ಹಾಸನ: ಜೆಡಿಎಸ್ ಸರ್ಕಾರದ ಅವಧಿಯಲ್ಲಿ ಮಂಜೂರಾಗಿದ್ದ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲು ಮಾ.13 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸುತ್ತಿರುವುದು ನಾಚಿಕೆಗೇಡು ಎಂದು ಹೊಳೆನರಸೀಪುರ ಕ್ಷೇತ್ರದ ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣ ಟೀಕಿಸಿದರು.
ನಗರದ ಸಂಸದರ ನಿವಾಸದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಅವರು, ಎಚ್.ಡಿ. ದೇವೇಗೌಡರು ಪ್ರಧಾನಿಯಾಗಿದ್ದ ಸಂದರ್ಭದಲ್ಲೇ ಹಾಸನದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದ್ದರು. ಆ ಕಾಮಗಾರಿಯನ್ನು ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ತಡೆ ಹಿಡಿದಿದ್ದರು. ಈಗ ಮೂಲ ಯೋಜನೆ ಬದಲಾಯಿಸಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲಾಗುತ್ತಿದೆ. ಮತ್ತೆ ಅದೇ ಕಾಮಗಾರಿಗೆ ಅಡಿಗಲ್ಲು ಹಾಕಲು ಮುಖ್ಯಮಂತ್ರಿ ಅದಾವ ಮುಖ ಇಟ್ಟುಕೊಂಡು ಬರುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಜಿಲ್ಲೆಗೆ ಬಜೆಟ್‌ನಲ್ಲಿ ಹಲವು ಯೋಜನೆಗಳನ್ನು ನೀಡಿದ್ದರು. ಆಗ ಇದೇ ಬಿಜೆಪಿ ನಾಯಕರು ಚಪ್ಪಾಳೆ ಹೊಡೆದುಕೊಂಡು ಇದು ಹಾಸನ, ರಾಮನಗರ, ಮಂಡ್ಯ ಬಜೆಟ್ ಎಂದು ಕೇಕೇ ಹಾಕಿದ್ದರು. ಈಗ ಅದೇ ಯೋಜನೆಗಳನ್ನು ತಮ್ಮ ಸಾಧನೆ ಎಂಬುದಾಗಿ ಹೇಳಿಕೊಂಡು ಉದ್ಘಾಟಿಸಲು ಬರುತ್ತಿದ್ದಾರೆ ಎಂದು ಕುಟುಕಿದರು.
ಹಾಸನ ನಗರದಲ್ಲಿ ಹೈಟೆಕ್ ಆಸ್ಪತ್ರೆ, ಪ್ರವಾಸಿ ಮಂದಿರ, ಇಂಜಿನಿಯರಿಂಗ್ ಕಾಲೇಜು ಮಾಡಿದ್ದು ನಾನು. ಆದರೆ ತಮ್ಮ ಹೆಸರನ್ನು ಕಲ್ಲಿನ ಮೇಲೆ ಹಾಕಿಸಿಕೊಳ್ಳಬೇಕೆಂಬ ಆತುರದಲ್ಲಿ ಹೈಟೆಕ್ ಆಸ್ಪತ್ರೆ ಕಾಮಗಾರಿ ಮುಗಿಯದೇ ಇದ್ದರೂ ಉದ್ಘಾಟನೆಗೆ ಮುಂದಾಗಿದ್ದಾರೆ. ನಗರದಲ್ಲಿ ರಾತ್ರೋರಾತ್ರಿ ತಾಲೂಕು ಕಚೇರಿ ಮತ್ತು ಉಪವಿಭಾಗಾಧಿಕಾರಿ ಕಚೇರಿ ಕಟ್ಟಡಗಳನ್ನು ಒಡೆದು ಹಾಕಿ ಕೊಸ ಕಟ್ಟಡಗಳ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಚುನಾವಣೆ ಸಂದರ್ಭದಲ್ಲಿ ಜನರನ್ನು ದಾರಿ ತಪ್ಪಿಸಲು ಈಗ ಆ ಕಾಮಗಾರಿಗಳಿಗೆ ಶಂಕುಸ್ಥಾನೆ ನಡೆಸಲು ಹೊರಟಿದ್ದಾರೆ ಎಂದು ದೂರಿದರು.
ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಜನರನ್ನು ಕರೆತರಲು ಸರ್ಕಾರಿ ಇಲಾಖೆಗಳನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೂಲಕ ಸ್ತ್ರೀಶಕ್ತಿ ಸಂಘಗಳಿಗೆ 2021-22ನೇ ಸಾಲಿನ ಸಾಲದ ಚೆಕ್‌ಗಳನ್ನು ಈಗ ವಿತರಣೆ ಮಾಡಲು ಹೊರಟಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳು ಗಮನಹರಿಸಬೇಕು. ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಂದ ಕಾರ್ಯಕ್ರಮದ ರೂಪುರೇಷೆಯ ಸಂಪೂರ್ಣ ಮಾಹಿತಿ ಪಡೆದು ನಂತರ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
48 ಮದ್ಯದಂಗಡಿಗಳ ಸ್ಥಾಪನೆಯೇ ಸಾಧನೆ:
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳಾಗಿಲ್ಲ. ಹಾಸನ ನಗರದಲ್ಲಿ ಹೊಸದಾಗಿ 48 ಮದ್ಯದಗಂಡಿಗಳನ್ನು ತೆರೆದಿರುವುದೇ ಇವರ ದೊಡ್ಡ ಸಾಧನೆ. ಅಬಕಾರಿ ಸಚಿವರೇ ಜಿಲ್ಲಾ ಉಸ್ತುವಾರಿ ಸಚಿವರಾಗಿರುವುದರಿಂದ ಜನರು ಮದ್ಯದ ಅಮಲಲ್ಲಿ ಮುಳುಗಿಸುವ ಕೆಲಸ ಮಾಡುತ್ತಿದ್ದಾರೆ. ಹೊಸ ಮದ್ಯದಂಗಡಿಗೆ ಪರವಾನಗಿ ನೀಡುವ ಸಂದರ್ಭದಲ್ಲಿ 50 ರಿಂದ 60 ಲಕ್ಷ ರೂ. ಲಂಚ ಪಡೆದಿರುವ ಆರೋಪಗಳಿವೆ. ಈ ಸಾಧನೆಯನ್ನು ಅವರು ಜನರ ಮುಂದೆ ಹೇಳಿಕೊಂಡು ಮತಯಾಚಿಸಲಿ ಎಂದು ವ್ಯಂಗ್ಯವಾಡಿದರು.