ಕುಶಾಲನಗರದ ವಾಸವಿ ಮಹಲ್ನಲ್ಲಿ ತಹಸೀಲ್ದಾರ್ ಟಿ.ಎಂ.ಪ್ರಕಾಶ್ ನೇತೃತ್ವದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಜಯವರ್ಧನ, ಸುರಾಯಬಾನು, ಕೆ.ಎಸ್.ಮೂರ್ತಿ, ಶಿವಪ್ಪ ನಾಯಕ್ ಇತರರು ಪಾಲ್ಗೊಂಡಿದ್ದರು. 
ಜಿಲ್ಲೆ

ಪೂರ್ವಭಾವಿ ಸಭೆಗೆ ಗೈರಾದ ಅಧಿಕಾರಿಗಳ ವಿರುದ್ಧ ಆಕ್ರೋಶ

ಕುಶಾಲನಗರ: ಗಣರಾಜ್ಯೋತ್ಸವ ಆಚರಣೆ ಸಂಬಂಧ ತಹಸೀಲ್ದಾರ್ ಟಿ.ಎಂ.ಪ್ರಕಾಶ್ ನೇತೃತ್ವದಲ್ಲಿ ವಾಸವಿ ಮಹಲ್ನಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಗೆ ವಿವಿಧ ಇಲಾಖೆಗಳ ಬಹುತೇಕ ಅಧಿಕಾರಿಗಳು ಗೈರಾದ ಹಿನ್ನೆಲೆಯಲ್ಲಿ ಸಾರ್ವಜನಿಕರು ತೀವ್ರ ಆಕ್ರೋಶವ್ಯಕ್ತಪಡಿಸಿದರು.

ಪ್ರತಿವರ್ಷ ಅತಿಥಿಗಳು ಕಾರ್ಯಕ್ರಮ ಆಯೋಜನೆ ಬಗ್ಗೆ ತಮ್ಮ ಮೆಚ್ಚುಗೆ ಸಲ್ಲಿಸಿ ತೆರಳುತ್ತಿದ್ದರು. ಕುಶಾಲನಗರ ತಾಲೂಕು ರಚನೆಯಾದ ನಂತರ ಆ ಸಂಪ್ರದಾಯ ತಪ್ಪಿದೆ. ಅಧಿಕಾರಿಗಳು ನಡೆಸುವ ಕಾರ್ಯಕ್ರಮವಾಗಿ ಮಾರ್ಪಟ್ಟಿದೆ. ರಾಷ್ಟ್ರೀಯ ಹಬ್ಬದ ವಾತಾವರಣ ಇರುವುದಿಲ್ಲ ಎಂದು ಎಂ.ಇ.ಮೋಹಿದ್ದೀನ್ ಬೇಸರ ವ್ಯಕ್ತಪಡಿಸಿದರು.

ಸಂಘ ಸಂಸ್ಥೆಗಳ ಪ್ರತಿನಿಧಿಗಳನ್ನು ಕಾಟಾಚಾರಕ್ಕೆ ಸಭೆಗೆ ಕರೆಯಲಾಗುತ್ತಿದೆ. ಅಲ್ಲದೆ ಯಾವುದೇ ಜವಾಬ್ದಾರಿ ನೀಡುತ್ತಿಲ್ಲ ಎಂದು ಮಹಿಳಾ ಸಮಾಜದ ಅಧ್ಯಕ್ಷೆ ಸಲೀನಾ ಪೆದ್ರು ಹೇಳಿದರು. ರಾಷ್ಟ್ರೀಯ ಹಬ್ಬದ ಹಿಂದಿನ ದಿನ ಯಾರೋ ಒಬ್ಬರು ಬಂದು ಆಹ್ವಾನ ಪತ್ರಿಕೆ ಕೊಡುತ್ತಾರೆ. ಕಾರ್ಯಕ್ರಮದಲ್ಲಿ ಕನಿಷ್ಠ ಸಂಘ ಸಂಸ್ಥೆಗಳನ್ನೂ ಗುರುತಿಸುವುದಿಲ್ಲ. ಬರುವ ಸಾರ್ವಜನಿಕರಿಗೆ ಕುರ್ಚಿಯೂ ಇರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಬಾರಿಯ ಸ್ವಾತಂತ್ರೃ ದಿನ ಆಚರಣೆಯಲ್ಲಿ ನಿವೃತ್ತ ಸೈನಿಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿರಲಿಲ್ಲ. ಕಾರಣ ಇಲ್ಲಿರುವ ಅಧಿಕಾರಿಗಳಿಗೆ ಸ್ಥಳೀಯರ ಪರಿಚಯವಿರುವುದಿಲ್ಲ. ಈ ಎಲ್ಲ ಕಾರಣಗಳಿಗೆ ಸಾರ್ವಜನಿಕರನ್ನು ಸೇರಿಸಿಕೊಂಡು ಉಪ ಸಮಿತಿ ರಚಿಸಬೇಕು ಎಂದು ಸ್ಥಳೀಯರಾದ ಸಲೀನಾ ಪೆದ್ರು ಒತ್ತಾಯಿಸಿದರು.

ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ 5 ಜನರನ್ನು ಗುರುತಿಸಿ ಗೌರವಿಸಲು ತೀರ್ಮಾನ ತೆಗೆದುಕೊಳ್ಳಲಾಯಿತು. ತಹಸೀಲ್ದಾರ್ ಪ್ರಕಾಶ್ ಮಾತನಾಡಿ, ಅಧಿಕಾರಿಗಳಿಗೆ ಈಗಾಗಲೇ ಸಭೆಯ ಮಾಹಿತಿ ನೀಡಲಾಗಿದೆ. ಆದರೂ ಸಭೆಗೆ ಬರೆದಿರುವ ಬಗ್ಗೆ ಆಯಾ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿ ಗಮನಕ್ಕೆ ತರಲಾಗುವುದು. ಸಾರ್ವಜನಿಕರನ್ನು ಸೇರಿಸಿಕೊಂಡು ಉಪ ಸಮಿತಿ ರಚಿಸಿ ಕಾರ್ಯಕ್ರಮದ ಬಗ್ಗೆ ಆಯಾ ಸದಸ್ಯರ ಗಮನಕ್ಕೆ ತರಲಾಗುವುದು. ಈ ಹಿಂದೆ ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳಲಾಗುವುದು. ಗಣರಾಜ್ಯೋತ್ಸವ ಯಶಸ್ಸಿಗೆ ಎಲ್ಲರ ಸಹಕಾರ ಅಗತ್ಯ ಎಂದು ಮನವಿ ಮಾಡಿದರು.

ಉಪ ತಹಸೀಲ್ದಾರ್ ಮಧುಸೂದನ್, ಪುರಸಭೆ ಅಧ್ಯಕ್ಷ ಬಿ.ಜಯವರ್ಧನ, ಮುಖ್ಯಾಧಿಕಾರಿ ಶಿವಪ್ಪ ನಾಯಕ್, ಉಪಾಧ್ಯಕ್ಷೆ ಸುರಾಯಬಾನು, ಕಸಾಪ ತಾಲೂಕು ಅಧ್ಯಕ್ಷ ಕೆ.ಎಸ್.ಮೂರ್ತಿ, ಕರ್ನಾಟಕ ಕಾವಲು ಪಡೆ ಜಿಲ್ಲಾಧ್ಯಕ್ಷ ಎಂ.ಕೃಷ್ಣ, ಕರವೇ ಜಿಲ್ಲಾಧ್ಯಕ್ಷ ವೆಂಕಟೇಶ್ ಪೂಜಾರಿ, ಆರ್‌ಐ ಸಂತೋಷ್, ತೋಟಗಾರಿಕೆ ಇಲಾಖೆಯ ವರದರಾಜ್, ಕೂಡಿಗೆ ಹಂದಿ ತಳಿ ಸಂವರ್ಧನಾ ಕೇಂದ್ರದ ಸಂಜೀವ್ ಶಿಂಧೆ, ನಂದಾ, ಜಿಎಂಪಿ ಶಾಲೆಯ ಮುಖ್ಯ ಶಿಕ್ಷಕಿ ರಾಣಿ ಇತರರು ಹಾಜರಿದ್ದರು.