ಜಿಲ್ಲೆ

ಪೂರೈಕೆ ಕುಸಿತ, ಹೆಚ್ಚಿದ ಟೊಮ್ಯಾಟೊ ಬೆಲೆ: ಬೆಳೆಗಾರರಲ್ಲಿ ಸಂತಸ

ಚಿಕ್ಕಬಳ್ಳಾಪುರ: ಕಳೆದ 15 ದಿನಗಳ ಹಿಂದೆ ಇಳಿಕೆಯಾಗಿದ್ದ ಟೊಮ್ಯಾಟೊ ಬೆಲೆ ಹೆಚ್ಚಳವಾಗಿರುವುದು ಬೆಳೆಗಾರರಲ್ಲಿ ಕೊಂಚ ಸಂತಸ ಮೂಡಿಸಿದೆ. ಪ್ರಸ್ತುತ 15 ಕೆಜಿ ಟೊಮ್ಯಾಟೊ ಮಾರುಕಟ್ಟೆಯಲ್ಲಿ 750 ರೂ.ಗಳಿಂದ 980 ವರೆಗೆ ಮಾರಾಟವಾಗುತ್ತಿದೆ. ಇನ್ನೂ ಕಳೆದ ಕೆಲ ದಿನಗಳ ಹಿಂದೆ ದರ 250 ರೂ. ಅಸುಪಾಸಿನಲ್ಲಿತ್ತು.

ಟೊಮ್ಯಾಟೊ ಜಿಲ್ಲೆಯ ಪ್ರಮುಖ ಬೆಳೆಯಾಗಿದ್ದು, ಚಿಂತಾಮಣಿ, ಬಾಗೇಪಲ್ಲಿ ಮತ್ತು ಚಿಕ್ಕಬಳ್ಳಾಪುರ ಮಾರುಕಟ್ಟೆಯಿಂದ ಹೊರ ರಾಜ್ಯಗಳಿಗೆ ಪೂರೈಕೆಯಾಗುತ್ತದೆ. ಪ್ರತಿನಿತ್ಯ ಇಲ್ಲಿ ಲಕ್ಷಾಂತರ ರೂಪಾಯಿ ವಹಿವಾಟು ನಡೆಯುತ್ತದೆ. ರಾಜ್ಯ ಸರ್ಕಾರವು ಜಿಲ್ಲೆಗೊಂದು ಉತ್ಪನ್ನ ಯೋಜನೆಯಡಿ ಟೊಮ್ಯಾಟೊ ಆಯ್ಕೆ ಮಾಡಿಕೊಂಡಿದ್ದು, ಬೆಳೆಗಾರರಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಹಲವು ದಿನಗಳಿಂದ ಟೊಮ್ಯಾಟೊ ದರದಲ್ಲಿ ಹಾವು ಏಣಿಯಾಟದಂತೆ ಏರುಪೇರು ಕಂಡು ಬರುತ್ತಿದ್ದು, ಆಗಾಗ ಬೆಳೆಗಾರರು ದಿಢೀರ್ ಬೇಡಿಕೆ ಮತ್ತು ಬೆಲೆ ಕುಸಿತದಿಂದ ತೊಂದರೆ ಅನುಭವಿಸುತ್ತಿದ್ದಾರೆ. ಸೂಕ್ತ ಬೆಲೆ ಸಿಗದ ಹಿನ್ನೆಲೆಯಲ್ಲಿ ಕಳೆದ ಮಾರ್ಚ್ ಅಂತ್ಯದಲ್ಲಿ ಚಿಂತಾಮಣಿ ಎಪಿಎಂಸಿ ಮಾರುಕಟ್ಟೆಯಲ್ಲಿ ಆಕ್ರೋಶ ವ್ಯಕ್ತಪಡಿಸಿ, ಟೊಮ್ಯಾಟೊ ಬೀದಿಗೆ ಸುರಿದು ಪ್ರತಿಭಟಿಸಿದ್ದರು. ಸರ್ಕಾರ ಮಧ್ಯೆಪ್ರವೇಶಿಸಿ, ಅಗತ್ಯ ನೆರವು ನೀಡುವಂತೆ ಒತ್ತಾಯಿಸಿದ್ದರು. ಹಲವರು ತೋಟಗಳಲ್ಲಿಯೇ ದಿನಗಟ್ಟಲೇ ಉತ್ಪನ್ನಗಳನ್ನು ಕೊಳೆಯಲು ಬಿಟ್ಟು ಕಿಡಿಕಾರಿದ್ದರು. ಹಲವೆಡೆ ಉಚಿತವಾಗಿ ವಿತರಣೆ ಇಲ್ಲವೇ ಕಸದ ರಾಶಿಗೆ ಬಿಸಾಡಲಾಗಿತ್ತು.

