಾಷ್ಟ್ರೀಯ ಐಕ್ಯತೆ ಮುಂತಾದ ಮೌಲ್ಯಗಳ ಬೆಳವಣಿಗೆಯ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ.

ನಾಲ್ಕು ಗೋಡೆಗಳ ಮಧ್ಯೆ ಪರಿಸರ ಅಧ್ಯಯನದ ಬದಲು, ಮಕ್ಕಳೊಂದಿಗೆ ಹತ್ತಿರದ ಸ್ಥಳಗಳಿಗೆ ಭೇಟಿ ನೀಡಿ ವಸ್ತುಸ್ಥಿತಿ ತಿಳಿಸುವ ಜತೆಗೆ ಪ್ರಾತ್ಯಕ್ಷಿಕೆ ಮೂಲಕ ಅರಿವು ಮೂಡಿಸುತ್ತಿದ್ದಾರೆ. ಶಾಲೆ ಆವರಣದಲ್ಲಿ ಸ್ಥಳಾವಕಾಶ ಇಲ್ಲದಿದ್ದರೂ ಉಸಿರಿಗಾಗಿ ಹಸಿರು ತಂಡ ಸಂಪರ್ಕಿಸಿ ಶಾಲೆಯ ಮುಂದೆ, ರಸ್ತೆಯ ಅಕ್ಕಪಕ್ಕ 75 ವಿಧದ ಹಣ್ಣಿನ ಗಿಡಗಳು, ಅಪರೂಪದ ಸಸಿಗಳನ್ನು ನೆಟ್ಟು ಅವುಗಳ ರಕ್ಷಣೆಗಾಗಿ ದಾನಿಗಳಿಂದ ತಂತಿಬೇಲಿಯನ್ನು ವ್ಯವಸ್ಥೆ ಮಾಡಿದ್ದಾರೆ.

ಕರೊನಾ ಕಾಲದಲ್ಲೂ ಕಲಿಕೆ: ಕರೊನಾ ಸಂದರ್ಭದಲ್ಲೂ ಕಲಿಕೆ ನೀಡಿದ್ದ ಉಷಾ, ಸೂಕ್ತ ಎಚ್ಚರಿಕೆ ಕ್ರಮಗಳೊಂದಿಗೆ ಆನ್‌ಲೈನ್ ಪಾಠಗಳು ಮತ್ತು ಹಿರಿಯ ವಿದ್ಯಾರ್ಥಿಗಳನ್ನು ಸುಗಮಕಾರರನ್ನಾಗಿ ಮಾಡಿ ಮನೆಯಲ್ಲೇ ಕಲಿಕಾ ಪರಿಸರ ನಿರ್ಮಿಸಿದ್ದಾರೆ. ಸರ್ಕಾರಿ ನೌಕರರ ಕ್ರೀಡೆಗಳಲ್ಲಿ ಜಿಲ್ಲಾಮಟ್ಟದಲ್ಲಿ ಜಾನಪದ ನೃತ್ಯ ಮತ್ತು ಟೆನ್ನಿಕಾರ್ಟ್ ವಿಭಾಗದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ ಆಗಿರುವ ಶಿಕ್ಷಕಿ ಉಷಾ, ಕವನಗಳು ಹಾಗೂ ಲೇಖನಗಳನ್ನೂ ಬರೆದಿದ್ದಾರೆ.