ಜಿಲ್ಲೆ

ಪೂರ್ಣ ಪ್ರಮಾಣದಲ್ಲಿ ಅನುದಾನ ವ್ಯಯಿಸಿ

ಬಳ್ಳಾರಿ : ರಾಜ್ಯ ಸರ್ಕಾರ ಪರಿಶಿಷ್ಟರ ಆರ್ಥಿಕ ಸ್ಥಿತಿ ಸುಧಾರಿಸಲು ವಿಶೇಷ ಅನುದಾನ ಮೀಸಲಿಡಲಾಗುತ್ತಿದ್ದು, ಅಧಿಕಾರಿಗಳು ಪೂರ್ಣ ಪ್ರಮಾಣದಲ್ಲಿ ವ್ಯಯಿಸಬೇಕು ಎಂದು ಐಎಸ್‌ಇಸಿ ಸಲಹೆಗಾರ ಪ್ರೊ. ವಿಜಯೇಂದ್ರ ಬಾಬು ಹೇಳಿದರು.
ನಗರದ ಜಿಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾಮಟ್ಟದ ಎಸ್‌ಸಿಪಿ ಮತ್ತು ಟಿಎಸ್ಪಿ ಪ್ರಗತಿ ಪರಿಶೀಲನೆ ಮತ್ತು ಸಂವಾದ ಸಭೆಯಲ್ಲಿ ಮಾತನಾಡಿದರು. ಪರಿಶಿಷ್ಟರ ಮುನ್ನಲೆಗೆ ತರಲು ಅಧಿಕಾರಿಗಳು ಪ್ರಾಮಾಣಿಕವಾಗಿ ಸೌಲಭ್ಯ ವಿತರಿಸಿ ಅನುದಾನ ವೆಚ್ಚ ಮಾಡಬೇಕು. ಅಧಿಕಾರಿಗಳು ತಮ್ಮ ಇಲಾಖೆಗಳಿಂದ ನೀಡುವ ವಿವಿಧ ಸೌಲಭ್ಯ ಹಾಗೂ ಉಪಕರಣಗಳ ಬಗ್ಗೆ ಸಾಕಷ್ಟು ಪ್ರಚಾರ ನೀಡಬೇಕು. ಪರಿಶಿಷ್ಟರ ಸಮುದಾಯದಲ್ಲಿ ಸಾಕ್ಷಾರತಾ ಅರಿವು ಕಡಿಮೆ. ಸೌಲಭ್ಯಗಳ ಮಾಹಿತಿ ತಲುಪುತ್ತಿಲ್ಲ . ಆದ್ದರಿಂದ, ಮನೆ ಭೇಟಿ ನೀಡುವ ಮೂಲಕ ಕ್ಷೇತ್ರ ಪ್ರಚಾರ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು. ಅರ್ಜಿಗಳನ್ನು ಆಹ್ವಾನಿಸದೇ ಫಲಾನುಭವಿಗಳನ್ನು ಆಯ್ಕೆ ಮಾಡುವುದು ಸೂಕ್ತವಲ್ಲ. ಆಯ್ಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಪಾಲಿಸಬೇಕು. ಅನುದಾನದಲ್ಲಿ 1/3 ಭಾಗ ಸಮಾಜ ಕಲ್ಯಾಣ ಇಲಾಖೆಗೆ ಹಾಗೂ 3/2 ಭಾಗ ಆಯಾ ಇಲಾಖೆಗೆ ಹಂಚಿಕೆಯಾಗುತ್ತದೆ ಎಂದರು. ಅಧಿಕಾರಿಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉಪಯೋಜನೆಯಡಿ ಅನುಷ್ಟಾನವಾಗುವ ಕಾರ್ಯಕ್ರಮಗಳನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿದಲ್ಲಿ ಶಿಸ್ತುಕ್ರಮ ಅಥವಾ ಕ್ರಿಮಿನಲ್ ಕ್ರಮಕ್ಕೆ ಒಳಪಡುತ್ತಾರೆ ಎಂದು ಎಚ್ಚರಿಕೆ ನೀಡಿದರು. ಜಿಲ್ಲಾ ಮಟ್ಟದಲ್ಲಿ ವಿವಿಧ ಇಲಾಖೆಗಳಲ್ಲಿ ಎಸ್‌ಸಿಪಿ, ಟಿಎಸ್‌ಪಿ ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು. ಇದರ ಮೇಲ್ವಿಚಾರಣೆಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮೇಲ್ವಿಚಾರಣಾ ಸಮಿತಿ ರಚಿಸಿ, ಪ್ರಗತಿ ವಿಚಾರಣೆ ನಡೆಸಬೇಕು ಎಂದು ನಿರ್ದೇಶಿಸಿದರು.