ಬೇಡಿಕೆ ಹೆಚ್ಚಾಗಿರುವುದರ ನಡುವೆ ಪ್ರಸ್ತುತ ಮಾರುಕಟ್ಟೆಗೆ ಟೊಮ್ಯಾಟೊ ಕಡಿಮೆ ಪ್ರಮಾಣದಲ್ಲಿ ಪೂರೈಕೆಯಾಗುತ್ತಿದೆ. ಇದರಿಂದ ಸಹಜವಾಗಿ ಬೇಡಿಕೆ ಹೆಚ್ಚಾಗಿದೆ ಎಂಬ ಮಾತು ಕೇಳಿ ಬಂದಿದೆ. ಸಾಮಾನ್ಯವಾಗಿ ಪ್ರತಿ ವರ್ಷ ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಕಡಿಮೆ ಬೆಲೆ ನಿಗದಿಯಾಗಿರುತ್ತದೆ. ಇದರ ನಡುವೆ ಮೇನಲ್ಲಿ ಆಲಿಕಲ್ಲು ಮಳೆ ಬೀಳುತ್ತಿದೆ. ತೀವ್ರ ಮಳೆ ಮತ್ತು ತೀವ್ರ ಬಿಸಿಲಿನ ಕಾರಣದಿಂದಲೂ ಉತ್ಪನ್ನ ಪೂರೈಕೆ ಕುಸಿದಿದೆ. ಇದರಿಂದ ಬೆಲೆ ಹೆಚ್ಚಳವಾಗಿದ್ದು, ಮುಂದಿನ ಜೂನ್ ವರೆಗೂ ಒಳ್ಳೆಯ ದರ ಸಿಗುವ ನಿರೀಕ್ಷೆ ಮೂಡಿದೆ.

ಕೆಲವರಿಗೆ ಲಾಭ, ಹಲವರಿಗೆ ನಷ್ಟ: ಉತ್ಪನ್ನ ಪೂರೈಕೆ ಪ್ರಮಾಣವು ಕಡಿಮೆ ಇರುವ ಸಂದರ್ಭದಲ್ಲಿ ಕೆಲ ರೈತರಿಗೆ ಲಾಭ, ಅನೇಕರಿಗೆ ನಷ್ಟ ಎನ್ನುವ ಮಾತು ಕೇಳಿ ಬಂದಿದೆ. ಆಲಿಕಲ್ಲು ಮಳೆ, ಬಿಸಿಲಿನ ತೀವ್ರತೆ ಸೇರಿ ನಾನಾ ಕಾರಣಗಳ ಹಿನ್ನೆಲೆಯಲ್ಲಿ ಟೊಮ್ಯಾಟೊ ಬೆಳೆ ನಾಶವಾಗಿದೆ. ಇದರ ನಡುವೆ ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಟೊಮ್ಯಾಟೊ ನಾಟಿ ಮಾಡಿದ್ದ ರೈತರು ಮಾರ್ಚ್‌ನಲ್ಲಿ 15 ಕೆ.ಜಿ.ಬಾಕ್ಸ್ ಅನ್ನು 30 ರೂ.ಗೆ ಮಾರಾಟ ಮಾಡಿದ್ದು, ಈ ನಿಕೃಷ್ಟ ದರದಿಂದ ಅನೇಕರು ಟೊಮ್ಯಾಟೊ ಬೆಳೆಯಲು ಮುಂದಾಗಿಲ್ಲ. ಇದರಿಂದ ಈಗ ಅಲ್ಪ ಪ್ರಮಾಣದಲ್ಲಿ ಟೊಮ್ಯಾಟೊ ಬೆಳೆದಿರುವ ಬೆಳೆಗಾರರಿಗೆ ಒಳ್ಳೆಯ ಲಾಭ ಸಿಗುತ್ತಿದೆ. ಅನೇಕ ರೈತರು ಕೆಜಿಗೆ 10 ರಿಂದ 20 ಲಾಭ ಸಿಕ್ಕರೆ ಸಾಕು ಎಂಬ ಲೆಕ್ಕಾಚಾರ ಹಾಕಿದ್ದರು. ಆದರೆ, ನಿರೀಕ್ಷೆಗೂ ಮೀರಿ ಒಳ್ಳೆಯ ಬೆಲೆ ಸಿಗುತ್ತಿದೆ. ಇನ್ನು ಮುಂಬರುವ ದಿನಗಳಲ್ಲಿ 750ರಿಂದ 1 ಸಾವಿರಕ್ಕೆ ಬೆಲೆ ಏರಿಕೆಯಾಗಲಿದೆ. ಇದರಿಂದ ಮತ್ತಷ್ಟು ಲಾಭ ಸಿಗುವ ನಿರೀಕ್ಷೆ ಇದೆ.