ಮೈಸೂರು: ದಸರಾ ಉದ್ಘಾಟನೆಗೊಂಡು ಎರಡು ದಿನಗಳ ಕಾರ್ಯಕ್ರಮ ಪೂರ್ಣಗೊಂಡರೂ ಇನ್ನೂ ಸಮರ್ಪಕವಾಗಿ ದೀಪಾಲಂಕಾರ ಆಗದ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅಧಿಕಾರಿಗಳ ವಿರುದ್ಧ ಗರಂ ಆದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ದಸರಾ ಉಪಸಮಿತಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಾಸಕ ಎಲ್.ನಾಗೇಂದ್ರ ಮಾತನಾಡಿ, ವಿದ್ಯುತ್ ದೀಪಾಲಂಕಾರ ಗುತ್ತಿಗೆ ಪಡೆದಿರುವವರು ನಮ್ಮ ಕ್ಷೇತ್ರದಲ್ಲಿ ಸಮರ್ಪಕವಾಗಿ ದೀಪಾಲಂಕಾರ ಮಾಡಿಲ್ಲ. ಸರ್ಕಾರದ ಹಣ ಪಡೆದು ಸರಿಯಾಗಿ ಕೆಲಸ ಮಾಡುವುದಿಲ್ಲವೆಂದರೆ ಹೇಗೆ ಎಂದು ಪ್ರಶ್ನಿಸಿದರು.
ದೇವರಾಜ ಅರಸು ರಸ್ತೆಗೆ ಸಣ್ಣದಾಗಿ ಸೀರಿಯಲ್ ಸೆಟ್ ಹಾಕಲಾಗಿದೆ. 124 ಕಿ.ಮೀ. ದೀಪಾಲಂಕಾರ ಮಾಡಲಾಗಿದೆ ಎಂದು ಹೇಳುತ್ತೀರಿ, ಆದರೆ ಅಷ್ಟು ಪ್ರಮಾಣದಲ್ಲಿ ಕೆಲಸ ಕಾಣುತ್ತಿಲ್ಲ. ಸಂಜೆ ಅಧಿಕಾರಿಗಳು ಬನ್ನಿ ಜತೆಯಲ್ಲಿ ಪರಿಶೀಲನೆ ಮಾಡೋಣ. ಹೀಗೆ ಬೇಜವಾಬ್ದಾರಿಯಿಂದ ಕೆಲಸ ಮಾಡುವುದು ಸರಿಯಲ್ಲ ಎಂದು ಅಸಮಾಧಾನ ಹೊರ ಹಾಕಿದರು.
ಇದಕ್ಕೆ ಧ್ವನಿಗೂಡಿಸಿದ ಸಚಿವರು, ಮೈಸೂರು ದಸರಾದಲ್ಲಿ ದೀಪಾಲಂಕಾರವೇ ಹೆಚ್ಚು ಆಕರ್ಷಣೆ. ಕಳೆದ ಬಾರಿ ಎಲ್ಲ ಕಡೆಗಳಲ್ಲಿಯೂ ಆಕರ್ಷಣೀಯವಾಗಿ ದೀಪಾಲಂಕಾರ ಮಾಡಲಾಗಿತ್ತು. ಆದರೆ ಈ ಬಾರಿ ದೀಪಾಲಂಕಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ದೂರುಗಳು ಕೇಳಿಬಂದಿವೆ. ಕೂಡಲೇ ಈ ವ್ಯತ್ಯಾಸವನ್ನು ಸರಿಪಡಿಸಿಕೊಂಡು ಎಲ್ಲಿಯೂ ಲೋಪವಾಗದಂತೆ ಎಲ್ಲ ಪ್ರಮುಖ ರಸ್ತೆಗಳಿಗೆ ದೀಪಾಲಂಕಾರ ಆಗಬೇಕು ಎಂದು ಖಡಕ್ ಸೂಚನೆ ನೀಡಿದರು.
