ಹನೂರು: ತಾಲೂಕಿನ ಪೂಜಾರಿಭೋವಿ ದೊಡ್ಡಿಯಲ್ಲಿ ಒಂದು ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಇದರಿಂದ ಇಲ್ಲಿನ ಜನರು ಬಿಂದಿಗೆ ನೀರಿಗೂ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ರಾಮಾಪುರ ಗ್ರಾಪಂ ವ್ಯಾಪ್ತಿಯ ಈ ಗ್ರಾಮದಲ್ಲಿ 232 ಕುಟುಂಬಗಳಿದ್ದು, ಸುಮಾರು 1,200ಕ್ಕೂ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದೆ. ಇಲ್ಲಿನ ಬಹುತೇಕ ಕುಟುಂಬದವರು ಬಡವರಾಗಿದ್ದು, ಕೂಲಿಯನ್ನೇ ನಂಬಿಕೊಂಡಿದ್ದಾರೆ. ಆದರೆ ಅಗತ್ಯ ಮೂಲಸೌಕರ್ಯ ಕೊರತೆ ಇದೆ. ಹೀಗಿರುವಾಗ ಕಳೆದ ಒಂದು ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ಇದರಿಂದ ನಿವಾಸಿಗಳಲ್ಲಿ ನಿತ್ಯ ಕುಡಿಯುವ ನೀರಿನದ್ದೇ ದೊಡ್ಡ ಸಮಸ್ಯೆಯಾಗಿದೆ.
ಬೇಸಿಗೆ ಆರಂಭಕ್ಕೂ ಮುನ್ನ ಶಾಸಕ ಎಂ.ಆರ್.ಮಂಜುನಾಥ್ ಅವರು ಪಿಡಿಒಗಳ ಸಭೆ ನಡೆಸಿ ಯಾವುದೇ ಗ್ರಾಮದಲ್ಲೂ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಮುಂಜಾಗ್ರತಾ ವಹಿಸಬೇಕು ಎಂದು ಸೂಚಿಸಿದ್ದರು. ಜತೆಗೆ ತಾಪಂ ಆಡಳಿತಾಧಿಕಾರಿ ಲಕ್ಷ್ಮೀ ಅವರು ಸಹ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಕ್ರಮ ವಹಿಸುವಂತೆ ತಿಳಿಸಿದ್ದರು. ಈ ಹಿನ್ನೆಲೆ ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರಿನ ಪೂರೈಕೆ ಮಾಡಲಾಗುತ್ತಿದೆ. ಆದರೆ ಪೂಜಾರಿಭೋವಿ ದೊಡ್ಡಿ ಗ್ರಾಮದಲ್ಲಿ ಸಮರ್ಪಕ ನೀರು ಪೂರೈಕೆಯಾಗದ ಪರಿಣಾಮ ನೀರಿನ ಸಮಸ್ಯೆ ಉಲ್ಬಣಿಸಿದ್ದು, ಜನರು ಅಲೆಯುವಂತಾಗಿದೆ. ಈ ಬಗ್ಗೆ ಗ್ರಾಪಂ ಆಡಳಿತ ಸಮಸ್ಯೆಯನ್ನು ಬಗೆಹರಿಸುವಲ್ಲಿ ನಿರ್ಲಕ್ಷೃ ವಹಿಸಿದೆ.
ನೀರಿಗಾಗಿ ಕಾದು ನಿಲ್ಲಬೇಕು
ಗ್ರಾಮದಲ್ಲಿ 4 ಬೀದಿಗಳಿವೆ. ಕುಡಿಯುವ ನೀರಿಗಾಗಿ 3 ತೊಂಬೆ ನಿರ್ಮಿಸಲಾಗಿದೆ. ಜಲಜೀವನ್ ಮಿಷನ್ ಯೋಜನೆಯಡಿ ನಲ್ಲಿಗಳನ್ನು ಅಳವಡಿಸಲಾಗಿದೆ. ಆದರೆ ಕಳೆದ ತಿಂಗಳಿನಿಂದ ತೊಂಬೆಗಳಿಗೆ ನೀರು ಪೂರೈಕೆಯಾಗುತ್ತಿಲ್ಲ. ಅಲ್ಲದೇ, ನಲ್ಲಿಗಳಲ್ಲಿ ಸಮರ್ಪಕವಾಗಿ ನೀರು ಬರುತ್ತಿಲೊಲ. ವಿದ್ಯುತ್ ಇರುವಾಗ ಕೆಲ ಸಮಯದವರೆಗೆ ಮಾತ್ರ ನಲ್ಲಿಗಳಲ್ಲಿ ನೀರು ಬಿಡಲಾಗುತ್ತಿದೆ. ಆದರೆ ಜನಸಂಖ್ಯೆಗೆ ಅನುಗುಣವಾಗಿ ಸಾಕಾಗುತ್ತಿಲ್ಲ. ಇದರಿಂದ ನಲ್ಲಿಯ ಬಳಿ ಮಹಿಳೆಯರು ನೀರಿಗಾಗಿ ಕಾದು ನಿಲ್ಲಬೇಕಿದೆ. ಕಾದು ನಿಂತರೂ ಕೆಲವರಿಗೆ ಒಂದು ಬಿಂದಿಗೆ ನೀರು ಸಹ ಸಿಗುತ್ತಿಲ್ಲ. ನಿವಾಸಿಗಳು ತುಂಬಾ ತೊಂದರೆ ಅನುಭವಿಸುವಂತಾಗಿದೆ.
