ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ನಗರದ ಪೆಂಡಾರ ಗಲ್ಲಿ ಸರ್ಕಾರಿ ಪ್ರೌಢಶಾಲೆಯ ನೂತನ ಕಟ್ಟಡ ನಿರ್ವಣಕ್ಕೆ ಲೋಕೋಪಯೋಗಿ ಇಲಾಖೆಯಿಂದ 3 ಕೋಟಿ ರೂ. ಅನುದಾನ ನೀಡಲಾಗುವುದು ಎಂದು ಶಾಸಕ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಹೇಳಿದರು.
ಶಿಥಿಲಾವಸ್ಥೆಯಲ್ಲಿರುವ ಪ್ರೌಢಶಾಲೆ ಕಟ್ಟಡವನ್ನು ಶನಿವಾರ ವೀಕ್ಷಿಸಿದ ಅವರು, ಹಳೇ ಕಟ್ಟಡವನ್ನು ನೆಲಸಮಗೊಳಿಸಿ ಸುಸಜ್ಜಿತ ಬಹುಮಹಡಿ ಕಟ್ಟಡ ನಿರ್ಮಾಣ ಮಾಡಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಪ್ರಸ್ತಕ ಸಾಲಿನ ಬಜೆಟ್ನಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. 46,286 ಕೋಟಿ ರೂ. ಅನುದಾನವನ್ನು ಶಿಕ್ಷಣ ಇಲಾಖೆಗೆ ಮೀಸಲಿಟ್ಟಿದ್ದು ಅತ್ಯಂತ ಸ್ವಾಗತಾರ್ಹ. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಬದ್ಧ ಎಂದರು.
ಪೂರ್ವ ಕ್ಷೇತ್ರದ ವಾರ್ಡ್ ನಂ. 73ರಲ್ಲಿ ಬರುವ ಶಿವಶಂಕರ ಕಾಲನಿಯಲ್ಲಿ ಲೋಕೋಪಯೋಗಿ ಇಲಾಖೆಯಿಂದ 5 ಕೋಟಿ ರೂ. ಅನುದಾನದಲ್ಲಿ ನಡೆದಿರುವ ಭೂಗತ ವಿದ್ಯುತ್ ಕೇಬಲ್ ಅಳವಡಿಕೆ, ಒಳಚರಂಡಿ ಕೊಳವೆ ಮಾರ್ಗ, ಸಿಸಿ ರಸ್ತೆ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಅಬ್ಬಯ್ಯ ವೀಕ್ಷಿಸಿದರು.
ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು. ಗುಣಮಟ್ಟದ ಕಾಮಗಾರಿ ಕೈಗೊಳ್ಳದಿದ್ದಲ್ಲಿ ಗುತ್ತಿಗೆದಾರರು ಮತ್ತು ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದರು.
ಲೋಕೋಪಯೋಗಿ ಇಲಾಖೆ ಕಾರ್ಯನಿವಾರ್ಹಕ ಇಂಜಿನಿಯರ್ ವಿಜಯಕುಮಾರ್, ಸಹಾಯಕ ಇಂಜಿನಿಯರ್ ಮೇಘಾ, ಶಾಲಾ ಮುಖ್ಯಶಿಕ್ಷಕಿ ದೀಪಾ ಹಿರೇಗೌಡರ, ಅಲ್ತಾಫ್ ಹಳ್ಳೂರು, ಯಲ್ಲಪ್ಪ ಮೆಹರವಾಡೆ, ಮುಖಂಡರಾದ ದ್ಯಾಮಣ್ಣ ಪೂಜಾರಿ, ಲಕ್ಷ್ಮಣಸಾ ಖೋಡೆ, ರವಿ ರತನ್, ಇಲಿಯಾಸ್ ಚವ್ಹಾಣ, ಅನಿಲ ಮಿಸ್ಕಿನ್, ಪರಶುರಾಮ ಹಬೀಬ, ಇತರರು ಇದ್ದರು.