ಎಲ್ಲ ಸಮಿತಿಗಳಿಗೆ ಅಧ್ಯಕ್ಷರು, ಉಪಾಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯಕ್ರಮಗಳನ್ನು ಮಾಡಿ. ಕಾರ್ಯಕ್ರಮದಲ್ಲಿ ಯಾವ ಲೋಪದೋಷಗಳು ಕಂಡು ಬರದಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಆಹಾರ ಮೇಳ ಉಪಸಮಿತಿಯ ಪದಾಧಿಕಾರಿಗಳು ಮಳಿಗೆ ನೀಡುವಲ್ಲಿ ಲೋಪ ದೋಷಗಳಾಗಿವೆ. ಒಂದೇ ಕುಟುಂಬದ ಐವರಿಗೆ ಸ್ಟಾಲ್ ನೀಡಲಾಗಿದೆ ಎಂದು ಆರೋಪಿಸಿದರು. ಇದಕ್ಕೆ ಸಮಜಾಯಿಷಿ ನೀಡಿದ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರು, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಆಯೋಜಿಸಿರುವ ಆಹಾರ ಮೇಳದಲ್ಲಿ 118 ಸ್ಟಾಲ್‌ಗಳಿದ್ದು, ಇವುಗಳಲ್ಲಿ 113 ಸ್ಟಾಲ್‌ಗಳು ಬುಕ್ ಆಗಿವೆ. ಕೆಲವರು ತಮಗೆ ವ್ಯಾಪಾರವಾಗುವ ಜಾಗದಲ್ಲಿ ಸ್ಥಳಾವಕಾಶ ದೊರೆತಿಲ್ಲ ಎಂಬ ಕಾರಣಕ್ಕೆ ಕಟ್ಟಿರುವ ಡಿಡಿ ಮೊತ್ತವನ್ನು ವಾಪಸ್ ನೀಡುವಂತೆ ಮನವಿ ಮಾಡುತ್ತಿದ್ದಾರೆ. ಲಲಿತ ಮಹಲ್ ಹೆಲಿಪ್ಯಾಡ್‌ನಲ್ಲಿ 43ರಲ್ಲಿ 31 ಸ್ಟಾಲ್‌ಗಳು ಮಾತ್ರ ಬುಕ್ ಆಗಿವೆ. ಹೀಗಾಗಿ ನಿಗದಿಪಡಿಸಿರುವ ಹಣದಲ್ಲಿ ರಿಯಾಯಿತಿ ನೀಡುವಂತೆ ಸಲಹೆ ನೀಡಿದರು.
ಸಚಿವರು ಮಾತನಾಡಿ, ದಸರಾದಲ್ಲಿ ಯುವ ದಸರಾ ಮತ್ತೊಂದು ಆಕರ್ಷಣೆಯಾಗಿದೆ. ಹೀಗಾಗಿ ಯುವ ದಸರಾ ಕಾರ್ಯಕ್ರಮಕ್ಕೆ ಹೆಚ್ಚಿನ ಪ್ರಚಾರ ಆಗಬೇಕು. ಯಾವ ಕಾರ್ಯಕ್ರಮದಲ್ಲೂ ಲೋಪವಾಗದಂತೆ ಎಚ್ಚರವಹಿಸಬೇಕು. ಕವಿಗೋಷ್ಠಿ ಆಯೋಜನೆಯಲ್ಲಿಯೂ ಲೋಪ ದೊಷವಾಗಿದೆ ಎಂದು ಸಾರ್ವಜನಿಕರು ದೂರಿದ್ದು ಇದನ್ನು ಸರಿಪಡಿಸಿಕೊಳ್ಳಿ. ವಸ್ತುಪ್ರದರ್ಶನದಲ್ಲಿ ಸರ್ಕಾರಿ ಮಳಿಗೆಗಳು ಬೇಗ ಆರಂಭವಾಗುವಂತೆ ಕ್ರಮವಹಿಸಿ ಎಂದು ಸೂಚನೆ ನೀಡಿದರು.
ಮೇಯರ್ ಶಿವಕುಮಾರ್, ಜಿಲ್ಲಾ ಪಂಚಾಯಿತಿ ಸಿಇಒ ಬಿ.ಆರ್.ಪೂರ್ಣಿಮಾ, ನಗರ ಪಾಲಿಕೆ ಆಯುಕ್ತ ಜಿ.ಲಕ್ಷ್ಮೀಕಾಂತ್ ರೆಡ್ಡಿ ಇತರರು ಇದ್ದರು.