ಕೆಲವರು ಒಂದು ಟ್ಯಾಂಕರ್‌ಗೆ 800 ರೂ. ನೀಡಿ ನೀರನ್ನು ಪಡೆದುಕೊಂಡಿದ್ದಾರೆ. ಆದರೆ ಕೂಲಿ ಮಾಡುವ ಜನರು ನಲ್ಲಿ ನೀರನ್ನೇ ಆಶ್ರಯಿಸಿದ್ದಾರೆ. ಇತ್ತ ಗ್ರಾಮದ ಮೇಲ್ಭಾಗದ ಹೊಂಗೆಮರದ ಬೀದಿಯ ನಲ್ಲಿಗಳಿಗೆ ನೀರು ಪೂರೈಕೆಯಾಗದ ಪರಿಣಾಮ ಇಲ್ಲಿನ ನಿವಾಸಿಗಳು ಬಿಂದಿಗೂ ಹಿಡಿದು ಇತರ ಬೀದಿಗಳಿಗೆ ಅಲೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಗ್ರಾಪಂ ಆಡಳಿತ ನೀರಿನ ಸಮಸ್ಯೆಯನ್ನು ಬಗೆಹರಿಸುವ ಗೋಜಿಗೆ ಹೋಗಿಲ್ಲ.
ಗ್ರಾಮದೇವತೆ ಹಬ್ಬಕ್ಕೆ ತೊಡಕು ಗ್ರಾಮದಲ್ಲಿ ಗ್ರಾಮದೇವತೆ ಹಬ್ಬಕ್ಕೆ ಈಗಾಗಲೇ ಸಾರಲಾಗಿದ್ದು, ಇನ್ನು 12 ದಿನ ಮಾತ್ರ ಬಾಕಿ ಉಳಿದಿದೆ. ಹಾಗಾಗಿ ಮನೆ ಸ್ವಚ್ಛಗೊಳಿಸಲು, ಬಟ್ಟೆ ತೊಳೆಯಲು, ಗೃಹ ಕಾರ್ಯಗಳಿಗೆ ನೀರಿನ ಅವಶ್ಯಕತೆ ಇದೆ. ಆದರೆ ಹಬ್ಬಕ್ಕೂ ಮುನ್ನವೇ ಗೃಹ ಕಾರ್ಯಗಳಿಗಿರಲೀ ಕುಡಿಯುವುದಕ್ಕೂ ನೀರಿನ ಸಮಸ್ಯೆ ಇದೆ. ಇದರಿಂದ ಹಬ್ಬ ಆಚರಣೆಗೆ ನೀರಿನ ಸಮಸ್ಯೆ ತೊಡಕಾಗಿ ಪರಿಣಮಿಸಿದ್ದು, ತುಂಬಾ ತೊಂದರೆ ಅನುಭವಿಸುತ್ತಿದ್ದೇವೆ ಎಂದು ಗ್ರಾಮದ ಮಹಿಳೆಯರು ಅಳಲು ತೋಡಿಕೊಂಡಿದ್ದಾರೆ. ಇದೀಗ ಗ್ರಾಮದೇವತೆ ಆಗಮಿಸುತ್ತಿದ್ದು, ನೀರಿನದ್ದೇ ಒಂದು ದೊಡ್ಡ ಸಮಸ್ಯೆಯಾಗಿದೆ. ಆದ್ದರಿಂದ ಗ್ರಾಪಂ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ವಾಸ್ತವ ಅರಿತು ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಗ್ರಾಮದಲ್ಲಿನ ತೊಂಬೆ ಹಾಗೂ ನಲ್ಲಿಗಳಿಗೆ ಸಮರ್ಪಕವಾಗಿ ನೀರು ಬಿಡುತ್ತಿಲ್ಲ. ಇದರಿಂದ ಕಳೆದ ಒಂದು ತಿಂಗಳಿನಿಂದಲೂ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಿದೆ. ಇದರಿಂದ ಕೆಲಸ, ಕಾರ್ಯ ಬಿಟ್ಟು ಬಿಂದಿಗೆ ಹಿಡಿದು ನಲ್ಲಿಯ ಬಳಿ ಕಾಯಬೇಕಿದ್ದು, ನಿತ್ಯ ತೊಂದರೆಪಡುತ್ತಿದ್ದೇವೆ. ಆದ್ದರಿಂದ ಅಧಿಕಾರಿಗಳು ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು. ಧನಕೋಟಿ ಪೂಜಾರಿಬೋವಿ ದೊಡ್ಡಿ ನಿವಾಸಿ.